ಬೆಳಗಾವಿ: ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿಯನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು.
ಬೆಳಗ್ಗೆ ವೀರಭದ್ರೇಶ್ವರ ಮಹಾಸ್ವಾಮಿಯ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಜಂಗಮ ಗಣಂಗಳಿಗೆ ಪ್ರಸಾದ ವಿನಿಯೋಗ, ಜಂಗಮ ದಂಪತಿಗಳಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ವೀರಭದ್ರೇಶ್ವರ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶ್ವದಲ್ಲೇ ವೀರಶೈವ ಧರ್ಮದ ಮೂಲ ಪುರುಷ ವೀರಭದ್ರ ಮಹಾಸ್ವಾಮಿಯ ಹೆಚ್ಚು ದೇವಸ್ಥಾನಗಳಿವೆ. ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ 84ಕ್ಕೂ ಅಧಿಕ ದೇವಸ್ಥಾನಗಳು ಕಾರ್ಯವನ್ನು ನಿರ್ವಹಿಸಿ ಧಾರ್ಮಿಕ ವಾತಾವರಣವನ್ನು ನಿರ್ಮಿಸಿದ್ದು ಇತಿಹಾಸವಾಗಿದೆ ಎಂದರು.
ಹನುಮಂತನಿಗೆ ಲಿಂಗ ಧಾರಣೆಮಾಡಿದವನು ವೀರಭದ್ರ ಮಹಾಸ್ವಾಮಿ. ವೀರಭದ್ರ ಮಹಾಸ್ವಾಮಿ ಎಲ್ಲರ ಶೃದ್ಧೆಯ ದೇವರು. ಈಗ ಯುವಕರಿಗೆ ಸ್ಪೂರ್ತಿಯ ಚೇತರಾಗಿ ನಿಂತಿರುವುದು ಸಂತಸದ ಸಂಗತಿ. ವೀರಭದ್ರೇಶ್ವರ ಜಯಂತಿ ಮಹೋತ್ಸವವನ್ನು ಪ್ರಸಾರ ಮಾಡುವಲ್ಲಿ ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕನವಾಡಿ ಅವರು ಜಯಂತಿ ಉತ್ಸವ ನಡೆಯಲು ನೇತೃತ್ವ ವಹಿಸಿಕೊಂಡಿರುವುದು ಅಭಿಮಾನದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಕಟಕೋಳ ಎಂ ಚಂದರಗಿಯ ರೇಣುಕ ಗಡದೇಶ್ವರ ದೇವರು ವೀರಭದ್ರ ಮಹಾಸ್ವಾಮೀಯ ಪೂಜೆಗೆ ಚಾಲನೆ ನೀಡಿದರು. ಗೋಕಾಕದ ಯೋಗಿ ಬ್ರಹ್ಮಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಹುಕ್ಕೇರಿ ಹಿರೇಮಠಶ್ ಗುರುಕುಲ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ ನಿಶಾಂತ ಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.
ಉಗರಕೋಡದ ಹಿರೇಮಠದ ಶ್ರೀ ಮಹಾಂತೇಶ ಶಾಸ್ತ್ರೀಗಳು ಪ್ರಾತಃ ಕಾಲದಲ್ಲಿ ಎದ್ದು ಗಂಗಾಪೂಜೆ ನೆರವೆರಿಸಿದರು. ಚಿಕ್ಕೋಡಿಯ ಮಹಾಂತ ಶಾಸ್ತ್ರೀಗಳು, ಪ್ರಜ್ವಲ ಶಾಸ್ತ್ರೀಗಳು, ಅನಿಲ್ ಶಾಸ್ತ್ರೀಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಣೆಬೆನ್ನೂರಿನ ಚೇತನಕುಮಾರ ಶಾಸ್ತ್ರೀಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.