ಕೊಪ್ಪಳ : ಪಿಎಸ್ಐ ಪರಶುರಾಮ ಸಂಶಯಾಸ್ಪದ ಸಾವಿನ ನಿಷ್ಪಕ್ಷಪಾತ ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಂಡಾಯ ಸಾಹಿತಿ.ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಸೋಮನಾಳದ ಯುವ ಪಿ.ಎಸ್. ಐ. ಪರಶುರಾಮ ಅವರು ಇತ್ತೀಚಿಗೆ ಯಾದಗಿರಿಯಲ್ಲಿ ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರು ಮತ್ತು ಪುತ್ರ ಪಂಪಾರಡ್ಡಿ ತುನ್ನೂರು ಪರ್ಸೆಂಟೇಜ್ ಕೇಳಿದ ಹಿನ್ನೆಲೆಯಲ್ಲಿ ಒತ್ತಡ ಸೃಷ್ಟಿಯಾಗಿ ಹೃದಯಾಘಾತದಿಂದ ನಿಧನವಾದದ್ದು ವಿಷಾದನೀಯ ಸಂಗತಿ.ಅವರು ಪ್ರತಿಭಾನ್ವಿತರಾಗಿದ್ದು ಏಳೆಂಟು ಸರ್ಕಾರಿ ನೌಕರಿಗಳನ್ನು ಪಡೆದುಕೊಂಡು ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡಿ ಸೇವಾನುಭವವನ್ನು ಹೊಂದಿದ್ದರು.
ಅವರು ಕೆಳವರ್ಗಕ್ಕೆ ಸೇರಿದವರಾಗಿದ್ದು ಈ ಬಗ್ಗೆ ಸರ್ಕಾರ ತಪ್ಪಿತಸ್ಥರ ಮೇಲೆ ತೀವ್ರವಾದ ಕ್ರಮವನ್ನು ಕೈಗೊಳ್ಳಬೇಕು, ಯಾದಗಿರಿಯ ಶಾಸಕರು ಮತ್ತು ಅವರ ಮಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ.
ಅವರು ಸ್ವಪಕ್ಷದವರೆಂದು ಪಕ್ಷಪಾತ ತೋರಿದ್ದೆ ಆದರೆ ಅದು ಘನ ಘೋರ ತಪ್ಪಾಗುತ್ತದೆ. ಆದ್ದರಿಂದ ಕರ್ನಾಟಕ ಸರ್ಕಾರವು ಶೀಘ್ರ ಕ್ರಮಕ್ಕೆ ಮುಂದಾಗಿ ಭವಿಷ್ಯದಲ್ಲಿ ದುರ್ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಪರಶುರಾಮ ಅವರ ಸೇವಾ ಅವಧಿಯನ್ನು ಪರಿಗಣಿಸಿ ಅವರ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ಕೊಡಬೇಕು, ಪತ್ನಿಗೆ ಸರ್ಕಾರಿ ಉದ್ಯೋಗವನ್ನು ಕೊಡಬೇಕೆಂದು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಮೂಲಕ ಒತ್ತಾಯಿಸಿದರು.
ಸಭೆಯಲ್ಲಿ ಸಂಘಟನೆಯ ಹಿರಿಯ ಮುಖಂಡರಾದ ಡಿ.ಎಚ್. ಪೂಜಾರ, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಎಸ್.ಎ.ಗಫಾರ್, ಕಾಶಪ್ಪ ಚಲವಾದಿ, ಸಂಜಯದಾಸ್ ಕೌಜಗೇರಿ, ನಿಂಗೂ ಎಸ್. ಬೆಣಕಲ್, ಬಸವರಾಜ ನರೇಗಲ್, ರಾಮಲಿಂಗಯ್ಯ ಶಾಸ್ತ್ರಿಮಠ, ಪಾಮಣ್ಣ ಕರಡೋಣಿ ಮಲ್ಲಾಪುರ ಮತ್ತು ಭೀಮಪ್ಪ ಯಲಬುರ್ಗಾ ಗಾಂಧಿನಗರ ಹಾಗೂ ಇತರರು ಇದ್ದರು.