ಬೆಂಗಳೂರು: ಇಸ್ರೋ ಸಾಧನೆಯ ಬಗ್ಗೆ ದೇಶ ಸದಾ ಹೆಮ್ಮೆ ಪಡುತ್ತದೆ. ಆದರೆ, ಈಗ ನಿಮ್ಮ ಸಾಧನೆ ಏನೆಂದು ಹೇಳಿ ಎಂದು ಪ್ರಧಾನಿ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇನ್ನು ‘ಮನ್ ಕೀ ಬಾತ್’ ಸಾಕು ಮಾಡಿ, ‘ಕಾಮ್ ಕೀ ಬಾತ್’ ಹೇಳಿ. ಒಂಭತ್ತು ವರ್ಷ ದೇಶವನ್ನಾಳಿರುವ ನೀವು ದೇಶಕ್ಕೆ ನೀಡಿದ ಕೊಡುಗೆಯಾದರೂ ಏನು? ಮಾಡಿರುವ ಸಾಧನೆಯಾದರೂ ಏನೆಂದು ಹೇಳಿ.
ನೋಟು ರದ್ದತಿ, ನಿರುದ್ಯೋಗದ ಹೆಚ್ಚಳ, ಉದ್ಯಮಿಗಳ ವಂಚನೆಗೆ ನೆರವು, ಕೋಮುದ್ವೇಷ ಮತ್ತು ಜನಾಂಗೀಯ ಹಿಂಸಾಚಾರಗಳಿಗೆ ಕುಮ್ಮಕ್ಕು, ಶತ್ರು ದೇಶ ನಮ್ಮ ನೆಲವನ್ನು ಆಕ್ರಮಿಸುತ್ತಿದ್ದರೂ ಬಾಯಿ ಬಿಡಲಾರದ ಹೇಡಿತನ- ಯಾವುದು ನಿಮ್ಮ ಸಾಧನೆ? ಹೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪುಕ್ಕಟೆ ಪ್ರಚಾರ ಪಡೆಯುವುದು, ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವುದು, ಮತ್ತೊಬ್ಬರ ಸಾಧನೆಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವುದು, ಕೋಮು ವಿಷವನ್ನು ಸಮಾಜದಲ್ಲಿ ಸದಾಕಾಲ ಬಿತ್ತುವುದು, ದಿಟ್ಟ ಪ್ರಶ್ನೆಗಳನ್ನು ಕೇಳಿದಾಗ ಜಾಗ ಖಾಲಿ ಮಾಡುವುದು ಇವೆಲ್ಲಾ ಯಾರ ಗುಣಗಳು ಎನ್ನುವುದನ್ನು ದೇಶದ ಜನತೆ ಈ ಒಂಬತ್ತು ವರ್ಷಗಳಲ್ಲಿ ಚೆನ್ನಾಗಿ ಅರಿತಿದ್ದಾರೆ. ಇನ್ನು ನಿಮ್ಮ ಈ ಆಟಗಳು ನಡೆಯವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.