ಅಥಣಿ :ಬೇಸಿಗೆ ಹೊಡೆತಕ್ಕೆ ದಿನದಿಂದ ದಿನಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ನದಿ ಒಡಲಿನಿಂದ ಮೊಸಳೆಗಳು ಆಹಾರಗಳನ್ನು ಆರಿಸಿ ರೈತರ ತೋಟದ ವಸತಿ ಪ್ರದೇಶಗಳಿಗೆ ಬಿಡಾರ ಹೂಡುತ್ತಿದ್ದು ಇದರಿಂದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ ಮತ್ತೊಂದು ಕಡೆ ರೈತರು ತಮ್ಮ ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಬೃಹತಾಕಾರದ ಮೊಸಳೆಯನ್ನು ಗಿಡಕ್ಕೆ ಕಟ್ಟಿಹಾಕಿ ಅಪಾಯಕಾರಿ ಸಾಹಸವನ್ನು ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ದರ್ಗಾ ಗ್ರಾಮದ ನದಿ ತೀರದ ಜನ ವಸತಿ ಪ್ರದೇಶಗಳಿಗೆ ಇವತ್ತು ನಸುಕಿನ ಜಾವ ಮೂರು ಗಂಟೆ ಆಸುಪಾಸಿನಲ್ಲಿ ಪ್ರಕಾಶ ಸನದಿ ಎಂಬುವರ ಮನೆಗೆ ದೈತ್ಯಾಕಾರದ ಮೊಸಳೆ ಒಂದು ಪತ್ತೆಯಾಗಿದ್ದು ಇದೇ ವೇಳೆ ರೈತರು ಸಾಕಿರುವ ಪ್ರಾಣಿಗಳ ಮೇಲೆ ದಾಳಿ ಮಾಡಕ್ಕೆ ಮುಂದಾಗುತ್ತಿದ್ದಂತೆ ಕುಟುಂಬಸ್ಥರು ದೊಣ್ಣೆಯಿಂದ ಮೊಸಳೆಯನ್ನು ಹೊಡೆದು ಅಕ್ಕ ಪಕ್ಕದ ರೈತರು ಒಟ್ಟಾಗಿ ಮೊಸಳೆಯನ್ನು ಕಟ್ಟಿ ಹಾಕಿದ್ದಾರೆ.
ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೊಸಳೆಯನ್ನು ರಕ್ಷಣೆ ಕಾರ್ಯ ಮಾಡಿದ್ದಾರೆ.
ಇದೆ ವೇಳೆ ರೈತ ಪ್ರಕಾಶ ಸನದಿ ಮಾತನಾಡಿ, ನಸುಕಿನ ಮೂರು ಗಂಟೆಗೆ ಮೊಸಳೆ ಮನೆಗೆ ಬಂದಿತ್ತು, ನಮ್ಮ ಆಡದ ಮರಿಯನ್ನು ಮೊಸಳೆ ಹಿಡಿದಿತ್ತು ಅವಾಗ ಮೇಕೆಗಳ ಚೀರಾಟ ಮಾಡುತ್ತಿದ್ದಂತೆ ನಾವು ಎಚ್ಚೆತ್ತುಕೊಂಡು ನಾವು ಮೊಸಳೆ ಬಾಯಿಂದ ನಮ್ಮ ಆಡದ ಮರಿಯನ್ನು ರಕ್ಷಣೆ ಮಾಡಿದ್ದೆವು, ನಂತರ ತೊಟದ ಜನರು ಸೇರಿ ಮೊಸಳೆಯನ್ನು ಹಗ್ಗದ ಸಹಾಯದಿಂದ ಮರಕ್ಕೆ ಕಟ್ಟಿಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ, ನದಿಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ಮೊಸಳೆಗಳು ಕೃಷಿ ಜಮೀನಿನಲ್ಲಿ ಬರುತ್ತಿದ್ದಾವೇ ನಮಗೆ ತುಂಬಾ ಆತಂಕಕ್ಕೆ ಕಾರಣವಾಗಿದೆ, ಅರಣ್ಯ ಇಲಾಖೆ ಅಧಿಕಾರಿಗಳು ನದಿ ತೀರದಲ್ಲಿ ಇದ್ದು ನಮಗೆ ರಕ್ಷಣೆ ನೀಡಬೇಕು ಎಂದು ಹೇಳಿದರು.