ಗಂಗಾವತಿ: ವಿದ್ಯುತ್ ದರ ಮೂರು ಪಟ್ಟು ಏರಿಕೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನಗರದ 30ನೇ ವಾರ್ಡ್‍ನ ವಿವೇಕಾನಂದ ಮತ್ತಿತರ ಕಾಲೋನಿಯ ನಿವಾಸಿಗಳು ತಕ್ಷಣ ದರ
ಕಡಿಮೆ ಮಾಡಿ ಬಿಲ್ ಶುಲ್ಕ ಪಡೆಯಬೇಕು ಎಂದು ಅಗ್ರಹಿಸಿ ಜೆಸ್ಕಾಂ ಗಂಗಾವತಿ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ರೀಯಾಜ್
ಅಹ್ಮದ್ ಅವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ವಾರ್ಡ್‍ನ ಮುಖಂಡರಾದ ಶರಣಯ್ಯಸ್ವಾಮಿ, ಅಭಿಷೇಕ ಶಿರಿಗೇರಿ ಮತ್ತಿತರು ಜೆಸ್ಕಾಂ ಕಚೇರಿಗೆ ತೆರಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಂತರ ಶರಣಯ್ಯಸ್ವಾಮಿ ಮಾತನಾಡಿ, ಜೆಸ್ಕಾಂ ಇಲಾಖೆಯಿಂದ ಮನೆಗಳ ವಿದ್ಯುತ್ ಬಿಲ್‍ನಲ್ಲಿ ಪ್ರತಿ ತಿಂಗಳಿಗಿಂತ ಮೂರು ಪಟ್ಟು ಹೆಚ್ಚು ದರ
ನಮೂದಾಗಿದೆ.
ಏಳು ಎಂಟು ನೂರು ಬರುವ ವಿದ್ಯುತ್ ಬಿಲ್ ಎರಡು ಸಾವಿರವರೆಗೂ ಬಂದಿರುವುದು ಗ್ರಾಹಕರಿಗೆ ಆಘಾತವಾಗಿದೆ. ಏಕಾ ಏಕಿ ಈ ರೀತಿ ದರ ಏರಿಕೆ ಮಾಡಿದರೆ ಗ್ರಾಹಕರು ಬಿಲ್ ಪಾವತಿ ಮಾಡುವುದು ಹೇಗೆ. ಸರಕಾರ ಮತ್ತು ಜೆಸ್ಕಾಂ ಇಲಾಖೆ ಈ ರೀತಿ ದರವನ್ನು ಏರಿಕೆ
ಮಾಡಿ ಗ್ರಾಹಕರ ಮೇಲೆ ಹೊರೆ ಹಾಕುವುದು ಸರಿಯಲ್ಲ.
ಮಿತಿ ಮೀರಿ ಬಂದಿರುವ ದರದಿಂದಾಗಿ ನಮ್ಮ ವಾರ್ಡ್‍ನ ಯಾವು ಮನೆಯಿಂದಲೂ ಬಿಲ್ ಪಾವತಿ ಮಾಡಿಲ್ಲ. ತಕ್ಷಣ ಬಿಲ್ ದರದಲ್ಲಿ ಕಡಿತ ಮಾಡಿದರೆ ಮಾತ್ರ ನಾವು ಶುಲ್ಕ ಪಾವತಿಸುತ್ತೇವೆ. ಎಲ್ಲಾ ಗ್ರಾಹಕರು ನಿರ್ಧಾರ ಮಾಡಿದ್ದು,
ಇಲಾಖೆ ಅಧಿಕಾರಿಗಳು ಸಮಸ್ಯೆ ಪರಿಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಉಚಿತ ವಿದ್ಯುತ್ ನೀಡುವ ನೆಪದಲ್ಲಿ ಸರಕಾರ ಮೂರು ನಾಲ್ಕು ಪಟ್ಟು ಹಣ ವಸೂಲಿ ಮಾಡುವುದು ಸರಿಯಲ್ಲ. ಸರಕಾರದ ನಿರ್ಧಾರಕ್ಕೆ ಗ್ರಾಹಕರು ಬೇಸರವಾಗಿದ್ದಾರೆ ಎಂದರು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ವಾರ್ಡ್‍ನ ಪ್ರಮುಖರಾದ ವೆಂಕಟೇಶ ದಾಸನಾಳ, ಅನೀಲ ಕುಷ್ಟಗಿ, ಶ್ಯಾಮರಾವ್ ಸಿಂಗನಾಳ, ಅನೀಲ್ ಅಳವಂಡಿ ಮತ್ತಿತರು ಇದ್ದರು.