ಬೆಳಗಾವಿ: "ಶರಣರಲ್ಲಿ ಬಸವಣ್ಣವರಷ್ಟೇ ಪ್ರಮುಖರಾಗಿದ್ದವರು ಶ್ರೀ ಶಿವಯೋಗಿ ಸಿದ್ದರಾಮೇಶ್ವರರು. ಸಮಾಜದಲ್ಲಿ ಸತ್ಯ, ಶುದ್ಧ ಕಾಯಕದಲ್ಲಿ ತೊಡಗಬೇಕು ಎಂದು ಕರೆ ನೀಡಿದ ಅವರು ಕಾಯಕದ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರು" ಎಂದು ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕರಾದ ಡಾ.ಸರಸ್ವತಿದೇವಿ ಎಸ್ ಭಗವತಿ ಹೇಳಿದರು.
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಹಾಗೂ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಅವರೊಬ್ಬ ಪವಾಡ ಪುರುಷ, ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು. ಜನರು ಯಾವಾಗಲೂ ಸೋಮಾರಿತನದಿಂದ ಇರಬಾರದು. ಸದಾಕ್ರಿಯಾಶೀಲರಾಗಿರಬೇಕು, ಲೋಕದಹಿತಕ್ಕಾಗಿ ಶ್ರಮಿಸಬೇಕು ಎಂಬ ವಿಚಾರಧಾರೆಯನ್ನು ಸಮಾಜಕ್ಕೆ ಬೋಧಿಸಿದರು.
ಹಾಲು ಇರುವಾಗಲೇ ಹಬ್ಬ ಮಾಡಬೇಕು ಎನ್ನುವಂತೆ ಶಕ್ತಿ ಇರುವಾಗಲೇ ಇನ್ನೊಬ್ಬರಿಗೆ ಸಹಾಯ ಮಾಡಬೇಕು, ನಾವು ಮಾಡುವ ಕೆಲಸವು ಸಮಾಜದ ಇತರರಿಗೆ ಸಹಾಯ ಮಾಡುವಂತಹದ್ದಾಗಬೇಕು ಎಂಬುದು ಸಿದ್ಧರಾಮೇಶ್ವರರ ನಿಲುವಾಗಿತ್ತು ಎಂದರು.
ವಿದ್ಯೆ ಸಾಧಕನ ಸ್ವತ್ತು ಸೋಮಾರಿ ಸ್ವತ್ತಲ್ಲ; ಎಂದು ಡಾ.ಸರಸ್ವತಿದೇವಿ ಎಸ್ ಭಗವತಿ ಅವರು, ಸಿದ್ಧರಾಮೇಶ್ವರರ ವಿಚಾರಧಾರೆಗಳನ್ನು ಜನರ ಮನ ಮುಟ್ಟುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಭೋವಿ ವಡ್ಡರ ಸಮಾಜ ಅಧ್ಯಕ್ಷರಾದ ಕೆ.ಎಸ್.ಮಮದಾಪುರ, ಭೋವಿ ಸಮಾಜದ ಕಾರ್ಯದರ್ಶಿ ಶಂಕರ ಹಾದಿಮನಿ ಹಾದಿಮನಿ, ಎಲ್.ಜಿ.ಗಾಡಿವಡ್ಡರ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು