ಕೊಪ್ಪಳ: ತಾಲ್ಲೂಕಿನ ಕುಣಿಕೇರಿ ಗ್ರಾಮದ ಪ್ರಮುಖ ವಾರ್ಡಿನಲ್ಲಿ ಹಲವೆಡೆ ದಿನಬಳಕೆ ನೀರು ಸರಿಯಾಗಿ ಹರಿದು ಹೋಗಲು ಸೂಕ್ತ ಚರಂಡಿ ಇಲ್ಲದೇ ಇರುವ ಕಾರಣ ರಸ್ತೆಯಲ್ಲಿಯೇ ನಿಂತು ದೊಡ್ಡ ಹೊಂಡಗಳಾಗಿ ನಿರ್ಮಾಣಗೊಂಡಿದ್ದು, ವಿಪರೀತ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿವೆ.
ಕೊಳಚೆಯಿಂದಾಗಿ ಸಾಂಕ್ರಾಮಿಕ ರೋಗ ಹರಿಡುವ ಬೀತಿಯನ್ನು ಅಲ್ಲಿಯ ನಿವಾಸಿಗರು ಎದುರಿಸುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಬಸ್ ನಿಲ್ದಾಣದಿಂದ ಆಂಜನೇಯ ದೇವಸ್ಥಾನದ ಮುಖ್ಯ ರಸ್ತೆಯ ಮೇಲೆ ಸಾಕಷ್ಟು ನೀರು ಸಂಗ್ರಹಗೊಂಡಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡೆತಡೆಯಾಗಿದೆ. ಈ ಕೊಳಚೆ ನೀರಿನಲ್ಲಿಯೇ ಮಕ್ಕಳು, ವಯೋವೃದ್ಧರು ಹಾಗೂ ಇತರರು ತಿರುಗಾಡುತ್ತಿದ್ದಾರೆ. ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಸಂಬಂಧಪಟ್ಟವರು ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ. ರಸ್ತೆಯ ಅಭಿವೃದ್ದಿಯಾಗಲಿ ಹಾಗೂ ರಸ್ತೆಯ ಪಕ್ಕದಲ್ಲಿ ಚರಂಡಿ ಇಲ್ಲದ ಕಾರಣ ದಿನಬಳಕೆ ನೀರು ಮುಂದಕ್ಕೆ ಹರಿದುಹೋಗಲು ಸಾಧ್ಯವಾಗದೇ ಇರುವುದರಿಂದ ಈ ದುರವಸ್ಥೆಗೆ ಕಾರಣವಾಗಿದೆ. ಗ್ರಾಮ ಪಂಚಾಯಿತಿಯವರು ಕೊಳಚೆ ನೀರನ್ನು ತೆರವುಗೊಳಿಸಿ ರಸ್ತೆಸುಧಾರಿಸಿ ಚರಂಡಿ ನಿರ್ಮಿಸಿಕೊಡಬೇಕು. ರೋಗ ಹರಡದಂತೆ ಸೊಳ್ಳೆ ನಿವಾರಕವನ್ನು ಸಿಂಪಡಿಸಬೇಕು ಎಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.
ವರದಿ : ರವಿಚಂದ್ರ ಬಡಿಗೇರ