Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಥಣಿ ತಾಲ್ಲೂಕಿನ ಎಲ್ಲ ಕೃಷಿಕರ ಬವಣೆ ನೀಗಿಸುವಂತ ಕೆಲಸ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

localview news

ಬೆಳಗಾವಿ: ಕರಿಮಸೂತಿ ಯೋಜನೆಯಡಿ ಹಲ್ಯಾಳ ಏತ ನೀರಾವರಿಯಿಂದಾಗಿ ತಾಲೂಕಿನ ಬಹುಭಾಗ ಪ್ರದೇಶಕ್ಕೆ ನೀರು ಹರಿಯಲಿದ್ದು ಎಲ್ಲ ಕೆರೆ ಕಾಲುವೆಗಳು ತುಂಬಲಿವೆ ಇದರಿಂದ ಅಥಣಿ ತಾಲ್ಲೂಕಿನ ಎಲ್ಲ ಕೃಷಿಕರ ಬವಣೆ ನೀಗಿಸುವಂತ ಕೆಲಸ ಮಾಡಿದ್ದೇನೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದರು.

ಅಥಣಿ ಮತಕ್ಷೇತ್ರದ ಹಾಲ್ಯಾಳ ಏತ ನೀರಾವರಿ ಯೋಜನೆಗೆ ಗುರುವಾರ(ಮೇ 27) ಚಾಲನೆ ನೀಡಿ ಅವರು ಮಾತನಾಡಿದರು.

ಈ ಯೋಜನೆಯಿಂದಾಗಿ ಅಂತರ್ಜಲ ಮಟ್ಟ ಸುಧಾರಣೆಯಾಗುವುದರ ಜೊತೆಗೆ ಬತ್ತಿ ಹೋಗಿದ್ದ ಕೊಳವೆ ಬಾವಿಗಳನ್ನು ಮರು ಉಪಯೋಗಿಸುವಂತಾಗಿ ಪ್ರತಿಯೊಬ್ಬ ರೈತನ ತಲಾ ಆದಾಯ ಹೆಚ್ಚಾಗಲಿದೆ.

ಸಾವಿರಾರು ಅಡಿ ಆಳ ಕೊಳವೆ ಬಾವಿಗಳನ್ನು ಕೊರೆಸಿ ನಷ್ಟದಲ್ಲಿದ್ದ ರೈತರಿಗೆ ಈ ಯೋಜನೆ ಸಹಕಾರಿಯಾಗಿದೆ

ನೀರಾವರಿ ಯೋಜನೆಗಳಿಂದಾಗಿ ವಲಸೆ ಹೋಗಿದ್ದ ಸಾವಿರಾರು ಕುಟುಂಬಗಳು ವಾಪಸ್ ಬಂದು ಕೃಷಿ ಕಾರ್ಯದಲ್ಲಿ ತೊಡಗಿ ಸಮೃದ್ಧಿ ಜೀವನ ನಡೆಸುತ್ತಿರುವುದು ನನಗೆ ಬಹಳ ಹೆಮ್ಮೆಯೆನಿಸಿದೆ.

೨೦೦೪ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆರಿಸಿ ಬಂದ ನನಗೆ ಮೊದಲು ಅನಿಸಿದ್ದು ಈ ನಾಡಿನ ರೈತನ ಬವಣೆಯ ಬದುಕು ಬದಲಾಗಬೇಕು ರೈತನ ಬದುಕಿನಲ್ಲಿ ಆಶಾದಾಯಕ ಜೀವನ ಸಾಗಿಸುವಂತಾಗಬೇಕು.

ಸರ್ಕಾರಿ ನೌಕರನಿಗೆ ತಿಂಗಳ ವೇತನ ಬರುವ ಹಾಗೆ ರೈತನಿಗೂ ಕೂಡ ಪ್ರತಿ ತಿಂಗಳ ಆದಾಯ ಬರುವಂತ ರೀತಿಯಲ್ಲಿ ಕೈತುಂಬ ಕೆಲಸ ಇರಬೇಕು. ಅವರಿಗೆ ವರ್ಷಂಪ್ರತಿ ಆದಾಯ ಬರುವಂತ ಯೋಜನೆ ಜಾರಿಗೆ ತರಬೇಕು ಎಂಬ ಮಹತ್ವಾಕಾಂಕ್ಷೆಯಿಂದಾಗಿ ನಾನು ರಾಜಕೀಯಕ್ಕೆ ಬಂದೆ ಈ ನಿಟ್ಟಿನಲ್ಲಿ ಶ್ರಮವಹಿಸಿ ನೆನೆಗುದಿಗೆ ಬಿದ್ದಿದ್ದ ಹಿಪ್ಪರಗಿ ಆಣೆಕಟ್ಟು ಯೋಜನೆ, ಕರಿಮಸೂತಿ ಏತ ನೀರಾವರಿ ಯೋಜನೆಗೆ ಶ್ರಮ ವಹಿಸಿ ಜಾರಿಗೆ ತರುವಲ್ಲಿ ಸಫಲನಾಗಿದ್ದೇನೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಸೇವೆಯೇ ಪರಮ ಆರಾಧನೆ ಎಂದು ನಂಬಿರುವ ನಾನು ಅಥಣಿ ಮತಕ್ಷೇತ್ರದ ಜನರ ಸೇವೆಗೆ ಸದಾ 24*7 ಸಿದ್ದ ಈ ಹಿನ್ನೆಲೆಯಲ್ಲಿ ಕೊರೋನಾ ಮಹಾಮಾರಿ ಇಂದಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದರ ಪರಿಣಾಮವಾಗಿ ಅಥಣಿ ತಾಲೂಕಿನಲ್ಲಿ ಯಾರು ಉಪವಾಸ ಇರಬಾರದು ಆಹಾರಕ್ಕೆ ಕೊರತೆಯಾಗದೆ ಇರುವ ನಿಟ್ಟಿನಲ್ಲಿ ನನ್ನ ತಂದೆ-ತಾಯಿಯವರ ಹೆಸರಿನಲ್ಲಿ ನೊಂದಣಿಯಾಗಿರುವ ಸತ್ಯ ಸಂಗಮ ಸೇವಾ ಟ್ರಸ್ಟ್ ಹೆಸರಿನಲ್ಲಿ ಕ್ಷೇತ್ರದ 70 ಸಾವಿರ ಕುಟುಂಬಗಳ ಎರಡೂವರೆ ಲಕ್ಷ ಜನರಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರಧಾನ್ಯಗಳನ್ನು ಇಂದಿನಿಂದ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕಿನ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದೆ ಎಂದರು.

ವಿಶ್ವಮಟ್ಟದಲ್ಲಿ ಹೆಸರು ಪಡೆದಿರುವ ಅಥಣಿಯ ಚರ್ಮೋದ್ಯಮದ ಜೊತೆ ಜೊತೆಗೆ ಬಹುತೇಕ ಜನ ನೀರಾವರಿಯನ್ನು ಅವಲಂಬಿಸಿ ಕೃಷಿ ಕಾರ್ಯದಲ್ಲಿ ತೊಡಗಿರುವುದು ನಮ್ಮ ತಾಲೂಕಿನ ವಿಶೇಷತೆಯಾಗಿದೆ.

ಇದರಿಂದ ನಮ್ಮ ತಾಲೂಕಿನ ಎಲ್ಲಾ ರೈತ ಬಾಂಧವರು ಕರಿಮಸೂತಿ ಯೋಜನೆಯಡಿ ಬರುವ ಹಲ್ಯಾಳ ಏತ ನೀರಾವರಿ ಯೋಜನೆಯ ಸದ್ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆದು ಸಮೃದ್ಧಿ ಜೀವನ ನಡೆಸಬೇಕೆಂದು ಕ್ಷೇತ್ರದ ನಾಗರಿಕರಲ್ಲಿ ಲಕ್ಷ್ಮಣ ಸವದಿ ಮನವಿ ಮಾಡಿದರು.