ಗಂಗಾವತಿ : ರಾಜ್ಯ ಪಠ್ಯಪುಸ್ತಕಗಳನ್ನು ಆಳುವ ಸರಕಾರಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ಪರಿಷ್ಕರಣೆ ಮಾಡಿ ನಾಡಿನ ಮೂಲ ಇತಿಹಾಸವನ್ನೇ ಮರೆ ಮಾಚುವ ಕೆಲಸ ಮಾಡುತ್ತಿವೆ.ಇದರಿಂದ ನಾಡಿನ ಚರಿತ್ರೆ ಮಕ್ಕಳ ಮನಸ್ಸಿನಿಂದ ಮರೆಯಾಗಿ ನಾಡಿನ ವೀರ ಪರಂಪರೆಗೆ ಧಕ್ಕೆ ಯಾಗುತ್ತಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಆರೋಪಿಸಿದರು.
ಹೆಮಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ಬಸವಾ ಪಟ್ಟಣ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕದ ಇತಿಹಾಸ ಸಾರುವ ಪಠ್ಯಗಳು ಇತ್ತಿಚೀನ ದಿನಗಳಲ್ಲಿ ಪಠ್ಯಗಳಾಗಿ ಬರುತ್ತಿಲ್ಲ.ಪಠ್ಯಪುಸ್ತಕಗಳ ಪರಿಷ್ಕರಣೆಯ ಹೆಸರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ಕಗಳನ್ನೇ ಸರಕಾರಗಳು ಹಾಳು ಮಾಡುತ್ತಿವೆ ಎಂದು ಆರೋಪಿಸಿದರು.
ಇವತ್ತಿನ ಮಕ್ಕಳಿಗೆ ಮದಕರಿ ನಾಯಕ ಯಾರು ಎಂದು ಕೇಳಿದರೆ ಚಿತ್ರನಟ ಸುದೀಪ್ ಹೆಸರು,ಸಂಗೊಳ್ಳಿ ರಾಯಣ್ಣ ಎಂದು ಕೇಳಿದರೆ ದರ್ಶನ ಹೆಸರು ಹೇಳುವಷ್ಟರ ಮಟ್ಟಿಗೆ ಮೂಲ ಇತಿಹಾಸದಿಂದ ಮಕ್ಕಳನ್ನು ದೂರ ಇಡುವ ಕೆಲಸ ಆಗುತ್ತಿದೆ ಎಂದರು. ಕರ್ನಾಟಕ ಇತಿಹಾಸ ಹೇಡಿಗಳ ಇತಿಹಾಸ ಅಲ್ಲ.ಅದು ಗಂಡಸರ ಕಥೆ ಅವುಗಳನ್ನು ಬೋಧಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಮನೋಹರ ಗೌಡ ಮಾತನಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರು ಕ್ಷೇತ್ರದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸ್ವಂತ ಹಣದಲ್ಲಿ ಸ್ಮಾರ್ಟ ಕ್ಲಾಸ್ ಯೋಜನೆ ರೂಪಿಸಿದ್ದಾರೆ ಶೀಘ್ರದಲ್ಲೇ ಎಲ್ಲಾ ಶಾಲೆಗಳಲ್ಲಿ ಆ ಯೋಜನೆ ಅನುಷ್ಠಾನ ಗೊಳಿಸಲಾಗುವುದು ಎಂದರು.
ಕ್ರೀಡೆಗಳು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದಲ್ಲದೆ ಅವರನ್ನು ಆರೋಗ್ಯವಂತರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಚಿಕ್ಕ ಬೆಣಕಲ್ಲಿನ ಯುವ ನಾಯಕರು,KRPP ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಬೆಟ್ಟಪ್ಪ ಹುರಕಡ್ಲಿ ಅವರು ಮಾತನಾಡಿ ಹೆಮಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುಣ ಮಟ್ಟದ ಶಿಕ್ಷಣದ ಜೊತೆ ಜೊತೆ ನೈಸರ್ಗಿಕವಾದ ಆರೋಗ್ಯಕರವಾದ ಪರಿಸರ ಇರುವುದು ವಿದ್ಯಾರ್ಥಿಗಳ ಪುಣ್ಯ ಎಂದರು.
ಇಲ್ಲಿನ ಶಿಕ್ಷಕರು ಮಕ್ಕಳನ್ನು ಬೌದ್ಧಿಕವಾಗಿ ಅಷ್ಟೇ ಅಲ್ಲ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ದೈಹಿಕವಾಗಿಯೂ ಬಲಿಷ್ಠರನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಈ ರೀತಿಯ ಕ್ರಿಡಾಕೂಟಗಳಿಗೆ ನಮ್ಮ ಹೋಬಳಿ ಭಾಗದಲ್ಲಿ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡುವುದರ ಮೂಲಕ ಕ್ರಿಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತೇವೆ ಎಂದರು.
ಈ ವಲಯ ಮಟ್ಟದ ಕ್ರಿಡಾಕೂಟ ವಿಜೇತ ತಂಡಗಳಿಗೆ ಜನಪ್ರಿಯ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರಿಂದ ಬಹುಮಾನದ ರೂಪದಲ್ಲಿ 51,000 ಸಾವಿರ ದೇಣಿಗೆ ನೀಡುವುದಾಗಿ ಇದೇ ಸಂದರ್ಭದಲ್ಲಿ ಬೆಟ್ಟಪ್ಪ ಘೋಷಿಸಿದರು.
ಪ್ರಾಚಾರ್ಯರಾದ ರವಿ ಕುಮಾರ್,ಚಿಕ್ಕ ಬೆಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಮೂರ್ತಿ ಯಾದವ,ಜಿಲ್ಲಾಧ್ಯಕ್ಷರಾದ ಮನೋಹರ ಗೌಡ,ಜಿಲ್ಲಾ ಪ್ರಧಾನಕಾರ್ಯದರ್ಶಿ ಬೆಟ್ಟಪ್ಪ ಹುರಕಡ್ಲಿ,ಯುವ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ರಾಜೇಶ ರೆಡ್ಡಿ,ಗ್ರಾಮಿಣ ಘಟಕದ ಉಪಾಧ್ಯಕ್ಷ ಶಿವಾನಂದ ಗೌಡ ಸೇರಿದಂತೆ,ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು,ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.