ಸರ್ಕಾರದಿಂದ ಇಂದಿರಾ ಕ್ಯಾಂಟೀನಗಳಿಗೆ ಬೀಗ ಸರಣಿ ಟ್ವೀಟಗಳ ಮೂಲಕ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ

  • Krishna Shinde
  • 14 Jan 2024 , 10:15 PM
  • Bengaluru
  • 137

ಇಂದಿರಾ ಕ್ಯಾಂಟೀನ್ ಗಳನ್ನು ಮೊದಲ ದಿನದಿಂದಲೇ ವಿರೋಧಿಸುತ್ತ ಬಂದಿದ್ದ ಬಿಜೆಪಿ ಕರ್ನಾಟಕ ಈಗ ಅವುಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿರುವುದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ರಾಕ್ಷಸಿ ಕೃತ್ಯ ,ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾದೀತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಬೇರೆ ಊರುಗಳಿಂದ ನಗರ-ಪಟ್ಟಣಕ್ಕೆ ಬಂದವರ ಹಸಿದ ಹೊಟ್ಟೆ ತಣಿಸಲು ನಮ್ಮ ಸರ್ಕಾರ ರಾಜ್ಯಾದ್ಯಂತ 400 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಿತ್ತು. ಜನರಿಗೆ ಕೈಗೆಟಕುವ ದರದಲ್ಲಿ ಇವು ಮೂರು ಹೊತ್ತು ಆಹಾರ ನೀಡುತ್ತಿದ್ದವು. 

ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 195 ಕ್ಯಾಂಟೀನ್ ಪ್ರಾರಂಭಿಸಿದ್ದೆವು. ಇದರ ಜೊತೆಗೆ 25 ಮೊಬೈಲ್ ಕ್ಯಾಂಟೀನ್ ಗಳನ್ನೂ ತೆರೆಯಲಾಗಿತ್ತು. 2017-18ರ ಬಜೆಟ್ ನಲ್ಲಿಯೇ ಇದಕ್ಕಾಗಿ 145 ಕೋಟಿ ರೂಪಾಯಿ ಒದಗಿಸಿದ್ದೆ.
ಇಂಥಾ ಜನಪರ ಕಾರ್ಯಕ್ರಮದ ತಲೆಯ ಮೇಲೆ ಚಪ್ಪಡಿ ಎಳೆಯುವ ದುಷ್ಟಬುದ್ದಿ ನಿಮಗೆ ಯಾಕೆ ಬಂತು ಬೊಮ್ಮಾಯಿ ಅವರೇ?  ಎಂದು ಸಿದ್ದರಾಮಯ್ಯನವರು ಸಿಎಂ ಬೊಮ್ಮಾಯಿವರಿಗೆ ಪ್ರಶ್ನೆ ಮಾಡಿದ್ದಾರೆ.


ಕಳಪೆ ಗುಣಮಟ್ಟದ ಆಹಾರ ನೀಡಿ, ಸ್ವಚ್ಚತೆಯನ್ನು ಕಾಪಾಡದೆ ಗಲೀಜು ಮಾಡಿ, ಗುತ್ತಿಗೆದಾರರ ಬಿಲ್ ಬಾಕಿ ಇಟ್ಟುಕೊಂಡು, ಹೀಗೆ ನಾನಾ ರೀತಿಯ ಹುನ್ನಾರದ ಮೂಲಕ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಲಾಗುತ್ತಿದೆ. ಬಡವರನ್ನು ಕಂಡರೆ ಯಾಕಿಷ್ಟು ಹೊಟ್ಟೆಯುರಿ? ಎಂದು ಗುಡುಗಿದ್ದಾರೆ.

ನಮ್ಮ ಕಾಲದ ಕ್ಯಾಂಟೀನ್ ಗಳ ಆಹಾರದ ಗುಣಮಟ್ಟ ಮತ್ತು ಸ್ವಚ್ಚತೆಯನ್ನು ನೋಡಿ ಬಡವರು ಮಾತ್ರವಲ್ಲ, ಶ್ರೀಮಂತರು ಕೂಡಾ ಕ್ಯಾಂಟೀನ್ ಗೆ ಬರುತ್ತಿದ್ದರು.
ಈಗ ಬಡವರನ್ನು ಕೂಡಾ ಕ್ಯಾಂಟೀನ್ ಗಳಿಂದ ದೂರ ಓಡಿಸಲಾಗುತ್ತಿದೆ,ಈಗಾಗಲೇ 50 ಕ್ಕೂ ಹೆಚ್ಚು ಕ್ಯಾಂಟೀನ್ ಗಳನ್ನು ಗಿರಾಕಿಗಳಿಲ್ಲ ಎನ್ನುವ ಕಾರಣ ನೀಡಿ ಮುಚ್ಚಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 35 ಕ್ಯಾಂಟೀನ್ ಗಳನ್ನು ಮುಚ್ಚಲು ನಿರ್ಧರಿಸಲಾಗಿದೆಯಂತೆ.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿದೆ ಎನ್ನುವ ಏಕೈಕ ಕಾರಣಕ್ಕೆ ಎಲ್ಲಾ ಕ್ಯಾಂಟೀನ್ ಗಳನ್ನೇ ಬಂದ್ ಮಾಡುವುದು ಅಕ್ಷಮ್ಯ ಎಂದು ಸಿದ್ದು ಕಳವಳ ವ್ಯಕ್ತ ಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಅಮ್ಮ ಕ್ಯಾಂಟೀನ್ ಗಳನ್ನು ಸ್ಥಾಪಿಸಿದ್ದರು. ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಕ್ಯಾಂಟೀನ್ ಗಳನ್ನು ಇನ್ನಷ್ಟು ಸುಧಾರಿಸಿ ವಿಸ್ತರಿಸಲಾಗುತ್ತಿದೆ. ಆದರೆ ಇಲ್ಲಿ ಅವುಗಳು ಕಾಂಗ್ರೆಸ್‌ನ ಯೋಜನೆ ಎನ್ನುವ ಕಾರಣಕ್ಕೆ ಮುಚ್ಚುತ್ತಿದೆ.ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಜಿಲ್ಲಾ ಕೇಂದ್ರಗಳಲ್ಲಿ ಮೂರು ಮತ್ತು ಪ್ರತಿ ತಾಲೂಕು ಕೇಂದ್ರದಲ್ಲಿ ಒಂದು ಹೀಗೆ 300ಕ್ಕಿಂತಲೂ ಹೆಚ್ಚು ‘ಮುಖ್ಯಮಂತ್ರಿ ಕ್ಯಾಂಟೀನ್  ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.

ಹೊಸ ಕ್ಯಾಂಟೀನ್ ತೆರೆಯುವುದು ಬಿಡಿ, ಹಳೆಯ ಕ್ಯಾಂಟೀನ್ ಗಳನ್ನು ಕೂಡಾ ಮುಚ್ಚಿ ಸರ್ಕಾರ ಬಡವರ ಹೊಟ್ಟೆಮೇಲೆ ಹೊಡೆಯಲು ಹೊರಟಿದೆ.40% ಕಮಿಷನ್ ದಂಧೆಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡುವವರಿಗೆ ಬಡವರ ಹಸಿವು ನೀಗಿಸಲು ನೂರಿನ್ನೂರು ಕೋಟಿ ಖರ್ಚು ಮಾಡಲಾಗದ್ದು ದುರಂತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Read All News