ಬೆಳಗಾವಿ : ಉತ್ತರ ಕರ್ನಾಟಕ ಭಾಗದ ದೇವದುರ್ಗ, ರಾಯಚೂರು ಸೇರಿದಂತೆ ಈ ಭಾಗದ ಅನೇಕ ಕಡೆಗಳಲ್ಲಿ ಸಾಕ್ಷರತಾ ಪ್ರಮಾಣವು ಬಹಳಷ್ಟು ಕಡಿಮೆ ಇದೆ. ಇದು ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಅಕ್ಷರ ಕ್ರಾಂತಿಯಾದಲ್ಲಿ ಹೊಸ ಬದಲಾವಣೆ ಕಾಣಬಹುದಾಗಿದೆ ಎಂದು ಸದಸ್ಯರಾದ ಎಚ್.ವಿಶ್ವನಾಥ ಅವರು ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 15ರಂದು ಉತ್ತರ ಕರ್ನಾಟಕ ಅಭಿವೃದ್ಧಿಯ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಈ ಭಾಗದ ಜನರ ಸಾಕ್ಷರತಾ ಪ್ರಮಾಣ ಎಷ್ಟು? ಎಂಬುದಾಗಿ ಪ್ರಶ್ನಿಸಿಕೊಂಡೇ ನಾವು ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಸಾಕ್ಷರತೆ ಇಲ್ಲದೇ ಅಭಿವೃದ್ಧಿಯನ್ನು ನಿರೀಕ್ಷಿಸಲಾಗದು. ವ್ಯಕ್ತಿ ಸಾಕ್ಷರನಾದಾಗ ಮಾತ್ರ ಉತ್ತಮ ವಿವೇಚನೆ ಸಾಧ್ಯವಾಗುತ್ತದೆ. ಈ ಭಾಗದಲ್ಲಿ 15000 ಶಾಲಾ ಶಿಕ್ಷಕರ ಕೊರತೆ ಇದೆ ಎಂದು ತಿಳಿಸಿದರು.
ಸದಸ್ಯರಾದ ನಿರಾಣಿ ಹನುಮಂತ ರುದ್ರಪ್ಪ ಅವರು ಮಾತನಾಡಿ, ಉತ್ತರ ಕರ್ನಾಟಕವು ಅಭಿವೃದ್ಧಿ ದೃಷ್ಟಿಯಿಂದ ಅನ್ಯಾಯಕ್ಕೀಡಾಗಿದೆ. ಇಲ್ಲಿನ ಮಾನವ ಸಂಪನ್ಮೂಲ ಸದ್ಬಳಕೆಯಾಗಬೇಕು. 371(ಜೆ) ಸರಿಯಾಗಿ ಅನುಷ್ಠಾನವಾಗಬೇಕು. ಇದಕ್ಕಾಗಿ ಮೀಸಲಿಡುವ ಸಾವಿರಾರು ಕೋಟಿ ರೂ.ಗಳ ಹಣವು ಸದ್ವಿನಿಯೋಗವಾಗಬೇಕು. ಈ ಭಾಗದಲ್ಲಿ ಅಭಿವೃದ್ಧಿಯ ಅಸಮತೋಲನ ಸರಿಪಡಿಸಬೇಕು. ಈ ಭಾಗದ ಮಣ್ಣು ಮತ್ತು ನೀರು ಸಂರಕ್ಷಿಸಬೇಕು. ಈ ಭಾಗದ ನದಿಗಳ ಜೋಡಣೆ ಯೋಜನೆಗಳು ಕಾರ್ಯಾನುಷ್ಠಾನವಾಗಬೇಕು ಎಂದರು.
ಸದಸ್ಯರಾದ ಪ್ರದೀಪ್ ಶೆಟ್ಟರ್, ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಯನ್ನು ಬರೀ ಬೆಳಗಾವಿ ಅಧಿವೇಶನಕ್ಕೆ ಸೀಮಿತಗೊಳಿಸದೇ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನ ವೇಳೆಯಲ್ಲಿ ಎರಡು ದಿನಗಳ ಕಾಲ ಕಡ್ಡಾಯವಾಗಿ ಅಧಿವೇಶನವನ್ನು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಮೀಸಲಿರಿಸಬೇಕು ಎಂದು ಸಲಹೆ ಮಾಡಿದರು.
ಸದಸ್ಯರಾದ ತಿಪ್ಪೇಸ್ವಾಮಿ ಅವರು ಮಾತನಾಡಿ, ಈ ಭಾಗದಲ್ಲಿ ನನೆಗುದಿಗೆ ಬಿದ್ದ ನೀರಾವರಿ ಯೋಜನೆಗಳಿಗೆ ಮರುಚಾಲನೆ ನೀಡಬೇಕು. ಈ ಭಾಗಕ್ಕೆ ಸರ್ಕಾರವು ವಿಶೇಷ ಪ್ಯಾಕೇಜ್‌ನ್ನು ಘೋಷಿಸಿ ಅನುಷ್ಠಾನಗೊಳಿಸಬೇಕು ಎಂದರು. ಈ ಭಾಗದ ರೈತರಿಗೆ ಮಧ್ಯೆಂತರ ಪರಿಹಾರದ ಬೆಳೆವಿಮೆ ಮಂಜೂರಿ ಮಾಡಬೇಕು. ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು. ನ್ಯಾಯಾಧೀಕರಣದಿಂದ ಹಂಚಿಕೆಯಾದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.