ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ನಗರದಲ್ಲಿ ಅದ್ದೂರಿಯಾಗಿ ಜರುಗುತ್ತಿದೆ. ಇಂದು ಆರಂಭಗೊಂಡ ಸಮ್ಮೇಳನಾಧ್ಯಕ್ಷರ ಉತ್ಸವದಲ್ಲಿ ಗಡಿ ಜಿಲ್ಲೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಗಡಿ ರಾಜ್ಯ ಗೋವಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿದ್ದಣ್ಣ ಮೇಟಿ ಅವರು ಭಾಗವಹಿಸಿ ಉತ್ಸವದ ತುಂಬ ಸಂಚರಿಸಿ ಸಂತಸ ಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಾನು ಮೊದಲು ಕನ್ನಡಿಗ. ಆಮೇಲೆ ಸ್ವಾಮಿ. ಇವತ್ತು ಸ್ವಾಮೀಜಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ. ಅಪ್ಪಟ ಕನ್ನಡಿಗನಾಗಿ ಭಾಗವಹಿಸುತ್ತಿದ್ದೇನೆ. ಕನ್ನಡವೇ ಉಸಿರು. ಕನ್ನಡವೇ ಬದುಕು ಅಂದರು ಅಂದಿನ ಕನ್ನಡಿಗರು ಕನ್ನಡವನ್ನೇ ಕನ್ನಡಕ ಮಾಡಿಕೊಂಡು ಕನ್ನಡದ ಬಗ್ಗೆ ಮಾತನಾಡುವರಯ್ಯ ಎಂದು ಹುಕ್ಕೇರಿಶಾ ಕನ್ನಡವನ್ನು ಕನ್ನಡಕ ಮಾಡಿಕೊಳ್ಳದೆ, ಕಣ್ಣಾಗಿಸಯ್ಯ ಎನ್ನುವ ಹಾಗೆ ನಾವೆಲ್ಲರೂ ಕನ್ನಡವನ್ನು ಉಳಿಸಿ, ಬೆಳಸಬೇಕು ಎಂದರು.
ನಾಡೋಜ ಡಾ. ಮಹೇಶ ಜೋಶಿ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದೇಶ ಮಾತ್ರವಲ್ಲ. ವಿದೇಶದಲ್ಲಿಯೂ ಹೆಸರಾಗಿರುವುದು ಅಭಿಮಾನದ ಸಂಗತಿ ಎಂದರು.
ಸಾತ್ವಿಕ ವ್ಯಕ್ತಿಗಳಾದ ದೊಡ್ಡರಂಗೇಗೌಡರ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದು ನಮಗೆ ಸಂತೋಷ ತಂದಿದೆ ಎಂದರು.
ಗೋವಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿದ್ದಣ್ಣ ಮೇಟಿ ಮಾತನಾಡಿ, ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಗೋವಾ ರಾಜ್ಯದಲ್ಲಿ ನಾವು ಕನ್ನಡವನ್ನು ಉಳಿಸಿ ಬೆಳೆಸಲು ಸನ್ನದ್ದರಾಗಿದ್ದೇವೆ. ನಾಡೋಜ ಡಾ. ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗೋವಾ ರಾಜ್ಯದ ಅಧ್ಯಕ್ಷರನ್ನಾಗಿ ನನಗೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಕಾರ್ಯ ಮಾಡುತ್ತೇವೆ. ಇವತ್ತು ಸ್ವಾಮೀಜಿ ಅವರು ಸಾಮನ್ಯರಂತೆ ಉತ್ಸವದಲ್ಲಿ ಭಾಗವಹಿಸಿರುವುದನ್ನು ನೋಡಿದರೆ ಅವರಲ್ಲಿರುವ ಕನ್ನಡ ಪ್ರೇಮ ಅದ್ಬುತವಾಗಿದೆ ಎಂದರು.
ಈ ಸಂದರ್ಭದಲ್ಲಿ ನಾಗರಾಜ ಪ್ರಕಾಶ ಭಟ್, ಬೆಳಗಾವಿ ಅಖಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.