ಬೆಳಗಾವಿ: ಮುಜರಾಯಿ ಇಲಾಖೆ ಧಾರ್ಮಿಕ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬೈಲಹೊಂಗಲ ಪಟ್ಟಣದ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಶನಿವಾರ ಇಲ್ಲಿನ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಾಂತೇಶ ಶಾಸ್ತ್ರೀಗಳು, ಮುಜರಾಯಿ ಇಲಾಖೆಯ ಧಾರ್ಮಿಕ ಪರಿಷತ್ತು ಹಲವಾರು ವರ್ಷಗಳಿಂದ ಅದ್ಬುತವಾದ ಕಾರ್ಯವನ್ನು ಮಾಡುತ್ತಿದೆ. ರಾಜ್ಯದಲ್ಲಿ 4,220ಕ್ಕೂ ಹೆಚ್ಚು ಮುಜರಾಯಿ ಇಲಾಖೆಗೆ ಸಂಬಂಧಿಸಿದ ಪುಣ್ಯಕ್ಷೇತ್ರಗಳಿವೆ. ಇವುಗಳ ಜವಾಬ್ದಾರಿ ಮುಜರಾಯಿ ಇಲಾಖೆಯ ಮೇಲೆ ಇರುವುದರಿಂದ ಇದರ ಅಡಿಯಲ್ಲಿ ಧಾರ್ಮಿಕ ಪರಿಷತ್ತು ಇದ್ದು, ಇದರ ಅಧ್ಯಕ್ಷರು ಮುಜರಾಯಿ ಸಚಿವರೇ ಆಗಿರುತ್ತಾರೆ. 8 ಜನ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡುವ ಕಾರ್ಯವನ್ನು ಸರಕಾರ ಮಾಡಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ನನಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂದರು.
ನಾನು ಇಷ್ಟು ಬೆಳೆಯಲು ಕಾರಣರಾಗಿರುವ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು. ಅವರ ಮಾರ್ಗದರ್ಶನದಲ್ಲಿ ಇನಷ್ಟು ಅಭಿವೃದ್ಧಿ ಕೆಲಸ ಮಾಡುವೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರಕಾರ ನಿಮಗೆ ಜವಾಬ್ದಾರಿಯ ಸ್ಥಾನ ನೀಡಿದೆ. ಮುಜರಾಯಿ ಇಲಾಖೆಗೆ ಸಂಬಂಧಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಉತ್ತರ ಕರ್ನಾಟಕದ ದೇವಸ್ಥಾನಗಳು ಅಭಿವೃದ್ಧಿಯಾಗುವ ಹಾಗೆ ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.
ನವದೆಹಲಿಯ ಎಂಜಿನಿಯರಿಂಗ್ ಒಕ್ಕೂಟದ ಕಾರ್ಯದರ್ಶಿ ಎಂ. ವಿ.ಹಿರೇಮಠ, ಸೋಮಶೇಖರ ಹಿರೇಮಠ, ಚಂದ್ರಶೇಖರಯ್ಯ ಸಾಲಿಮಠ, ಮುಕ್ತಾರ ಹುಸೇನ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.