ಬೆಳಗಾವಿ :
ವಾಲ್ಮೀಕಿ ಸಮಾಜದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಕೀಕಿ ರಾಜ್ಯ ಯುವ ಘಟಕ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿರುವ ಎಲ್ಲ ಜಿಲ್ಲೆಯ ತಾಲೂಕಿನ ಹಳ್ಳಿಗಳಲ್ಲಿ ನಮ್ಮ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸ್ಮಶಾನ ಭೂಮಿ ಇಲ್ಲದೆ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಜಮೀನು ಇಲ್ಲದವರು ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುವಂತಾಗಿದೆ. ಆದ್ದರಿಂದ ನಮ್ಮ ಸಮಾಜದವರಿಗಾಗಿ ಪ್ರತಿ ತಾಲೂಕಿನ ಹಳ್ಳಿಗಳಲ್ಲಿ ಸ್ಮಶಾನಕ್ಕಾಗಿ 3 ರಿಂದ 5 ಎಕರೆ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಬೆಳಗಾವಿ ಗಡಿಭಾಗದ ಕೆಲವೊಂದು ಹಳ್ಳಿ ಗ್ರಾಮದಲ್ಲಿ ಕನ್ನಡ ಶಾಲೆ ಇಲ್ಲದೆ ಅಲ್ಲಿಯ ಮಕ್ಕಳು 8 ರಿಂದ 15 ಕಿ.ಮೀ ದೂರದ ವರೆಗೂ ಶಾಲೆಗೆ ಪರದಾಡುವಂತಾಗಿದೆ. ಮತ್ತು ಅದೇ ಹಳ್ಳಿಯಲ್ಲಿ ಮರಾಠಿ ಶಾಲೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಕನ್ನಡ ಶಾಲೆಯ ಮಕ್ಕಳಿಗೆ ಅನ್ಯಾಯ ಮಾಡಿ ಶಿಕ್ಷಣದಿಂದ ಕುಂಠಿತವಾಗುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಇಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಗಡಿಭಾಗದ ಬೆಳಗಾವಿಯ ಹಳ್ಳಿಯ ಭಾಗದಲ್ಲಿ ಕಡ್ಡಾಯವಾಗಿ ಕನ್ನಡ ಶಾಲೆಯನ್ನು ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಬೆಳಗಾವಿ ರೈಲು ನಿಲ್ದಾಣಕ್ಕೆ ಸ್ವಾತಂತ್ರö್ಯ ಹೋರಾಟಗಾರ ವೀರ ಸಿಂಧೂರ ಲಕ್ಷö್ಮಣರವರ ಹೆಸರನ್ನು ನಾಮಕರಣ ಮಾಡುವಂತೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಸುವರ್ಣ ವಿಧಾನಸೌಧದ ಎದುರು ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಗುರುಗಳ ಮೂರ್ತಿ ಹಾಗೂ ವಿಶ್ವ ಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಇಲ್ಲದಿದ್ದರೇ ಉಗ್ರವಾದ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ ಶಿಗೀಹಳ್ಳಿ, ಮಂಜುನಾಥ ಎನ್.ಎಂ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.