ಬೆಂಗಳೂರ : ಪೌಷ್ಠಿಕ ಆಹಾರ ಯೋಜನೆಯಡಿ ಅಕ್ಕಿ, ಗೋಧಿಯನ್ನು ಕೇಂದ್ರ ಸರ್ಕಾರದ ಎಫ್.ಸಿ.ಐ ಮೂಲಕ, ಹಾಲಿನ ಪುಡಿಯನ್ನು ಕೆ.ಎಂ.ಎಫ್ ಮೂಲಕ ಖರೀದಿಸಲಾಗುತ್ತಿದೆ. ಕೋಳಿಮೊಟ್ಟೆಗಳನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸ್ಥಳೀಯವಾಗಿ ಖರೀದಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಹೇಮಲತಾ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 49 ವರ್ಷ ಇತಿಹಾಸ ಹೊಂದಿರುವ ರಾಜ್ಯದ ಅಂಗನವಾಡಿಯಲ್ಲಿ ಇದುವರೆಗೂ ಅಹಿತಕರ ಘಟನೆ ವರದಿಯಾಗಿಲ್ಲ. ನಾನೇ ಖುದ್ದು ಕೆಲವೊಂದು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ಪೌಷ್ಠಿಕ ಆಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಒಂದು ಮಗುವಿಗೆ 8 ರೂಪಾಯಿಯಂತೆ ನಿಗದಿಪಡಿಸಿದೆ. ಕಳೆದ 9 ವರ್ಷಗಳಿಂದ ಈ ಮೊತ್ತವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿಲ್ಲ. ಈ ಮೊತ್ತದಲ್ಲೇ ಸರ್ಕಾರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತಿದೆ ಎಂದರು.
2017ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಸೃಷ್ಠಿ ಎಂಬ ಯೋಜನೆ ಆರಂಭಿಸಿ, ಪೌಷ್ಠಿಕ ಆಹಾರ ನೀಡುವ ಸಲುವಾಗಿ ಮಕ್ಕಳಿಗೆ ಮೊಟ್ಟೆ ನೀಡಲು ತೀರ್ಮಾನಿಸಿತು. ರಾಜ್ಯದಲ್ಲಿ 69 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ಕೆಲವೊಂದು ಕೇಂದ್ರಗಳಲ್ಲಿ ಸಮಸ್ಯೆಗಳು ಬಂದಿದ್ದು, ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.