ವಿಜಯನಗರ ಕಾಲುವೆಗಳಿಗೆ ನೀರಿನ ಹಂಚಿಕೆ, ಅಭಿವೃದ್ಧಿ ಕಾಮಗಾರಿಗೆ ಸಕಾರಾತ್ಮಕ ಸ್ಪಂದನೆ

  • shivaraj B
  • 25 Jul 2024 , 5:14 PM
  • Koppal
  • 3790

ಹೊಸಪೇಟೆ  : ವಿಜಯನಗರ ಮತಕ್ಷೇತ್ರದ ವಿಜಯನಗರ ಕಾಲುವೆಗಳಿಗೆ ನೀರಿನ ಹಂಚಿಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳು ಮತ್ತು ತುಂಗಭದ್ರಾ ಡ್ಯಾಮಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಲ ಸಂಪನ್ಮೂಲ ಸಚಿವರು ಆಗಿರುವ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಜುಲೈ 24ರಂದು ಮಾನ್ಯ ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರ ಹೆಚ್.ಆರ್.ಗವಿಯಪ್ಪ ಅವರು ಪ್ರಸ್ತಾಪಿಸಿದ ವಿಷಯದ ಮೇರೆಗೆ, ವಿಜಯನಗರ ಕಾಲುವೆಗಳಿಗೆ ನೀರಿನ ಹಂಚಿಕೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಹಾಗೂ ತುಂಗಭದ್ರಾ ಡ್ಯಾಮಗೆ ಸಂಬಂಧಿಸಿದಂತೆ ಹಾಗೂ ಇನ್ನೀತರ‌ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ತುಂಗಭದ್ರಾ ಯೋಜನೆಯಡಿಯಲ್ಲಿ ಬರುವ 17 ವಿಜಯನಗರ ಕಾಲುವೆಗಳ ನಿರ್ವಹಣೆಗೆ ಪ್ರತ್ಯೇಕ ನಿಗಮ ಸ್ಥಾಪನೆ ಆಗಬೇಕು. ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ನಿರ್ಮಾಣಕ್ಕೆ ಹೆಚ್ಚುವರಿ ಅವಧಿಯನ್ನು ಮಂಜೂರಿ ಮಾಡಬೇಕು. ತುಂಗಭದ್ರಾ ಜಲಾಶಯದಿಂದ ವಿಜಯನಗರ ಕಾಲುವೆಗಳಿಗೆ ಸಮಾನವಾಗಿ ನೀರಿನ ಹಂಚಿಕೆ ಮಾಡಬೇಕು.

ತುಂಗಭದ್ರಾ ಯೋಜನೆಯ ವಿಜಯನಗರ ಕಾಲುವೆಗಳ ವ್ಯಾಪ್ತಿಯ ಬೆಲ್ಲ ಆಣೆಕಟ್ಟಿನಿಂದ ತಲವಾರಘಟ್ಟವರೆಗೆ ನದಿ ಪಾತ್ರದಲ್ಲಿ ಬರುವ ಬೆಲ್ಲ, ತುರ್ತಾ, ರಾಮಸಾಗರ ಮತ್ತು ಬೆಳಗೋಡ ಆಣೆಕಟ್ಟು ವ್ಯಾಪ್ತಿಯಲ್ಲಿ ಚಿಕ್ಕದಾದ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಬೇಕು. ಹೊಸಪೇಟೆ ತಾಲೂಕಿನ ಕಮಲಾಪೂರ ವ್ಯಾಪ್ತಿಯಲ್ಲಿ ಇರುವ ವಿಜಯನಗರ ರಾಜರುಗಳಿಂದ ನಿರ್ಮಾಣವಾದ ಕೆರೆ ಅಭಿವೃದ್ದಿ ಮಾಡಬೇಕು ಎಂದು ವಿವಿಧ ವಿಷಯಗಳ ಬಗ್ಗೆ ಸಹ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಈ ವಿಷಯಗಳ ಬಗ್ಗೆ ಉಪ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ವರದಿ  : ರವಿಚಂದ್ರ  ಬಿ ಬಡಿಗೇರ 

Read All News