ಬೆಳಗಾವಿ: ನಗರದಲ್ಲಿ ಚಿರತೆ ಪ್ರತ್ಯೇಕ್ಷವಾಗಿ ಬರೋಬರಿ 24ದಿನ ಕಳೆದರೂ ಉಡಾಫೆ ಹೇಳಿಕೆ ನೀಡುತ್ತ ಕುಳಿತಿರುವ ಅರಣ್ಯ ಸಚಿವ ಉಮೇಶ ಕತ್ತಿ 24 ಗಂಟೆಯಲ್ಲಿ ಚಿರತೆ ಸೆರೆ ಹಿಡಿಯದಿದ್ದರೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಲಾಠಿ ಹಿಡಿದು ಭಾನುವಾರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 25 ದಿನಗಳಿಂದ ಚಿರತೆಯ ಹಾವಳಿಯಿಂದ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಅರಣ್ಯ ಸಚಿವರ ಜಿಲ್ಲೆಯಲ್ಲಿಯೇ ಚಿರತೆ ಪತ್ತೆ ಹಚ್ಚುವಲ್ಲಿ ಸಿಬ್ಬಂದಿಗಳು ವಿಫಲರಾಗಿದ್ದಾರೆ. ಉಮೇಶ ಕತ್ತಿ ಅವರು ಕಾಟಾಚಾರದ ಸಭೆ ನಡೆಸಿ ನಿರ್ಲಕ್ಷö್ಯ ಮಾಡುತ್ತಿದ್ದಾರೆ.
24 ಗಂಟೆಯಲ್ಲಿ ಚಿರತೆ ಸೆರೆ ಹಿಡಿಯದಿದ್ದರೇ ಸಚಿವ ಸ್ಥಾನ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಅರಣ್ಯ ಇಲಾಖೆಯ ನಿರ್ಲಕ್ಷö್ಯದಿಂದ ಈಗ ಚಿರತೆಯ ಆತಂಕದಲ್ಲಿ ಕಳೆದ 24 ದಿನಗಳಿಂದ ಶಾಲೆಗಳು ರಜೆ ಘೋಷಣೆ ಮಾಡಿರುವುದರಿಂದ ಮತ್ತೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರ ಬಗ್ಗೆ ಕಳಕಳಿ ಇಲ್ಲದ ಸಚಿವ ಉಮೇಶ ಕತ್ತಿ ವಿನಾಕಾರಣ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ವಿರುದ್ಧ ಹೇಳಿಕೆ ನೀಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ದೂರಿದ್ದರು. ಆಯಿಷಾ ಸನದಿ, ಸಲಾಂ ಬೇಟಗೇರಿ, ತಸ್ಮೀಮ್ ಮುಜಾವರ, ರೇಖಾ ಪಾಟೀಲ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.