ಕನ್ನಡ ನಮ್ಮ ಹೃದಯದ ಭಾಷೆ, ಎಂದಿಗೂ ಅಳಿಯುವುದಿಲ್ಲ - ಚನ್ನರಾಜ ಹಟ್ಟಿಹೊಳಿ

  • 14 Jan 2024 , 5:26 PM
  • Belagavi
  • 100

ಬೆಳಗಾವಿ: ಕನ್ನಡ ಭಾಷೆಗೆ ಸಹಸ್ರಾರು ವರ್ಷದ ಇತಿಹಾಸವಿದ್ದು, ಅದು ಎಂದಿಗೂ ಅಳಿಯಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ಬೆಳಗಾವಿಯ ಸಹ್ಯಾದ್ರಿ ನಗರದ ಆಶ್ರಯ ಕಾಲೋನಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಭುವನೇಶ್ವರಿ ತಾಯಿಗೆ ಗೌರವ ನಮನವನ್ನು ಸಲ್ಲಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಕಣ್ಮರೆಯಾಗಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸುವುದನ್ನು ನೋಡುತ್ತಿದ್ದೇವೆ.

ಆದರೆ ಕನ್ನಡ ನಮ್ಮ ಹೃದಯದ ಭಾಷೆ. ಅದು ನಾಶವಾಗುವುದಿಲ್ಲ. ನಾಶ ಮಾಡಲು ಯಾರಿಂದಲೂ ಸಾಧ್ಯವೂ ಇಲ್ಲ ಎಂದು ಹೇಳಿದರು. ಕನ್ನಡ ಭಾಷೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಇರಬಹುದು.

ಅದು ನಮ್ಮ ವೈವಿಧ್ಯತೆ. ಎಲ್ಲವೂ ಕೇಳಲು, ಆಡಲು ಸುಂದರವೇ. ಈ ವೈವಿದ್ಯತೆಯೇ ನಮ್ಮ ಶಕ್ತಿ, ಕನ್ನಡಿಗರು ಹೃದಯವಂತರು. ಭಾಷೆಯನ್ನು ಆಸ್ವಾದಿಸುತ್ತಾರೆ, ಆರಾಧಿಸುತ್ತಾರೆ.

ಹಾಗಾಗಿ ಅದು ವರ್ಷದಿಂದ ವರ್ಷಕ್ಕೆ ಬೆಳೆಯುತ್ತದೆಯೇ ವಿನಃ ಕಳೆಯುವುದಿಲ್ಲ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು. ಸಹ್ಯಾದ್ರಿ ನಗರದ ಆಶ್ರಯ ಕಾಲೋನಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಸ್ಥಳೀಯರನ್ನು ಚನ್ನರಾಜ ಹಟ್ಟಿಹೊಳಿ ಶ್ಲಾಘಿಸಿದರು.

ಜನರ ಯಾವುದೇ ಸಮಸ್ಯೆಗೆ ತಾವು ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸದಾ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.

ಸ್ಥಳೀಯ ಮುಖಂಡರು, ಮಹಿಳೆಯರು ಸೇರಿದಂತೆ ಎಲ್ಲ ನಾಗರಿಕರು ಸಂಭ್ರಮದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read All News