ತಂದೆಯ ಕಿವಿ ಕಟ್, ಅಂಬ್ಯುಲೆನ್ಸ್ ಓಡಿಸಿ ಆಸ್ಪತ್ರೆಗೆ ಕರೆ ತಂದ ಮಗ
- Prasad Kambar
- 1 Jun 2024 , 3:11 PM
- Belagavi
- 1718
ಚಿಕ್ಕೋಡಿ :ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ದ್ವೇಷದ ಹಲ್ಲೆಯಲ್ಲಿ ಗಾಯಗೊಂಡ ತಂದೆಯನ್ನು ಚಿಕಿತ್ಸೆಗಾಗಿ ಸದಲಗಾ ಸರ್ಕಾರಿ ಆಸ್ಪತ್ರೆಯಿಂದ ಚಿಕ್ಕೋಡಿವರೆಗೂ ಮಗನೇ ಆಂಬ್ಯುಲೆನ್ಸ್ ಓಡಿಸಿಕೊಂಡು ಬಂದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಸದಲಗಾ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಚಾಲಕ ಲಭ್ಯವಿಲ್ಲದ ಕಾರಣ, ಯುವಕ ಮಾಳು ಪೂಜಾರಿ ತಾನೇ ಆಂಬ್ಯುಲೆನ್ಸ್ ಚಲಾಯಿಸಿಕೊಂಡು ಹೋದ ಘಟನೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತಿದೆ.
ಈ ಕೌಟುಂಬಿಕ ಕಲಹದಲ್ಲಿ, ಜನವಾಡ ಗ್ರಾಮದ ಸಿದ್ದು ಪೂಜಾರಿಯನ್ನು ಆತನ ಪತ್ನಿ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದರು. ಹಲ್ಲೆ ವೇಳೆ ಸಿದ್ದು ಪೂಜಾರಿಯ ಕಿವಿ ಕಟ್ ಆಗಿದ್ದು, ತಲೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ತಂದೆಯನ್ನು ಬೈಕ್ ಮೇಲೆ ಕೂರಿಸಿಕೊಂಡು ಮಾಳು ಪೂಜಾರಿ ತುರ್ತು ಚಿಕಿತ್ಸೆಗಾಗಿ ಸದಲಗಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದನು.
ಸದಲಗಾ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಆದರೆ, ಆಂಬ್ಯುಲೆನ್ಸ್ ಚಾಲಕ ಲಭ್ಯವಿಲ್ಲದೆ ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ಹಾಕಲು ಸಾಧ್ಯವಿಲ್ಲವೆಂದು ತಿಳಿಸಿದರು. ಈ ಸಂದರ್ಭ, ಮಾಳು ಪೂಜಾರಿ ತುರ್ತು ಪರಿಸ್ಥಿತಿಯನ್ನು ಮನಗಂಡು, ತಾನೇ ಆಂಬ್ಯುಲೆನ್ಸ್ ಚಲಾಯಿಸಿ ತಂದೆಯನ್ನು ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಿದನು.
ಈ ಘಟನೆ ಜನಸಾಮಾನ್ಯರಲ್ಲಿ ಆರೋಗ್ಯ ಇಲಾಖೆಯ ಸೇವೆಗಳ ಬಗ್ಗೆ ಆಕ್ರೋಶವನ್ನು ಮೂಡಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಾಲಕರ ಕೊರತೆ, ತುರ್ತು ಚಿಕಿತ್ಸಾ ಸೇವೆಗಳ ಲೋಪಗಳ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತದಿಂದ ತುರ್ತು ಕ್ರಮಗಳ ನಿರೀಕ್ಷೆ ಹೆಚ್ಚಿದೆ.