ಬೆಳಗಾವಿ :
ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಬರುವ ಡಿ.13 ರಂದು ಇಲ್ಲಿನ ಯಡಿಯೂರಪ್ಪ ಮಾರ್ಗದಲ್ಲಿ ಸರಕಾರದ ವಿರುದ್ಧ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ವಿಧಾನ ಪರಿಷತ್ತಿನ ಸದಸ್ಯ ಎನ್.ರವಿಕುಮಾರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಕ್ಕೆ ಬಾರು ಕೋಲಿನ ಏಟು ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು ಸೇರಿದಂತೆ 25 ಸಾವಿರ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಜನರು ಭಾಗವಹಿಸಲಿದ್ದಾರೆ ಎಂದರು.
ಬರ ನಿರ್ವಹಣೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ
125 ವರ್ಷಗಳ ಬಳಿಕ ಇಷ್ಟೊಂದು ದೊಡ್ಡ ಬರಗಾಲ ಎದುರಾಗಿಲ್ಲ ಎಂದು ಸರಕಾರ ಹೇಳುತ್ತದೆ. ಆದರೆ ಇಲ್ಲಿಯವರೆಗೂ 125 ಪರಿಹಾರವು ಬಿಡುಗಡೆ ಮಾಡಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೂ ಪರಿಹಾರ ಕೊಟ್ಟಿಲ್ಲ. ಆದರೆ ಅಲ್ಪಸಂಖ್ಯಾತರ ಸಲುವಾಗಿ 10 ಸಾವಿರ ಕೋಟಿ ರೂ. ಘೋಷಣೆ ಸಿಎಂ ಮಾಡಿರುವುದು ವಿಪರ್ಯಾಸದ ಸಂಗತಿ ಎಂದರು.
ರೈತರಿಗೆ ವಿದ್ಯುತ್ ಅಭಾವ ಇದೆ. ಅದನ್ನು ಸಮರ್ಪಕವಾಗಿ ಕೊಡುತ್ತಿಲ್ಲ. ಬರಗಾಲದಲ್ಲಿ ಸರಕಾರ ರೈತರ ಮೇಲೆ ಬರೆ ಹಾಕಿದೆ ಎಂದ ಅವರು, ಬೋರ್ ವೆಲ್ ಗೆ ಲಕ್ಷಾಂತರ ರೂ. ರೈತರೆ ವೆಚ್ಚ ಮಾಡಬೇಕು ಎಂದು ಬರೆ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರಕಾರ ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಇಲ್ಲಿಯವರೆಗೂ ಒಂದು ಕಿ.ಮೀ ರಸ್ತೆ ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಎಸ್ ಟಿಪಿಯ 11 ಸಾವಿರ ಕೋಟಿ ರೂ.ವನ್ನು ಮರಳಿ ಎಸ್ ಟಿಪಿಗೆ ಮರಳಿಸಬೇಕು. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೈತರ ವಿರುದ್ಧ ನಡೆದುಕೊಂಡಿರುವ ಬಗ್ಗೆಯೂ ಸದನದಲ್ಲಿಯೂ ಧ್ವನಿ ಎತ್ತಲಾಗುವುದು ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಅನಿಲ್ ಬೆನಕೆ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜೀರಲಿ, ಬಿಜೆಪಿ ಮುಖಂಡ ರವಿ ಪಾಟೀಲ ಉಪಸ್ಥಿತರಿದ್ದರು.