Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

localview news

ಬೆಳಗಾವಿ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ “ಗ್ರಾಮ ಕಾಯಕ ಮಿತ್ರ” ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್. 05 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ್‌ ಹೆಚ್‌.ವಿ. ತಿಳಿಸಿದ್ದಾರೆ.

ತಾಲೂಕುಗಳಲ್ಲಿ ಗ್ರಾಮ‌ ಕಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಮೇ.20 ಕೊನೆಯ ದಿನಾಂಕವಾಗಿತ್ತು. ಆದರೆ, ಕೋವಿಡ್-19 ಕಾರಣದಿಂದ ಲಾಕ್‌ ಡೌನ್ ಜಾರಿಯಲ್ಲಿರುವದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಸ್ವೀಕೃತವಾಗಿಲ್ಲ. ಆದ್ದರಿಂದ “ಗ್ರಾಮ ಕಾಯಕ ಮಿತ್ರ” ಹುದ್ದೆಯ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ಜೂನ್.05 ರವರೆಗೆ ವಿಸ್ತರಿಸಲಾಗಿದೆ.

ಒಟ್ಟು 14 ತಾಲೂಕುಗಳಲ್ಲಿ ನೇಮಕಾತಿ :

ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 20 ಸಾವಿರ ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಂಬಂಧಿಸಿದ ಅರ್ಜಿದಾರರು, ತಮಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಲ್ಲಿ ಮೇ.5 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

ಗ್ರಾಮ ಪಂಚಾಯಿತಿಗೆ ಒಂದರಂತೆ ಅಥಣಿ 24, ಬೈಲಹೊಂಗಲ್ 22, ಬೆಳಗಾವಿಯ 24, ಚಿಕ್ಕೋಡಿ 14, ಗೋಕಾಕದಲ್ಲಿರುವ 14 ,ಹುಕ್ಕೇರಿಯ 40, ಕಾಗವಾಡದ 03, ಖಾನಾಪುರ 27, ಕಿತ್ತೂರಿನ 08, ಮೂಡಲಗಿಯಲ್ಲಿರುವ 10 , ನಿಪ್ಪಾಣಿಯ 04, ರಾಯಬಾಗದ 15, ರಾಮದುರ್ಗದ 26 ಹಾಗೂ ಸವದತ್ತಿಯಲ್ಲಿರುವ 24 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 14 ತಾಲೂಕುಗಳಲ್ಲಿರುವ 255 ಗ್ರಾಮ ಪಂಚಾಯಿತಿಗಳಲ್ಲಿ “ಗ್ರಾಮ ಕಾಯಕ ಮಿತ್ರ” ಹುದ್ದೆಗೆ ನೇಮಕಾತಿ ನಡೆಯಲಿದೆ.

ತಾಲೂಕು ಆಯ್ಕೆ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಮೆರಿಟ್‌ ಪಟ್ಟಿ ತಯಾರಿಸಿ ಗ್ರಾಮ ಪಂಚಾಯತಿಯಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜೂನ್.10 ರಂದು ಪ್ರಕಟಿಸುತ್ತದೆ. ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆಗಳನ್ನು ಜೂನ್‌. 19 ರ ಒಳಗಾಗಿ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಸಮಿತಿಯು ಅಂತಿಮ ಆಯ್ಕೆ ಪಟ್ಟಿಯನ್ನು ಜೂನ್‌ .25 ರಂದು ಪ್ರಕಟಿಸಲಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ್‌ ಹೆಚ್‌.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.