ಬೆಂಗಳೂರು :ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಜ್ಯದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಕಲುಷಿತ ನೀರು ಸೇವನೆಯಿಂದ ಸಾವು ಸಂಭವಿಸುವ ಪ್ರಕರಣಗಳು ಮರುಕಳಿಸಿದರೆ ಜಿಲ್ಲಾ ಪಂಚಾಯತಿ ಸಿ.ಇ.ಒ ಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು ಹಾಗೂ ನಗರ ಸಭೆಗಳ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಡವರು ವಾಸಿಸುವ ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಚರಂಡಿ ನೀರಿನ ಪೈಪುಗಳು ಪ್ರತ್ಯೇಕವಾಗಿರುವುದನ್ನು ಖಾತ್ರಿಪಡಿಸಬೇಕು. ಪ್ರತ್ಯೇಕ ಇಲ್ಲದಿರುವ ಸ್ಥಳಗಳನ್ನು ಗುರುತಿಸಿ ಈ ಕುರಿತು ನೈರ್ಮಲ್ಯ ಅಭಿಯಾನ ಕೈಗೊಂಡು 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ 13-14 ಜನ ಸಾವಿಗೀಡಾಗಿದ್ದು, ಚಿತ್ರದುರ್ಗದಲ್ಲಿಯೇ 6-7 ಜನ ಅಸುನೀಗಿದ್ದಾರೆ. ಇದನ್ನು ತಪ್ಪಿಸಲು ಸಾಧ್ಯವಿದೆ. ಕೆಲವೆಡೆ ನಿರ್ವಹಣೆ ಇಲ್ಲದೆ ಇರುವುದರಿಂದ ಈ ರೀತಿ ಅವಘಡಗಳು ಸಂಭವಿಸುತ್ತಿದೆ.
ಕಾವಾಡಿಗರಹಟ್ಟಿಯಲ್ಲಿ ಇತ್ತೀಚೆಗೆ ಕಲುಷಿತ ನೀರಿನಿಂದ ಸಾವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ಪ್ರಕರಣಗಳು ಸಂಭವಿಸುತ್ತದೆ. ಗ್ರಾಮೀಣಾಭಿವೃದ್ಧಿ, ಆರೋಗ್ಯ, ಪೌರಾಡಳಿತ ಹಾಗೂ ನಗರಾಭಿವೃದ್ಧಿ ಈ ನಾಲ್ಕು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಹಾಸ್ಟೆಲ್ ಗಳಲ್ಲಿಯೂ ವಿದ್ಯಾರ್ಥಿಗಳು ಕಲುಷಿತ ನೀರು ಕುಡಿದು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಸಮರೋಪಾದಿಯಲ್ಲಿ ಕೆಲಸಗಳಾಗಬೇಕು.
ಪೈಪ್ ಲೈನ್ ಸರಿಪಡಿಸುವುದು, ಟ್ಯಾಂಕ್ ಸ್ವಚ್ಛತಾ ಕಾರ್ಯ ತುರ್ತಾಗಿ ಕೈಗೊಳ್ಳಬೇಕು.
ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು. ನೀರಿನ ಸ್ವಚ್ಛತೆ ಬಗ್ಗೆ ಆದ್ಯತೆ ವಹಿಸಬೇಕು ಜೊತೆಗೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಿಎಂ ಹೆಳಿದ್ದಾರೆ.