ಬೆಳಗಾವಿ : ಯುವ ಜನತೆಯ ಆರೋಗ್ಯದ ಜೊತೆಗೆ ದೈಹಿಕ ಮತ್ತು ಬೌದ್ದಿಕಶಕ್ತಿ ವೃದ್ಧಿಗೆ ಯುವ ಉತ್ಸವ ಒಂದು ಉತ್ತಮ ವೇದಿಕೆಯಾಗಿದೆ ಎಂದು ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರು ಅಭಿಪ್ರಾಯಪಟ್ಟರು.
ನೆಹರು ಯುವ ಕೇಂದ್ರ ಬೆಳಗಾವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ "ನಮ್ಮ ಪರಂಪರೆ ನಮ್ಮ ಹೆಮ್ಮೆ" ಎಂಬ ದ್ಯೇಯವಾಕ್ಯದೊಂದಿಗೆ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವ-ಇಂಡಿಯಾ@2047 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ನಮ್ಮ ದೇಶದ ಆಸ್ತಿ. ಇಂತಹ ಯುವ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಯುವಕರು ಕಲೆ, ಸಂಸ್ಕೃತಿ ಕ್ರೀಡೆಗಳಲ್ಲಿ ಭಾಗವಹಿಸಿ ಉನ್ನತ ಸ್ಥಾನಮಾನಗಳನ್ನು ಪಡೆದು ದೇಶವನ್ನು ಮುನ್ನಡೆಸುವ ಕಾರ್ಯ ಮಾಡಬೇಕು ಎಂದರು.
ಮಕ್ಕಳಿಗೆ ಯಾವುದೇ ಒತ್ತಡ ಹಾಕದೇ ಮಕ್ಕಳ ಆಸೆ, ಗುರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ದೇಶ ಕಟ್ಟುವಂತಹ ನಾಯಕರಾಗುವ ಮನೋಭಾವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವ ಜನತೆಗೆ ಸ್ಫೂರ್ತಿ ತುಂಬವ ಮೂಲಕ ಯುವ ಜನತೆಯಲ್ಲಿ ಅಡಗಿರುವ ಕಲೆಯ ಶಕ್ತಿಯನ್ನು ಹೋರಹಾಕುವ ಒಂದು ಉತ್ಸವವಾಗಿದೆ ಎಂದು ಸಂಸದೆ ಮಂಗಳಾ ಅಂಗಡಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಮಾಸ್ ಸಂಸ್ಥೆಯ ಸಿಇಓ ಆದ ಸೀತವ್ವಾ ಜೋಡಟ್ಟಿ ಅವರು, "ಯುವ ಜನತೆ ಎಂದರೆ ಬೆಳೆ ಇದ್ದಂತೆ. ಯಾವ ರೀತಿ ಬೆಳೆಯನ್ನು ಬೆಳೆಸುತ್ತೇವೆಯೋ ಅದೇ ರೀತಿ ಯುವ ಜನತೆಗೆ ಹುಮ್ಮಸ್ಸು ತುಂಬುವ ಮೂಲಕ ಅವರಲ್ಲಿ ಅಡಗಿರುವ ಕಲೆಯನ್ನು ಹೊರತಂದು ಅವರು ಗುರಿ ತಲುಪಿಸುವ ಕಾರ್ಯ ಈ ಯುವ ವೇದಿಕೆಯಿಂದ ಮಾಡಲಾಗುತ್ತಿದೆ ಎಂದರು.
ನಾವು ಪ್ರಶಸ್ತಿಗಾಗಿ ಕೆಲಸ ಮಾಡಬಾರದು ನಮ್ಮ ಆತ್ಮಶುದ್ಧಿಯಿಂದ ಕಾರ್ಯ ಮಾಡಬೇಕು ಪ್ರಶಸ್ತಿ ತಾನಾಗಿಯೇ ಬರುತ್ತದೆ. ನನಗೆ ಪದ್ಮಶ್ರೀ ಪ್ರಶಸ್ತಿ ಸುಮ್ಮನೆ ಬಂದಿಲ್ಲ; ಎಂದು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಬಿಚ್ಚಿಡುವ ಮೂಲಕ ಸೀತವ್ವಾ ಜೋಡಟ್ಟಿ ಅವರು ಯುವ ಜನತೆಯಲ್ಲಿ ಆತ್ಮಸ್ತೈರ್ಯ ತುಂಬಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಮಾತನಾಡಿ, ಆಕರ್ಷಣಿಯ ಜಗತ್ತಿಗೆ ಯುವ ಜನತೆ ಮಾರು ಹೋಗಬಾರದು. ಸ್ವಾಮಿ ವಿವೇಕಾನಂದ ನುಡಿಯನ್ನು ನೆನಯುತ್ತಾ ಈ ಜಗತ್ತಿನಲ್ಲಿ ಏನಾದರು ಬದಲಾವಣೆ ಯಾಗಬೇಕಾದರೆ ಬಿಸಿ ರಕ್ತ ಹೊಂದಿರುವ ಯುವ ಜನತೆಯಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತುಕೊಂಡು ಮುನ್ನಡೆಯಬೇಕು ಎಂದರು.
ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಮಲ್ಲೇಶ ಚೌಗಲೆ ಅವರು ಮಾತನಾಡಿ, ಯಾರು ಗೆದ್ದರು ಯಾರು ಸೋತರು ಎನ್ನುವುದಕಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವುದು ತುಂಬ ಮುಖ್ಯವಾಗಿದೆ. ಆದ್ದರಿಂದ ಯುವ ಜನತೆ ಎಲ್ಲಾ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಸ್ವಾಗತಿಸಿದರು. ಚಿಕ್ಕೋಡಿ ತಾಲೂಕಾ ಅಧ್ಯಕ್ಷ ರಾಘವೇಂದ್ರ ಲಂಬುಗೊಳ ನಿರೂಪಿಸಿದರು.
ಜಿಲ್ಲಾ ಯುವ ಒಕ್ಕೂಟದ ಗೌರವ ಅಧ್ಯಕ್ಷರು ರಾಮಚಂದ್ರ ಕಾಂಬಳೆ , ಎನ್‌ವೈಕೆಯ ಜಿಲ್ಲಾ ಯುವಜನ ಅಧಿಕಾರಿ ರೋಹಿತ ಕಲ್ರಾ, ಎಸ್.ಯು. ಜಮಾದಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಿಬ್ಬಂದಿಯಾದ ಬಸವರಾಜ್ ಜಕ್ಕನ್ನವರ , ಸಿರಿಗನ್ನಡ ಪ್ರತಿಷ್ಟಾನ ರಾಜ್ಯಾಧ್ಯಕ್ಷರು ರಜನಿ ಜಿರಿಗಿಹಾಳ , ರಾಷ್ಟ್ರೀಯ ಕುಸ್ತಿ ಪಟು ಅತುಲ್ ಸುರೇಶ್ ಶಿರೋಳಿ, ಆರ್.ಆರ್.ಮುತಾಲಿಕ ದೇಸಾಯಿ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಭರತ್ ಕಲಾಚಂದ್ರ ಹಾಗೂ ಕಲಾ ತಂಡಗಳು ಮತ್ತು ಜಿಲ್ಲೆಯ 14 ತಾಲೂಕಿನ ಯುವಕ- ಯುವತಿಯರು ಉಪಸ್ಥಿತರಿದ್ದರು.