ಬೈಲಹೊಂಗಲ: ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 193ನೇ ಪುಣ್ಯಸ್ಮರಣೆ ಅಂಗವಾಗಿ ಜ.26ರಂದು ವರ್ಷ ಪದ್ಧತಿಯಂತೆ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ವತಿಯಿಂದ ರಾಯಣ್ಣನ ಆತ್ಮಜ್ಯೋತಿ ಯಾತ್ರೆಯನ್ನು ಅದ್ಧೂರಿಯಿಂದ ನಡೆಸಲಾಗುವುದು ಎಂದು ಸಮಿತಿ ಸಂಸ್ಥಾಪಕ ಸಿ.ಕೆ.ಮೆಕ್ಕೇದ ಹೇಳಿದರು.
ಪಟ್ಟಣದ ಸಂಗಮ ಚಿತ್ರ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ರಾಯಣ್ಣನ ಆತ್ಮಜ್ಯೋತಿ ಯಾತ್ರೆ ಪೂರ್ವಭಾವಿ ಸಭೆ ನೇತೃತ್ವವಹಿಸಿ ಅವರು ಮಾತನಾಡಿದರು.
'ರಾಯಣ್ಣನ ಶೌರ್ಯ, ಸಾಹಸ, ತ್ಯಾಗ, ಬಲಿದಾನ, ದೇಶಪ್ರೇಮ, ರಾಷ್ಟ್ರಾಭಿಮಾನ ಜಾಗೃತಿಗೊಳಿಸುವ ಆತ್ಮಜ್ಯೋತಿ ಯಾತ್ರೆಗೆ ಈ ವರ್ಷ 25 ವರ್ಷ ಪೂರೈಸಲಿದೆ. ಈ ಹಿನ್ನಲೆಯಲ್ಲಿ ರಾಯಣ್ಣನ ಸಮಸ್ತ ಅಭಿಮಾನಿಗಳ ಆಶಯದಂತೆ ಫೆಬ್ರುವರಿ ಮೊದಲು ಅಥವಾ ಎರಡನೇ ವಾರದಲ್ಲಿ ರಾಜ್ಯ ಮಟ್ಟದ ಅದ್ಧೂರಿ ಕಾರ್ಯಕ್ರಮ ನಡೆಸಲಾಗುವುದು. ಈ ಕುರಿತು ಜ.28ರಂದು ಮೊತ್ತಮ್ಮೆ ಸಭೆ ಕರೆದು ಭವ್ಯ ಸಮಾರಂಭದ ರೂಪುರೇಷಗಳ ಕುರಿತು ಚರ್ಚೆಸಲಾಗುವುದು' ಎಂದರು.
ಸಮಿತಿ ಮುಖಂಡರಾದ ಈಶ್ವರ ಹೋಟಿ, ಮಹಾಂತೇಶ ತುರಮರಿ, ಕುಮಾರ ದೇಶನೂರ, ರಾಜು ಸೊಗಲ, ಬಸವರಾಜ ಕಲಾದಗಿ, ಮಾರುತಿ ಶಿರೆಗಾರ ಮಾತನಾಡಿ, 'ರಾಯಣ್ಣ ಹುತಾತ್ಮನಾದ ಸ್ಥಳ ನಂದಗಡದಿಂದ ಬೈಲಹೊಂಗಲ ಚನ್ನಮ್ಮನ ಸಮಾಧಿ ಸ್ಥಳದವರೆಗೆ ತಂದು ಅರ್ಪಿಸುವ ರಾಷ್ಟ್ರಾಭಿಮಾನದ ಜ್ಯೋತಿ ಯಾತ್ರೆಯಲ್ಲಿ ರಾಯಣ್ಣನ ಸಮಸ್ತ ಅಭಿಮಾನಿಗಳು, ಸಮಿತಿ ಸದಸ್ಯರು, ನಾಗರಿಕರು ಜಾತ್ಯಾತೀತವಾಗಿ, ರಾಜಕೀಯ ರಹಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು' ಎಂದರು.
ಶಿವಾನಂದ ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಡಾ.ಶರಣಕುಮಾರ ಅಂಗಡಿ, ಡಾ.ಸಾಗರ ಕುಲಕರ್ಣಿ, ಬಿಜೆಪಿ ಮುಖಂಡ ನಿಂಗನಗೌಡ ದೊಡ್ಡಗೌಡರ, ಸುನೀಲ ಮರಕುಂಬಿ, ಲಕ್ಷ್ಮಣ ಸೋಮನಟ್ಟಿ, ಮಹಾಂತೇಶ ಹೊಸಮನಿ, ಶಿವಾನಂದ ಕೋಲಕಾರ, ಸುಭಾಸ ತುರಮರಿ, ಮಲ್ಲಿಕಾರ್ಜುನ ವಕ್ಕುಂದಮಠ ವೇದಿಕೆಯಲ್ಲಿ ಇದ್ದರು.
ಮಹಾಂತೇಶ ತುರಮರಿ ಪ್ರಾಸ್ತಾವಿಸಿದರು. ರವಿ ಹುಲಕುಂದ ನಿರೂಪಿಸಿದರು. ಸಂತೋಷ ಹಡಪದ ವಂದಿಸಿದರು. ರಾಯಣ್ಣ ನೂರಾರು ಅಭಿಮಾನಿಗಳು, ನಾಗರಿಕರು ಇದ್ದರು.
ವರದಿ : ರವಿಕಿರಣ್ ಯಾತಗೇರಿ