ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆಯ ಪ್ರಯೋಜನಗಳು

  • 15 Jan 2024 , 8:25 AM
  • Belagavi
  • 3363

ಹಿಂದು ಪುರಾಣಗಳ ಪ್ರಕಾರ, ವೈಕುಂಠ ಏಕಾದಶಿಯ ಈ ಪವಿತ್ರ ದಿನದಂದು ಸಾಗರ ಮಂಥನವನ್ನು ನಡೆಸಲಾಯಿತು. ಈ ಸಾಗರ ಮಂಥನದ ಸಮಯದಲ್ಲಿ, ಕ್ಷೀರ ಸಾಗರದಿಂದ ದೈವಿಕ ಅಮೃತವು ಹೊರಹೊಮ್ಮಿತು, ಅದನ್ನು ದೇವರುಗಳ ನಡುವೆ ವಿತರಿಸಲಾಯಿತು. ಆದ್ದರಿಂದ ಈ ಮಂಗಳಕರ ದಿನದಂದು ಸಾಯುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ಸ್ವರ್ಗೀಯ ನಿವಾಸ ಅಥವಾ ವೈಕುಂಠ ಧಾಮವನ್ನು ತಲುಪುತ್ತಾರೆ ಎಂಬುದು ಹಿಂದು ಭಕ್ತರ ನಂಬಿಕೆ. 

ಏಕಾದಶಿ ವ್ರತ ಆಚರಣೆಯ ಪ್ರಯೋಜನವೇನು? 

ಸಾಮಾನ್ಯವಾಗಿ ಏಕಾದಶಿ ವ್ರತಾಚರಣೆಯಿಂದ ವ್ಯಕ್ತಿಯ ಆಧ್ಯಾತ್ಮಿಕ, ಮಾನಸಿಕ ಮತ್ತು ಶಾರೀರಿಕ ಶುದ್ಧಿಯನ್ನು ನಿರೀಕ್ಷಿಸಲಾಗುತ್ತದೆ. ಈ ವ್ರತಾಚರಣೆ ಅಷ್ಟು ಶಕ್ತಿಶಾಲಿ. ಶರೀರ ಮತ್ತು ಆತ್ಮಕ್ಕೆ ಶಕ್ತಿ ತುಂಬುವ ಪ್ರಕ್ರಿಯೆ. ಧಾರ್ಮಿಕ ನಂಬಿಕೆಯ ಪ್ರಕಾರ ಹೇಳುವುದಾದರೆ, ನಿತ್ಯ ಬದುಕಿನಲ್ಲಿ ಸಾಕಷ್ಟು ಲೋಪದೋಷಗಳು, ತಪ್ಪುಗಳಾಗಿರುತ್ತವೆ. ಅದನ್ನು ನಿವಾರಿಸಲು ಈ ವ್ರತಾಚರಣೆ ಒಂದು ಪರಿಹಾರ ಕ್ರಮ. ಭಗವಾನ್‌ ಶ್ರೀಹರಿಯು ಈ ವ್ರತಾಚರಣೆ ಮಾಡುವ ತನ್ನ ಭಕ್ತರ ಎಲ್ಲ ಪಾಪಗಳನ್ನು ನಿವಾರಿಸಿ ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ. 

ಏಕಾದಶಿಯಂದು ಉಪವಾಸವನ್ನು ಮಾಡಿ, ದೇವರನ್ನು ಪೂಜಿಸುವುದರಿಂದ ಅನೇಕ ಜನ್ಮಗಳ ಪಾಪಕ್ಕೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ಹಾಗೆಯೇ ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ದೇವರ ದರ್ಶನ ಮಾಡಿದರೆ ಜೀವನದ ಕಷ್ಟಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ಇದೆ. 

ವೈಕುಂಠ ಏಕಾದಶಿಯ ದಿನ ಬೆಳಗ್ಗೆ ದೇವರ ದರ್ಶನ ಮಾಡುವುದರಿಂದ ವಿಷ್ಣು ಎಲ್ಲರ ಕಷ್ಟಗಳನ್ನು ಆಲಿಸಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಭಕ್ತಾಧಿಗಳು ಈ ದಿನ ಬೆಳಗ್ಗೆಯಿಂದಲೇ ದೇವರ ದರ್ಶನಕ್ಕೆ ಕಾಯುತ್ತಿರುತ್ತಾರೆ. 

ನಂಬಿಕೆಯ ಪ್ರಕಾರ ವೈಕುಂಠ ಏಕಾದಶಿಯ ದಿ ನ ವಿಷ್ಣುವಿನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರುವುದರಿಂದ ಏಳು ಜನ್ಮದಲ್ಲಿ ಮಾಡಿದ ಪಾಪಗಳೂ ಪರಿಹಾರವಾಗುತ್ತದೆ. ಅಲ್ಲದೇ, ಈ ದಿನ ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ಬಂದರೆ ಇನ್ನೂ ಹೆಚ್ಚಿನ ಪ್ರಯೋಜನ ಜಾಸ್ತಿ ಎನ್ನುತ್ತಾರೆ ಹಿರಿಯರು. 

ಈ ದಿನ ವೈಕುಂಠದ ದ್ವಾರ ತೆಗೆದಿರುತ್ತದೆ ಎನ್ನುವ ನಂಬಿಕೆ ಇದ್ದು, ಭಕ್ತಾದಿಗಳು ನೆಚ್ಚಿನ ಭಗವಂತನ ದರ್ಶನ ಮಾಡಿಕೊಂಡು ಕಣ್ತುಂಬಿಕೊಳ್ಳುತ್ತಾರೆ. 

ವೈಕುಂಠ ಏಕಾದಶಿ ಆಚರಣೆ ಮಾಡುವ ವಿಧಾನ 

• ಈ ಏಕಾದಶಿ ವ್ರತವನ್ನು ಆಚರಿಸುವ ಜನರು ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಿ ಉಪವಾಸ ಮಾಡುವ ಸಂಕಲ್ಪ ಮಾಡುವುದು ವಾಡಿಕೆ. 

• ಧೂಪ, ದೀಪ, ನೈವೇದ್ಯ ಮುಂತಾದ ಹದಿನಾರು ಪದಾರ್ಥಗಳಿಂದ ವಿಷ್ಣುವನ್ನು ಪೂಜಿಸಿ. ರಾತ್ರಿ ದೀಪದಾನ ಮಾಡುವುದು ಕೂಡ ಶ್ರೇಷ್ಠ. 

• ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ. ಭಗವಾನ್‌ ಮಹಾವಿಷ್ಣುವಿಗೆ ಹೂವಿನ ಹಾರ, ನೈವೇದ್ಯ ಮತ್ತು ಬಾಳೆಹಣ್ಣು ಅರ್ಪಿಸಿ. 

• ಶ್ರೀ ಹರಿ ಸ್ತೋತ್ರಂ, ವಿಷ್ಣು ಸಹಸ್ತ್ರನಾಮ ಮತ್ತು ಏಕಾದಶಿ ವ್ರತ ಕಥೆಯನ್ನು ಪಠಿಸಿ. ಅರಿವಿಲ್ಲದೆ ಮಾಡಿದ ಯಾವುದೇ ತಪ್ಪು ಅಥವಾ ಪಾಪಕ್ಕೆ ಕ್ಷಮೆ ಕೋರಿ ಪ್ರಾರ್ಥನೆ ಸಲ್ಲಿಸಿ. 

• ಮಹಾವಿಷ್ಣುವಿನ ಮಂತ್ರ - ಶ್ರೀ ಕೃಷ್ಣ ಗೋವಿಂದ ಹರೇ ಮುರಾರೆ| 

ಹೇ ನಾಥ ನಾರಾಯಣ ವಾಸುದೇವಾಯ||

• ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅನ್ನ ಸಂತರ್ಪಣೆ, ದಾನ ಮಾಡಿ. 

Read All News