205ಕ್ಕೆ ಆಲ್ ಔಟ್ ಆದ ಇಂಗ್ಲೆಂಡ್
ಭಾರತ ಹಾಗೂ ಇಂಗ್ಲಂಡ್ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 205 ರನ್ಗಳಿಗೆ ಆಲೌಟಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಆರಂಭಿಕ ಆಘಾತ ಎದುರಿಸಿತು. ಇನ್ನಿಂಗ್ಸ್ ಆರಂಭಿಸಿದ ಜಾಕ್ ಕ್ರಾವ್ಲೆ 9 ರನ್ ಗಳಿಸಿ ಅಕ್ಷರ್ ಬೌಲಿಂಗ್ನಲ್ಲಿ ಸಿರಾಜ್ಗೆ ಕ್ಯಾಚಿತ್ತರೆ, 2 ರನ್ ಗಳಿಸಿದ್ದ ಡಾಮಿನಿಕ್ ಸಿಬ್ಲೆ ಅಕ್ಷರ್ ಬೌಲಿಂಗ್ನಲ್ಲಿ ಬೌಲ್ಡ್ ಆದ್ರು. ನಂತರ ಬಂದ ನಾಯಕ ರೂಟ್ 5 ರನ್ಗಳಿಸಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಒಂದೆಡೆ ವಿಕೆಟ್ ಪತನಗೊಳ್ತಿದ್ರೂ ಹೋರಾಟ ಮುಂದುವರೆಸಿದ ಜಾನಿ ಬೈರ್ಸ್ಟೋ 28 ರನ್ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಜೊತೆಯಾಟವಾಡಿ ತಂಡಕ್ಕೆ ನೆರವಾದ್ರು. ಅಷ್ಟರೊಳಗೆ ಸ್ಟೋಕ್ಸ್ ಅರ್ಧಶತಕ ಪೂರೈಸಿಕೊಂಡ್ರು. ಈ ನಡುವೆ ಸಿರಾಜ್, ಈ ಜೋಡಿಯನ್ನ ಬೇರ್ಪಡಿಸುವಲ್ಲಿ ಯಶಸ್ವಿಯಾದ್ರು. ತದ ನಂತ್ರ ಸ್ಟೋಕ್ಸ್ ತನ್ನ ಆಟವನ್ನು ಮುಂದುವರಿಸಿ ತಂಡದ ಮೊತ್ತ ಹೆಚ್ಚಿಸಿದ್ರು. ಸ್ಟೋಕ್ಸ್ಗೆ ಒಲಿ ಪೋಪ್ ಸಾಥ್ ನೀಡಿದ್ರು.
ಈ ಇಬ್ಬರ ಓಟಕ್ಕೆ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಬ್ರೇಕ್ ಹಾಕಿದ್ರು. ವಿಕೆಟ್ಗಳು ಪತನಗೊಳ್ಳುತ್ತಿದ್ದಂತೆ ಡೇನಿಯಲ್ ಲಾರೆನ್ಸ್, ತಾಳ್ಮೆಯುತ ಆಟಕ್ಕೆ ಮುಂದಾದ್ರು. ಜವಾಬ್ದಾರಿಯುತ ಆಟವಾಡಿ 46 ರನ್ ಕಲೆ ಹಾಕಿದ್ದ ಲಾರೆನ್ಸ್ಗೆ, ಅಕ್ಷರ್ ಪೆವಿಲಿಯನ್ ದಾರಿ ತೋರಿಸಿದ್ರು. ಬೆನ್ ಫೋಕ್ಸ್ 1 ರನ್, ಡಾಮಿನಿಕ್ ಬೆಸ್ 3 ರನ್ ಗಳಿಸಿದ್ರು.
ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್, ಅಕ್ಷರ್ ಪಟೇಲ್ 4, ಆರ್.ಅಶ್ವಿನ್ 3, ಸುಂದರ್ 1 ವಿಕೆಟ್ ಪಡೆದು ಮಿಂಚಿದರು. ಬಳಿಕ ಭಾರತ ತಂಡ ಬ್ಯಾಟಿಂಗ್ ನಡೆಸುತ್ತಿದ್ದು 19 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದೆ. ರೋಹಿತ ಶರ್ಮಾ, ಚೇತೇಶ್ವರ ಪೂಜಾರ್ ಕ್ರೀಸ್ ನಲ್ಲಿದ್ದಾರೆ.