ಕೊಪ್ಪಳ : ಗುರುವಾರ ಮಧ್ಯಾಹ್ನ ಸುರಿದ ಬಾರಿ ಮಳೆಗೆ ತಾಲ್ಲೂಕಿನ ಕೆಲ ರಸ್ತೆಗಳ ಹಾಳಾಗಿರುವುದಲ್ಲದೇ ರಸ್ತೆ ಗುಂಡಿಗಳು ಈಗ ಕೆರೆಯಂತಾಗಿವೆ ಜೊತೆಗೆ ರಸ್ತೆಗಳು ಕೆಸರುಮಯವಾಗಿದ್ದು, ರಸ್ತೆಗೆ ಸಂಚರಿಸಲು ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ.
ಕೊಪ್ಪಳ ತಾಲ್ಲೂಕಿನ ಕುಣಿಕೇರಿ-ಕರ್ಕಿಹಳ್ಳಿ, ಚಿಕ್ಕಬಗನಾಳ-ಹಿರೇಬಗನಾಳ-ಕಾಸನಕಂಡಿ, ಗೊಂಡಬಾಳ-ಹ್ಯಾಟಿ ಮುಂಡರಗಿ-ಕುಣಿಕೇರಿ-ಹಾಲವರ್ತಿ ಕೊಪ್ಪಳ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿದ್ದು, ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಶೀಘ್ರ ದುರಸ್ತಿಗೆ ಮುಂದಾಗಬೇಕಿದೆ.
ಅಧಿಕಾರಿಗಳು ಮಾತ್ರ ಕಛೇರಿಯಲ್ಲಿ ಉಳಿದಿಕೊಂಡು ಇದು ನಮಗೆ ಸಂಬಂಧವಿಲ್ಲವಂತೆ ಕಣ್ಣಿದ್ದು ಕುರುಡರಾಗಿ ಬಿಡುತ್ತಾರೆ. ಯಾಕೆಂದರೆ ಈ ಭಾಗದಲ್ಲಿ ಮಳೆ ಬಂತೆಂದರೇ ವಾಹನ ಸವಾರರ ಪರಿಸ್ಥಿತಿ ಹೇಳತೀರದಾಗಿದೆ. ಇದುವರೆಗೂ ಲೋಕೋಪಯೋಗಿ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ, ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಿಲ್ಲ ಎನ್ನುವುದು ಕಾಸನಕಂಡಿ, ಕುಣಿಕೇರಿ, ಕರ್ಕಿಹಳ್ಳಿ ಗ್ರಾಮಸ್ಥರ ಆಗ್ರಹವಾಗಿದೆ.
ರಸ್ತೆಗಳು ಮೇಲೆ ಸಂಚರಿಸುವ ವಾಹನ ಸವಾರರಿಗೆ ಮಳೆಯಿಂದಾಗಿ ರಸ್ತೆಯೇ ಕಾಣದ ಪರಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ, ತೆಗ್ಗು-ದಿನ್ನಿಯ ಜೊತೆಗೆ ಒಂದು ರೀತಿಯ ಭತ್ತದ ಗದ್ದೆಗಳಾಗಿ ಮಾರ್ಪಟ್ಟಿದ್ದವು. ಮತ್ತೊಂದೆಡೆ ಹಳ್ಳಗಳ ಮೂಲಕ ತುಂಗಭದ್ರಾ ನದಿಗೆ ಮಳೆ ನೀರು ಸಾಕಷ್ಟು ಪ್ರಮಾಣದ ನೀರು ನದಿಗೆ ಸೇರುವ ದೃಶ್ಯ ಸಾಮಾನ್ಯವಾಗಿತ್ತು.
ಈ ಭಾಗದಲ್ಲಿ ಬೃಹತ್ ಪ್ರಮಾಣದ ಕಾರ್ಖಾನೆಗಳು ಕಾರ್ಯಾರಂಭದಲ್ಲಿವೆ. ಜೊತೆಗೆ ಹಗಲು-ರಾತ್ರಿ ಎನ್ನದೇ ಸರಕು ತುಂಬಿದ ವಾಹನಗಳು ಸಾಕಷ್ಟು ಸಂಚರಿಸುವುದರಿಂದ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಕ್ಷೇತ್ರದ ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಿ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರಿಗೆ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ.
ವರದಿ : ರವಿಚಂದ್ರ ಬಡಿಗೇರ