ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ತೆರಿಗೆ ಹೆಚ್ಚಳದ ವಿಷಯ ರಾಜಕೀಯ ತೀರುವು ಪಡೆದುಕೊಂಡಿದ್ದು ಸ್ವಲ್ಪ ಯಾಮಾರಿದರೂ ಸೂಪರ್ ಸೀಡ್ ಗ್ಯಾರಂಟಿ ಎನ್ನುವ ಆತಂಕ ಪಾಲಿಕೆಯ ನಗರ ಸೇವಕರಲ್ಲಿ ಕಾಡುತ್ತಿದೆ.
ಪಾಲಿಕೆಯಲ್ಲಿ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ತಿಕ್ಕಾಟ ಏರ್ಪಟ್ಟಿದ್ದು, ಸರಕಾರವೂ ಸಹ ಹಿಂದಿನ ತೆರಿಗೆ ಹೆಚ್ಚಳ ಮಾಡದೆ ಪ್ರಸಕ್ತ ಸಾಲಿನ ತೆರಿಗೆ ಹೆಚ್ಚಳ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿ ಸೂಪರ್ ಸೀಡ್ ಯಾಕೆ ಮಾಡಬಾರದು ಎಂದು ಬೆಳಗಾವಿ ಪಾಲಿಕೆಗೆ ಪತ್ರ ಬರೆದಿರುವುದು ಗಂಭೀರವಾಗಿ ಪರಿಗಣಿಸಿ ರಾಜಕೀಯ ಕೆಸರಾಟ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ನಗರ ಸೇವಕರಿಗೆ ಆತಂಕ ಎದುರಾಗಿದೆ.
ಪಾಲಿಕೆಯಲ್ಲಿ ರಾಜಕೀಯ ಮಾಡದೆ ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡಬೇಕಾದ ನಗರ ಸೇವಕರು ಒಬ್ಬರಿಗೊಬ್ಬರು ಕಿತ್ತಾಟ ನಡೆಸಿಕೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಥವಾ ಬಿಜೆಪಿ ಯಾರ ಮೇಲಾದರೂ ದೂರು ನೀಡಿದರೆ ಪಾಲಿಕೆ ಆಡಳಿತ ವೈಫಲ್ಯ ತೋರಿಸುತ್ತದೆ. ಆದ್ದರಿಂದ ಸರಕಾರ ಇದನ್ನು ಸೂಪರ್ ಸೀಡ್ ಮಾಡುವ ಅಧಿಕಾರ ಇರುತ್ತದೆ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಪಾಲಿಕೆ ಚುನಾವಣೆ ನಡೆದು ಸುಮಾರು ಒಂದೂವರೆ ವರ್ಷಗಳ ಕಾಲ ಪ್ರಮಾಣ ವಚನ ಸ್ವೀಕರಿಸದ ನಗರ ಸೇವಕರು. ಪ್ರಮಾಣ ವಚನ ಸ್ವೀಕರಿಸಿ ಒಂದೂವರ್ಷದ ಒಳಗೆಯೇ ಸೂಪರ್ ಸೀಡ್ ಆಗುವ ಆತಂಕ ಎದುರಿಸುತ್ತಿರುವುದು ಸುಳ್ಳಲ್ಲ.