ಬೆಳಗಾವಿ :ಕೆಲಸದ ಒತ್ತಡದ ನಡುವೆಯೂ ಪತ್ರಕರ್ತರು ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದು ಸಂತಸ. ಇದರ ಜೊತೆಗೆ ನಿದ್ದೆಗೆ ಹೆಚ್ಚಿನ ಸಮಯ ಮೀಸಲಿಡಬೇಕೆಂದು ವಿಜಯಾ ಆಸ್ಪತ್ರೆಯ ಡಾ. ವಿಜಯ ಪಾಟೀಲ ಹೇಳಿದರು.
ಶನಿವಾರ ಬೆಳಗಾವಿ ಪತ್ರಕರ್ತರ ಸಂಘದಿಂದ ಪತ್ರಿಕೆಯ ವರದಿಗಾರರು ಹಾಗೂ ಛಾಯಾಗ್ರಾಹಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಮಾತನಾಡಿದರು.
ಪತ್ರಕರ್ತರು ನಿತ್ಯ ಕೆಲಸದ ಜಂಜಾಟದ ನಡುವೆಯೂ ಆರೋಗ್ಯದ ಕಡೆ ನೆಚ್ಚಿನ ಗಮನ ಹರಿಸಿರುವುದು ಹೆಮ್ಮೆಯ ಸಂಗತಿ. ಅದರಂತೆ ಪತ್ರಕರ್ತರು ನಿದ್ದೆಗೆ ಹೆಚ್ಚಿನ ಸಮಯ ಮೀಸಲಿಡುವ ಅತ್ಯಗತ್ಯ ಇದೆ. ಅಲ್ಲದೆ ನಗರ ಪ್ರದೇಶದಲ್ಲಿ ಸಂಚಾರ ಮಾಡುವಾಗ ವಾಹನ ಬಳಕೆ ಮಾಡುವುದನ್ನು ಬಿಡಬೇಕೆಂದು ಸಲಹೆ ನೀಡಿದರು.
ಪತ್ರಕರ್ತರು ಇದೇ ರೀತಿ ಆರೋಗ್ಯ ಕಾಳಜಿ ವಹಿಸಿ. 50 ವರ್ಷ ಮೆಲ್ಪಟ್ಟವರು ಆಹಾರ ಪದ್ಧತಿಯಲ್ಲಿ ಎಣ್ಣೆ, ತುಪ್ಪ, ಸಕ್ಕರೆ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಸಕ್ಕರೆ ಬಳಸುವ ಬದಲು ಬೆಲ್ಲದ ಪದಾರ್ಥ ಉಪಯೋಗಿಸಿ. ಹೆಚ್ಚಿನ ಪ್ರಮಾಣದಲ್ಲಿ ಊಟದಲ್ಲಿ ಹಸಿ ತರಕಾರಿಗಳನ್ನು ಬಳಸುವುದು ಮರೆಯಬೇಡಿ ಎಂದರು.
ಅಡುಗೆ ಎಣ್ಣೆಯಲ್ಲಿ ಶೇಂಗಾ, ಎಣ್ಣೆ ಬಳಸಿ, ಬಿಸ್ಲೇರಿ ನೀರು ಬಳಕೆ ಮಾಡುವುದು ಸರಿಯಲ್ಲ. ಫಿಲ್ಟರ್ ನೀರು ಕುಡಿಯುವುದು ಉತ್ತಮ. ಪ್ರತಿ ನಿತ್ಯ ಪತ್ರಕರ್ತರು ನಾಲ್ಕು ಲೀಟರ್ ನೀರು ಸೇವನೆ ಮಾಡಬೇಕು. ನಿತ್ಯ ನಾಲ್ಕು ಕಿಲೋಮೀಟರ್ ನಡಿಗೆ ಕಡ್ಡಾಯ ಮಾಡಿ ಎಂದರು.
ಪತ್ರಕರ್ತರು ಬಿಸಲಿನಲ್ಲಿ ವಾಕಿಂಗ್ ಮಾಡುವುದು ಅತ್ಯುತ್ತಮ. ಅಲ್ಲದೆ, ಬೆನ್ನಿಗೆ ವಾಯಾಮ ಮಾಡುವುದರಿಂದ ಮುಂದಿನ 10. ವರ್ಷಗಳಲ್ಲಿ ಬೆನ್ನು ನೋವು ಬರುವುದು ಕಡಿಮೆಯಾಗುತ್ತದೆ. ಇದೇ ಆರೋಗ್ಯವನ್ನು ಮುಂದಿನ 10 ವರ್ಷಗಳ ಕಾಲ ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.
ಯಾವುದೇ ವಿಷಯವನ್ನು ಆಲಸ್ಯ ಮಾಡಬೇಡಿ. ಕ್ರಿಯಾಶೀಲರಾಗಿ ಕೆಲಸ ಮಾಡುವುದರ ಜೊತೆಗೆ ಹೆಚ್ಚಿಗೆ ನಡಿಗೆಯ ಮೂಲಕವೇ ಕೆಲಸ ಮಾಡಿ. ನಡಿಗೆಯಿಂದ ಸಾಕಷ್ಟು ಲಾಭವಿದೆ ಎಂದರು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ವಿಜಾಪುರ ಮಾತನಾಡಿ, ಆರೋಗ್ಯ ತಪಾಸಣೆಯ ಜೊತೆಗೆ ಪತ್ರಕರ್ತರಿಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುವ ಕೆಲಸ ಡಾ. ವಿಜಯ ಪಾಟೀಲ ಅವರು ಮಾಡಿದ್ದಾರೆ. ಕೆಲಸದ ಒತ್ತಡದಲ್ಲಿರುವ ನಮಗೆ ಮಹತ್ತರ ವಿಷಯ ತಿಳಿಸಿರುವುದು ಸಂತಸದ ಸಂಗತಿ ಎಂದರು.
ಇದಕ್ಕೂ ಮುನ್ನ ಬೆಳಗಾವಿ ಪತ್ರಿಕೆಯ ವರದಿಗಾರರು, ಛಾಯಾಗ್ರಾಹಕರಿಗೆ ರಕ್ತ ತಪಾಸಣೆ, ಇಸಿಜಿ ಸೇರಿದಂತೆ ಇನ್ಮಿತರರ ತಪಾಸಣೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿಜಯಾ ಆಸ್ಪತ್ರೆಯ ವಿರೇಶ ಹಿರೇಮಠ, ಬೆಳಗಾವಿ ಪತ್ರಕರ್ತರಾದ , ಸುರೇಶ ನೇರ್ಲಿ, ಸುನೀಲ ಪಾಟೀಲ, ಅಶೋಕ ಮುದ್ದಣ್ಣವರ, ಜಗದೀಶ್ ಹೊಂಬಾಳಿ, ರವಿ ಗೋಸಾವಿ, ಅರುಣ ಯಳ್ಳೂರಕರ, ರವಿ ಉಪ್ಪಾರ, ನಾಗರಾಜ, ರಾಜಶೇಖರಯ್ಯ ಹಿರೇಮಠ, ಪ್ರಶಾಂತ ಮಲಗಾವಿ, ಶಿವರಾಯ ಏಳುಕೋಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.