ಕೊಪ್ಪಳ : ನಗರದ ಗದಗ ರಸ್ತೆಯಲ್ಲಿ ಬರುವ ಬೆಟ್ಟ ಗುಡ್ಡಗಳ ಮದ್ಯದ ಪ್ರಕೃತಿ ತಾಣದಲ್ಲಿ ಇರುವ ಐತಿಹಾಸಿಕ ಪೌರಾಣಿಕ ಭಕ್ತಿಯ ತಾಣವಾದ ಶ್ರೀಮಳೆಮಲ್ಲೇಶ್ವರ ದೇವಾಲಯದ ಜಾತ್ರಾ ಮಹೋತ್ಸವವು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ದಿನಾಂಕ 24-08-2024 ನೇ ಶನಿವಾರ ಸಂಜೆ 5 ಗಂಟೆಗೆ ನೂತನವಾಗಿ ನಿರ್ಮಾಣಗೊಂಡ ದ್ವಾರ ಬಾಗಿಲಿನ ಉದ್ಘಾಟನೆ ಕಾರ್ಯಕ್ರಮ ಹಾಗೂ ಸಂಜೆ 6 ಗಂಟೆಗೆ ಉಚ್ಚಾಯ ಕಾರ್ಯಕ್ರಮ ಜರುಗುವುದು.
ಮರುದಿನ ದಿನಾಂಕ 25-8-2024 ರಂದು ರವಿವಾರ ದಿವಸ ಬೆಳಿಗ್ಗೆ 10.30ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿವೆ. ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅದೇ ದಿನ ಸಂಜೆ 5.30 ಗಂಟೆಗೆ ಮಹಾರಥೋತ್ಸವ ಜರುಗಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಮೈನಹಳ್ಳಿ- ಬಿಕನಹಳ್ಳಿಯ ಪರಮಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕುಕನೂರಿನ ಮುಂಡರಗಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾದೇವ ಮಹಾಸ್ವಾಮಿಗಳು, ಹೂವಿನಹಡಗಲಿಯ ಶಾಖಾ ಹಿರೇಮಠದ ಪೂಜ್ಯ ಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ.
ಇದೇ ದೇವಾಲಯದ ಹಿಂಭಾಗದ ಬೆಟ್ಟದ ಮೇಲೆ ಅಶೋಕನ ಶಿಲಾಶಾಸನಗಳಲ್ಲಿ ಒಂದಾದ ಪಾಲ್ಕಿಗುಂಡು ಶಾಸನ ಇರುವ ಪ್ರದೇಶ ಹಾಗೂ ಪುರಾತನ ಕಾಲದ ಮೌರೆಯ ಮನೆಗಳು ಇಲ್ಲಿ ಇದ್ದವು. ಈಗ ಅವುಗಳು ಹಾಳಾಗಿವೆ ಈ ಗುಡ್ಡಗಳ ಮೇಲೆ ಕಮಲ ( ತಾವರೆ ಹೂವಿನ ) ಸರೋವರವನ್ನು ಕಾಣಬಹುದಾಗಿದೆ.
ಈ ದೇವಾಲಯದ ಒಳಗೆ ಬಂಡೆಗಲ್ಲಿನ ಮೇಲೆ ಇರುವ ಶಿವಲಿಂಗದ ಮೇಲೆ ನೀರಿನ ಸೆಲೆಯ ಮೂಲಕ ವರ್ಷದ ಹನ್ನೆರಡು ತಿಂಗಳೂ ಶಿವಲಿಂಗದ ಮೇಲೆ ನೀರು ಹರಿಯುತ್ತಿರುತ್ತದೆ. ಆ ನೀರು ಕುಡಿಯಲು ಯೋಗ್ಯವಾದ ಸಿಹಿ ನೀರಾಗಿದ್ದು ಆ ನೀರು ಔಷಧೀಯ ಗುಣವನ್ನು ಹೊಂದಿರುವದಾಗಿ ಬಲ್ಲವರು ಹೇಳುತ್ತಾರೆ.
ವರದಿ : ರವಿಚಂದ್ರ ಬಡಿಗೇರ