ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪಂಚಾಯತ್ ಇವರ ವತಿಯಿಂದ ಸುವರ್ಣ ಸೌಧದ ಭವ್ಯ ಮೆಟ್ಟಟಿಲುಗಳ ಮೇಲೆ ಆಯೋಜಿಸಲಾಗಿದ್ದ ‘ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ’ಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಂಪರ್ಕ ರಹಿತ, ದುರ್ಗಮ ಮತ್ತು ಗುಡ್ಡಗಾಡು ಪ್ರದೇಶಗಳ ಜನರ ಮನೆಯ ಬಾಗಿಲಲ್ಲೆ ಆರೋಗ್ಯ ಸೇವೆ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಹಿಂದೆ ಆ್ಯಂಬುಲೆನ್ಸ್ ಗಳ ಸೇವೆಗೆ 2.90 ಲಕ್ಷ ರೂ.ಗಳ ವೆಚ್ಚವಾಗುತ್ತಿತ್ತು. ಪ್ರಸ್ತುತ ಆರೋಗ್ಯ ಸೇತುವಿನ ಪ್ರತಿ ಘಟಕಕ್ಕೆ 1.60 ಲಕ್ಷ ರೂ. ವೆಚ್ಚವಾಗಲಿದ್ದು, ಪ್ರತಿ ಘಟಕದಲ್ಲಿ ವೈದ್ಯರು, ಶುಶ್ರೂಷಿಕಿಯರು, ತಂತ್ರಜ್ಞರ ಸೇವೆ ಇರಲಿದ್ದು, ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗೆ ನೆರವಾಗಲಿದೆ ಎಂದರು.
ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಸರ್ಕಾರದ ಗುರಿ
ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಜನರಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದರು.