ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ, ಶಕ್ತಿ ದೇವತೆಯ ಪೀಠ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಸೀಗೆ ಹುಣ್ಣಿಮೆ ಪ್ರಯುಕ್ತ ಗುರುವಾರ ಲಕ್ಷಾಂತರ ಭಕ್ತರು ಆಗಮಿಸಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ಜನ ಸಂಚಾರಕ್ಕೆ ತೊಂದರೆಯಾಗಿತ್ತು.
ಹುಲಿಗಿ - ಹಿಟ್ನಾಳ ಮಾರ್ಗ ಮಧ್ಯೆ ವಾಹನ ದಟ್ಟಣೆ ಉಂಟಾಗಿ ಕೆಲ ಹೊತ್ತು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗುರುವಾರ ಸೀಗೆ ಹುಣ್ಣಿಮೆಯ ನಿಮಿತ್ಯ ಲಕ್ಷಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.
ರಾಜ್ಯದಲ್ಲಿ ಕೆಲವು ಭಾಗದಲ್ಲಿ ಬರ ಕಾಣಿಸಿಕೊಂಡಿದ್ದರೂ ಗ್ರಾಮೀಣ ಭಾಗದ ಭಕ್ತರ ಭಕ್ತಿಗೆ ಬರವಿಲ್ಲ. ಸೀಗೆ ಹುಣ್ಣಿಮೆ ಅಂಗವಾಗಿ ಬುಧವಾರದಿಂದಲೇ ಭಕ್ತರ ಹರಿವು ಕಂಡು ಬಂತು.
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಪಕ್ಕದ ರಾಜ್ಯದಿಂದಲೂ ಭಕ್ತರು ಬರುವುದು ವಾಡಿಕೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಚಲಿತ ಇರುವ ಸೀಗೆ ಹುಣ್ಣಿಮೆ ದೇವಿಯ ಭಕ್ತರಿಗೆ ಶ್ರೇಷ್ಠ ಹುಣ್ಣಿಮೆ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಾಗಿ ಗ್ರಾಮೀಣ ಭಾಗದಿಂದ ಕುಟುಂಬ ಸಮೇತ ಬಂದ ಲಕ್ಷಾಂತರ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಕೈಗೊಂಡು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ವಿವಿಧ ಹೂವುಗಳಿಂದ ಅಲಂಕೃತವಾದ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು.
ಸಾರಿಗೆ ಸಮಸ್ಯೆ: ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ಮತ್ತು ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಪ್ರತಿ ಬಾರಿ ಭಕ್ತರು ಸಾರಿಗೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಗಂಗಾವತಿ, ಕುಷ್ಟಗಿ ಮತ್ತು ಕೊಪ್ಪಳ ಭಾಗದಿಂದ ಬರುವ ಬಸ್ಸುಗಳನ್ನು 2 ಕಿ.ಮೀ.ಅಂತರದಲ್ಲಿ ನಿಲ್ಲಿಸಲಾಗುತ್ತದೆ. ಅಲ್ಲಿಂದ ಭಕ್ತರು ಮಕ್ಕಳು ಮತ್ತು ಚೀಲಗಳನ್ನು ಹೊತ್ತು ಬರುವುದು ಸಾಮಾನ್ಯವಾಗಿದೆ. ವೃದ್ಧರು ನಡೆಯಲು ಹರಸಾಹಸ ಪಡುತ್ತಾರೆ.
ಸಾರಿಗೆ ಸಂಸ್ಥೆಯ ಬಸ್ಸುಗಳ ಕೊರತೆಯ ಕಾರಣ ಬರುವ ಒಂದು, ಎರಡು ಬಸ್ಸಿಗೆ ನೂರಾರು ಜನ ಮುಗಿ ಬೀಳುತ್ತಾರೆ. ಸೂಕ್ತ ಬಸ್ ನಿಲ್ದಾಣ ವ್ಯವಸ್ಥೆ ಇಲ್ಲದ ಕಾರಣ ಮುಖ್ಯರಸ್ತೆ ಮತ್ತು ರಸ್ತೆ ವಿಭಜಕದ ಮೇಲೆ ಭಕ್ತರು ಕುಳಿತು ಬಸ್ಸಿಗಾಗಿ ಕಾಯುತ್ತಾರೆ. ಕೆಲವು ಭಕ್ತರು ತಮ್ಮ ಸ್ವಂತ ಲಘು ವಾಹನ, ದ್ವಿಚಕ್ರ ವಾಹನದಲ್ಲಿ ಕುಟುಂಬ ಸಮೇತ ಬರುವುದು ವಾಡಿಕೆ.
ಶೌಚಾಲಯ ಕೊರತೆ: ಹುಲಿಗಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ ಬಸ್ಸುಗಳನ್ನು ನಿಲ್ಲಿಸಲಾಗುತ್ತದೆ. ಬಸ್ಸಿಗಾಗಿ ಕಾಯುವ ಭಕ್ತರು ಶಾಲೆ ಮತ್ತು ಆಸ್ಪತ್ರೆಯ ಆವರಣವನ್ನೇ ಬಯಲು ಶೌಚಾಲಯವಾಗಿ ಬಳಸಿಕೊಳ್ಳುತ್ತಾರೆ. ರಾಷ್ಟ್ರೀಯ ಹೆದ್ದಾರಿಯ ಹುಲಿಗಿ ಕ್ರಾಸ್ ನಲ್ಲಿ ಹಿಳಿಯುವ ಭಕ್ತರಿಗೆ ಬಸ್ ನಿಲ್ದಾಣ, ಶೌಚಾಲಯ ಸೌಕರ್ಯ ಇಲ್ಲ. ಇಲ್ಲಿ ಶೌಚಕ್ಕೆ ತೋಟಗಾರಿಕೆ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಯ ಆವರಣವನ್ನು ಬಯಲು ಶೌಚಾಲಯವಾಗಿ ಬಳಸಿಕೊಳ್ಳುತ್ತಾರೆ. ಕೋಟ್ಯಂತರ ಆದಾಯ ಇರುವ ದೇವಸ್ಥಾನಕ್ಕೆ ಬರುವ ಭಕ್ತರು ನಿರಾಶ್ರಿತರಂತೆ ಕಾಣುತ್ತಾರೆ.
ಶಕ್ತಿ ಯೋಜನೆಯ ಕೊಡುಗೆ ರಾಜ್ಯ ಸರ್ಕಾರದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಪರಿಣಾಮದಿಂದ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅಂಜನಾದ್ರಿ ಪರ್ವತಕ್ಕೆ ಬಂದ ಕೆಲವು ಭಕ್ತರು ಪಾದಯಾತ್ರೆ ಮೂಲಕ ಹುಲಿಗಿ ದೇವಸ್ಥಾನಕ್ಕೆ ಬಂದರು. ದೇವಿಯ ದರ್ಶನದ ನಂತರ ಭಕ್ತರು ಬಳೆ ಹಾಗೂ ಆಟಿಕೆ ಸಾಮಾನುಗಳನ್ನು ಖರೀದಿಸಿ ಸಂಭ್ರಮಿಸಿದರು.
ವರದಿ : ರವಿಚಂದ್ರ ಬಡಿಗೇರ