ನ್ಯಾಯಾಂಗ ತನಿಖೆ ನಡೆಸಿದರೆ ಸರ್ಕಾರದ ಭ್ರಷ್ಟಾಚಾರವನ್ನು ನಾವು ಸಾಬೀತು ಮಾಡುತ್ತೇವೆ: ಸಿದ್ದರಾಮಯ್ಯ

  • 14 Jan 2024 , 9:47 PM
  • Bengaluru
  • 129

ಬೆಂಗಳೂರು : ಕಮಿಷನ್ ಕಾಟದಿಂದ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಬೊಬ್ಬಿರಿಯುವ ಬಿಜೆಪಿ ನಾಯಕರಿಗೆ ತಮ್ಮ ಪ್ರಾಮಾಣಿಕತೆ ಬಗ್ಗೆ ಅಷ್ಟೊಂದು ವಿಶ್ವಾಸವಿದ್ದರೆ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ತಮ್ಮ ಮೇಲಿರುವ ಆರೋಪದಿಂದ ಮುಕ್ತಿ ಹೊಂದಲಿ ಎಂದು ಸಿದ್ದರಾಮಯ್ಯ್ ಹೇಳಿದ್ದಾರೆ .

ನ್ಯಾಯಾಂಗ ತನಿಖೆ ನಡೆಸಿದರೆ ಸರ್ಕಾರದ ಭ್ರಷ್ಟಾಚಾರವನ್ನು ನಾವು ಸಾಬೀತು ಮಾಡುತ್ತೇವೆ, ಒಂದು ವೇಳೆ ಸಾಬೀತುಪಡಿಸಲು ಆಗದಿದ್ದರೆ ನಮ್ಮ ಮೇಲೆ ಬೇಕಾದ ಕಾನೂನು ಕ್ರಮ ಜರುಗಿಸಿ ಎಂದು ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಯಾರಾದರೂ ಒಬ್ಬನೇ ಒಬ್ಬ ಪ್ರಾಮಾಣಿಕ ವ್ಯಕ್ತಿ ಇದ್ದರೆ ಈ ಸವಾಲು ಸ್ವೀಕರಿಸಲಿ ಎಂದರು .

ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಬರೆದ ಪತ್ರವನ್ನು ನೋಡಿದ್ದು ಬಿಟ್ಟರೆ ಅವರ ಭೇಟಿ ಸಾಧ್ಯವಾಗಿರಲಿಲ್ಲ. ಒಮ್ಮೆ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಅರಣ್ಯ ಗುತ್ತಿಗೆದಾರರ ಸಂಘದವರು ಬಂದು ಭೇಟಿಮಾಡಿ ಸಮಾಲೋಚನೆ ನಡೆಸಿ, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು ಎಂದರು .

ರಾಜ್ಯ ಸರ್ಕಾರ ಕಳೆದ ಏಪ್ರಿಲ್‌ ತಿಂಗಳಿನಲ್ಲಿ ನಮ್ಮನ್ನು ಮಾತುಕತೆಗೆ ಕರೆದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಬಿಟ್ಟರೆ ಈ ವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ತಾವು ವಿಧಾನಸಭೆಯಲ್ಲಿ ಒತ್ತಾಯ ಮಾಡಬೇಕು ಎಂದು ಗುತ್ತಿಗೆದಾರರ ಸಂಘದವರು ನನಗೆ ಮನವಿ ಮಾಡಿದ್ದರು.

ಟೆಂಡರ್‌ ಅನುಮೋದನೆಗೆ ಮೊದಲೇ 30 ರಿಂದ 40% ಲಂಚ ಕೊಡಬೇಕಾಗಿದೆ. ಪ್ರಧಾನಿಗಳಿಗೆ ಪತ್ರ ಬರೆದು ಒಂದು ವರ್ಷ ಆದರೂ ಅವರು ಯಾವ ಕ್ರಮ ಕೈಗೊಂಡಿಲ್ಲ. ನ್ಯಾಯಾಂಗ ತನಿಖೆಗೆ ಸರ್ಕಾರವನ್ನು ಒತ್ತಾಯಿಸಿ ಎಂದು ಇಂದು ಕೆಂಪಣ್ಣನವರು ನನ್ನ ಬಳಿ ಕೇಳಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ್ ಹೇಳಿದ್ದಾರೆ .

ಭ್ರಷ್ಟಾಚಾರ ಎಲ್ಲಾ ಕಾಲದಲ್ಲೂ ಆಮೆ ವೇಗದಲ್ಲಿ ಇತ್ತು, ಈಗ ಶರವೇಗದಲ್ಲಿ ಸಾಗುತ್ತಿದೆಯೆಂಬ ಪದಗಳನ್ನು ಬಳಸಿ ಗುತ್ತಿಗೆದಾರರು ಈ ಸರ್ಕಾರದ ಭ್ರಷ್ಟ ಮುಖವನ್ನು ತೆರೆದಿಟ್ಟಿದ್ದಾರೆ. ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಬಿಬಿಎಂಪಿ ಇಂದ ಸುಮಾರು 22,000 ಕೋಟಿಗೂ ಅಧಿಕ ಬಿಲ್ ಹಣ ಬಿಡುಗಡೆಯಾಗಬೇಕಿದೆ.

ಬಾಕಿ ಇರುವ ಬಿಲ್ ಹಣವನ್ನು ಆದ್ಯತೆ ಮೇಲೆ ತಕ್ಷಣ ಬಿಡುಗಡೆ ಮಾಡಬೇಕು, ಜೊತೆಗೆ ಅನುದಾನ ಮೀಸಲಿಡದೆ ಟೆಂಡರ್‌ ಕರೆಯುವುದರಿಂದ ಹಣ ಬಿಡುಗಡೆ ವೇಳೆ ಆಗುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸಲು ಒತ್ತಾಯಿಸಬೇಕು ಎಂದು ನನ್ನಲ್ಲಿ ಮನವಿ ಮಾಡಿದ್ದಾರೆ ಎಂದರು .

Read All News