ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಿದ ಜನತೆ

  • Krishna Shinde
  • 15 Jan 2024 , 2:19 AM
  • Raichur
  • 240

ಸಿಂಧನೂರು: ಜನವಿರೋಧಿ, ವಿಭಜಕ ಬಿಜೆಪಿ ಮತ್ತು ಸಂಘ ಪರಿವಾರದ ಕುತಂತ್ರಗಳನ್ನು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋಲಿಸುವ ಮೂಲಕ ದ್ವೇಷ ರಾಜಕಾರಣ ಮಾಡಿದವರಿಗೆ ರಾಜ್ಯದ ಜನರು ಸರಿಯಾದ ಪಾಠ ಕಲಿಸಿದ್ದಾರೆ. ಈ ಗೆಲುವು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮುನ್ನುಡಿಯಾಗಬೇಕಿದೆ ಎಂದು ಎಂದು ಸಿಪಿಐಎಂಎಲ್ ಲಿಬರೇಶನ್ ಹೇಳಿದೆ.

ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ, ರಾಜ್ಯ ಸಮಿತಿ ಸದಸ್ಯ ನಾಗರಾಜ್ ಪೂಜಾರ್ ಹಾಗೂ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಅವರು, ಬಿಜೆಪಿ ಸರ್ಕಾರದ ಕಂಡು ಕೇಳರಿಯದ ಭ್ರಷ್ಟಾಚಾರ, ನಿತ್ಯಾವಶ್ಯಕ ವಸ್ತುಗಳ ಬೆಲೆ ಏರಿಕೆ ಮತ್ತು ದುಬಾರಿಯಾದ ಜೀವನ ವೆಚ್ಚ, ಕುಸಿದ ಮೂಲಸೌಕರ್ಯ, ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳು, ನಿರುದ್ಯೋಗ, ದುರ್ಬಲ ರಾಜ್ಯ ಆರ್ಥಿಕತೆ, ಮಹಿಳೆಯರು ಮತ್ತು ಅವರ ಸ್ವಾಯತ್ತತೆಯ ವಿರುದ್ಧದ ಹಿಂಸಾಚಾರ, ಹೆಚ್ಚುತ್ತಿರುವ ಜಾತಿ ದೌರ್ಜನ್ಯಗಳು, ಕೋಮು ಅಸಮತೋಲನ ಮತ್ತು ಧಾರ್ಮಿಕ ದ್ವೇಷ ಮತ್ತು ಧರ್ಮಾಂಧತೆಯ ವಿರುದ್ಧ ಕರ್ನಾಟಕದ ಜನರು ಚುನಾವಣೆಯಲ್ಲಿ ಸ್ಪಷ್ಟ ಸಂದೇಶ ಸಾರಿದ್ದಾರೆ ಎಂದು ತಿಳಿಸಿದ್ದಾರೆ. 

ರಾಜ್ಯದಾದ್ಯಂತ ಬೃಹತ್ ರೋಡ್ ಶೋಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಯೋಜಿಸಿದ ಹೊರತಾಗಿಯೂ ಬಿಜೆಪಿ ಅನುಭವಿಸಿದ ಸೋಲು ಬ್ರಾಂಡ್ ಮೋದಿ ಅಳಿಸಲಾಗದ ಅಂಶವೇನಲ್ಲ ಎಂಬುದರ ಸಂಕೇತವಾಗಿದೆ. ದ್ವೇಷ ಭಾಷಣಗಳು, ಹಾಗೂ ದ್ವೇಷ ರಾಜಕಾರಣದ ಬಗ್ಗೆ ವಹಿಸಿದ ಮೌನ,  ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಚುನಾವಣಾ ಆಯೋಗವು ರಾಜ್ಯದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ದುರ್ಬಲಗೊಳಿಸುತ್ತಿರುವುದನ್ನು ತೋರಿಸಿದೆ ಎಂದು ಆಪಾದಿಸಿದ್ದಾರೆ. ಈ ಚುನಾವಣೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಪ್ರಸ್ತುತ ಬಿಜೆಪಿ ಸರ್ಕಾರದ ಹಲವಾರು ಮಂತ್ರಿಗಳು ಸೋಲನ್ನು ಕಂಡಿದ್ದಾರೆ, ಇದು ರಾಜ್ಯದಲ್ಲಿ ಕೋವಿಡ್ -೧೯ ಬಿಕ್ಕಟ್ಟಿನ ಸಮಯದಲ್ಲಿ ಬಿಜೆಪಿ ಸರ್ಕಾರದ ಸಂಪೂರ್ಣ ದುರಾಡಳಿತಕ್ಕೆ ತಕ್ಕ ಉತ್ತರವಾಗಿದೆ. ಹಿಜಾಬ್ ನಿಷೇಧವನ್ನು ಜಾರಿಗೊಳಿಸಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಅವಮಾನಿಸಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ  ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೂ ಸೋತಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರ ಸೋಲು ಬಿಜೆಪಿಯ ಕೆಟ್ಟ ಕೋಮುವಾದಿ ಕಾರ್ಯಸೂಚಿಯ ತಿರಸ್ಕಾರವನ್ನು ಒತ್ತಿಹೇಳುತ್ತದೆ. 

ಬಿಜೆಪಿಯ ಫ್ಯಾಸಿಸ್ಟ್ ದಾಳಿಯ ವಿರುದ್ಧ ಸಿಪಿಐಎಂಎಲ್ ಬೀದಿಗಳಲ್ಲಿ ಜನತೆಯ ಪರವಾಗಿ ದನಿ ಎತ್ತುವುದನ್ನು ಮುಂದುವರಿಸುತ್ತದೆ, ಜೊತೆಗೆ ಮುಂಬರುವ ಸರ್ಕಾರವು ಜನರ ಆದೇಶವನ್ನು ಪಾಲಿಸುವಂತೆ ಹಾಗೂ ತನ್ನ ಚುನಾವಣಾ ಭರವಸೆಗಳನ್ನು ಪೂರೈಸುವಂತೆ ಎಚ್ಚರಿಕೆ ವಹಿಸುತ್ತದೆ ಎಂದು ಹೇಳಿದ್ದಾರೆ.  

"ಬಿಜೆಪಿಯನ್ನು ಸೋಲಿಸಿ, ಕರ್ನಾಟಕವನ್ನು ಉಳಿಸಿ" ಎಂಬ ನಮ್ಮ ಘೋಷಣೆಯನ್ನು ಪೂರೈಸಿದ್ದಕ್ಕಾಗಿ ಮತ್ತು ಎರಡು ಕ್ಷೇತ್ರಗಳಲ್ಲಿ ನಮಗೆ ಮತ ಚಲಾಯಿಸಿದ್ದಕ್ಕಾಗಿ ಸಿಪಿಐಎಂಎಲ್ ಲಿಬರೇಶನ್ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತದೆ. ಸಿಪಿಐಎಂಎಲ್ ಕಳೆದ ಕೆಲವು ತಿಂಗಳುಗಳಲ್ಲಿ ಬಿಜೆಪಿಯ ಜನವಿರೋಧಿ ನೀತಿಗಳನ್ನು ಹಲವಾರು ವಲಯಗಳ -ನಿರ್ದಿಷ್ಟ ರಿಪೋರ್ಟ್ ಕಾರ್ಡ್ಗಳ ಮೂಲಕ ಬಯಲಿಗೆಳೆದು ದಣಿವರಿಯದೇ ಕೆಲಸ ಮಾಡಿದ ಬಹುತ್ವ ಕರ್ನಾಟಕ, ಎದ್ದೇಳು ಕರ್ನಾಟಕ ಮತ್ತು ಇತರ ನಾಗರಿಕ ಸಮಾಜ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಛತ್ತೀಸ್‌ಗಢ, ಮಧ್ಯಪ್ರದೇಶ, ಮೀಜೋರಾಂ, ರಾಜಸ್ಥಾನ ಮತ್ತು ತೆಲಂಗಾಣದ ಜನರು ಬಿಜೆಪಿಯ ಜನವಿರೋಧಿ ಮತ್ತು ದ್ವೇಷ ರಾಜಕಾರಣವನ್ನು ತಿರಸ್ಕರಿಸಿ ಇದೇ ರೀತಿಯ ಜನಾದೇಶಗಳನ್ನು ನೀಡಲು ಮತ್ತು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನವನ್ನು ಉಳಿಸಲು ಮತ ಚಲಾಯಿಸಲು ಈಗ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Read All News