ಗದಗ : ಹೋರಾಟ-ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು ಉದಯವಾಗಿದೆ. ಈ ನಾಡಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಗದಗದಲ್ಲಿ "ಕರ್ನಾಟಕ ಸಂಭ್ರಮ-50" ಅದ್ದೂರಿ ಕಾರ್ಯಕ್ರಮವನ್ನು ವೈಭವದ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ನಾಮಕರಣ ಆಗಲು ಶ್ರಮಿಸಿ ಹೋರಾಡಿದ ಕೆ.ಎಚ್.ಪಾಟೀಲ್ ಮತ್ತು ಎಲ್ಲಾ ಹೋರಾಟದ ಸಂಗಾತಿಗಳನ್ನು ಇಂದು ನಾನು ಸ್ಮರಿಸುತ್ತೇನೆ.
ಅವತ್ತು ಕೆ.ಹೆಚ್.ಪಾಟೀಲ್, ಇಂದು ಹೆಚ್.ಕೆ.ಪಾಟೀಲ್. ಅವತ್ತು ದೇವರಾಜ ಅರಸು ಕುಳಿತಿದ್ದ ಮುಖ್ಯಮಂತ್ರಿ ಕುರ್ಚಿಯಲ್ಲಿ ಇವತ್ತು ನಾನು ಕುಳಿತಿದ್ದೇನೆ. ಇದೇನು ಕಾಕತಾಳೀಯ ಅಲ್ಲ ಎಂದರು.
ಇಂಗ್ಲಿಷ್ ನಲ್ಲಿ ಶೇಕ್ಸ್ ಪಿಯರ್ ಸಾಹಿತ್ಯ ರಚಿಸುವುದಕ್ಕೂ 500 ವರ್ಷಗಳ ಮೊದಲೇ ಕನ್ನಡದಲ್ಲಿ ವಿಶ್ವ ಮಟ್ಟದ ಅತ್ಯುನ್ನತ ಸಾಹಿತ್ಯ ರಚನೆಯಾಗಿತ್ತು. ಪಂಪನಿಂದ ಹಿಡಿದು ವಚನಕಾರರನ್ನೂ ಸೇರಿಸಿ ಹಲವರು ಅತ್ಯುನ್ನತ ಸಾಹಿತ್ಯ ರಚಿಸಿದ್ದರು ಎಂದು ಕನ್ನಡ ಭಾಷಾ ಹಿರಿಮೆಯನ್ನು ಉದಾಹರಿಸಿದರು.
ಕನ್ನಡ ಕಲಿಯದೆಯೂ ಕರ್ನಾಟಕದಲ್ಲಿ ವ್ಯವಹರಿಸಬಹುದು ಎನ್ನುವ ವಾತಾವರಣ ಬದಲಾಗಬೇಕು. ಕನ್ನಡದ ಸಂಸ್ಕೃತಿ ಜತೆಗೆ ನಮ್ಮೆಲ್ಲರಲ್ಲಿ ಕನ್ನಡತನ ಬೇರೂರಬೇಕು. ಆಗ ಮಾತ್ರ ಕನ್ನಡದ ವಾತಾವರಣ ಇಡಿ ನಾಡಿನಲ್ಲಿ ಪಸರಿಸುತ್ತದೆ ಎಂದರು.
ಕನ್ನಡ ಸಂಸ್ಕೃತಿ ಎಂದಾಗ ಬಸವಾದಿ ಶರಣರ ಕಾಯಕ ಸಂಸ್ಕೃತಿಯೂ ಸೇರಿದೆ. ಬಸವಣ್ಣನವರ ಆಶಯದಂತೆ ವರ್ಗರಹಿತ, ಜಾತಿರಹಿತ ಸಮಾಜದ ನಿರ್ಮಾಣ ಮತ್ತು ಈ ಸಮಾಜದ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಆ ಕಾರಣಕ್ಕೇ ಸರ್ವ ಜಾತಿ-ಧರ್ಮದವರ ಬದುಕನ್ನು ಎತ್ತರಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ ಎಂದರು.
ಹಿಂದೆ ಕೆ.ಹೆಚ್.ಪಾಟೀಲರು ಇಡೀ ಜಿಲ್ಲೆಗೆ ಕುಡಿಯುವ ನೀರು ಕೊಟ್ಟರು. ಅವರ ಪುತ್ರ ಹೆಚ್.ಕೆ.ಪಾಟೀಲರೂ ಇಡೀ ರಾಜ್ಯಕ್ಕೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಿದರೆ ಸಾಕು , ನೀವೆಲ್ಲಾ ಹೆಚ್.ಕೆ.ಪಾಟೀಲರನ್ನು ಗೆಲ್ಲಿಸಬೇಕು. ಇಡೀ ರಾಜ್ಯಕ್ಕೆ ಅಷ್ಟೊಂದು ಕೆಲಸ ಮಾಡಿರುವ ಹೆಚ್.ಕೆ.ಪಾಟೀಲರು ಮತ ಕೇಳಬಾರದು. ನೀವೆಲ್ಲಾ ಅವರನ್ನೂ ಹಾಗೇ ಗೆಲ್ಲಿಸಬೇಕು ಎಂದು ಕರೆ ನೀಡಿದರು.