ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನ ಸೌಧದ ಬಳಿ ಗೂಡ್ಸ್ ವಾಹನ ಹಾಗೂ ಸ್ಕಾರ್ಪಿಯೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಸಾಂಗ್ಲಿಯಿಂದ ಬೆಂಗಳೂರಿನ ಕಡೆಗೆ ಹೊರಟ್ಟಿದ್ದ ಗೂಡ್ಸ್ ಲಾರಿ ಹಾಗೂ ಬೆಳಗಾವಿಯಿಂದ ಅರಳಿಕಟ್ಟಿಗೆ ತೆರಳುತ್ತಿದ್ದ ಸ್ಕಾರ್ಪಿಯೋ ಕಾರ್ ಗೆ ಹಿಂದಿಕ್ಕಲು ಹೋಗಿದ್ದ ಗೂಡ್ಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಪಿಯೋ ಕಾರ್ ಗೆ ಗುದ್ದಿದ ಪರಿಣಾಮ ಸ್ಕಾರ್ಪಿಯೋ ಕಾರ್ ನಲ್ಲಿದ್ದ ಇಬ್ಬರಿಗೆ ಗಂಭೀರವಾಗಿ ಗಾಯವಾಗಿವೆ.
ಸ್ಕಾರ್ಪಿಯೋ ಕಾರ್ ಗೆ ಗುದ್ದಿದ್ದ ಗೂಡ್ಸ್ ಲಾರಿ ಚಾಲಕ ಹಾಗೂ ಕಿನ್ನರ ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಗಸ್ತು ತಿರುಗುವ ಪೊಲೀಸರು ಹಾಗೂ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಅರಳಿಕಟ್ಟಿಯ ಶಿವಾನಂದ ಮುರಕುಂಬಿಮಠ ಹಾಗೂ ಕಲ್ಲಪ್ಪ ಎಂಬುವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.