Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ಸುತ್ತಿದ್ದ ಸಿದ್ದಲಿಂಗಯ್ಯ ವಿಶೇಷ ಲೇಖನ: ಹಿರಿಯ ಪತ್ರಕರ್ತ ಅಶೋಕ ಚಂದರಗಿ

localview news

ಬೆಳಗಾವಿ: 2006 ರಲ್ಲಿ ನನ್ನ ಹೊಸ ಇಂಡಿಕಾ ಕಾರು ಖರೀದಿಸಿದ ದಿನವೇ ಬೆಳಗಾವಿ ಸುತ್ತಿದ್ದ ಸಿದ್ದಲಿಂಗಯ್ಯ:ಪಾಲಿಕೆ ಮೇಲಿನ ಎಮ್.ಇ.ಎಸ್.ಧ್ವಜ, ಯಳ್ಳೂರಿನ "ಮಹಾರಾಷ್ಟ್ರ ರಾಜ್ಯ" ಫಲಕ ನೋಡಿದ್ದರು.

logintomyvoice

2006 ರ ಸಪ್ಟೆಂಬರ್ ಕೊನೆಯ ವಾರ ಬೆಳಗಾವಿಯ ಜೆ ಎನ್ ಎಮ್ ಸಿ ಆವರಣದಲ್ಲಿ ರಾಜ್ಯ ವಿಧಾನ ಮಂಡಲದ ಅಧಿವೇಶನವು ತಾತ್ಕಾಲಿಕ ವ್ಯವಸ್ಥೆಯಲ್ಲಿ ನಡೆದಿತ್ತು.ಅದೊಂದು ಐತಿಹಾಸಿಕ ಅಧಿವೇಶನ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ,ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದ ಟ್ವೆಂಟಿ ಟ್ವೆಂಟಿ ಸರಕಾರ. ಮೊನ್ನೆ ಅಗಲಿದ ಕ್ರಾಂತಿಕಾರಿ ಕವಿ ಸಿದ್ದಲಿಂಗಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬೆಳಗಾವಿಗೆ ಬಂದಿದ್ದರು.ಹೊಟೆಲ್ ರಾಮದೇವದಲ್ಲಿ ಉಳಿದುಕೊಂಡಿದ್ದರು.

ಸಪ್ಟೆಂಬರ್ 28 ರಂದು ನಾನು ಇಂಡಿಕಾ ಕಾರು ಖರೀದಿಸಿದ್ದೆ.ಸೀದಾ ರಾಮದೇವ ಹೊಟೆಲ್ ಗೆ ಹೋದೆ.ನನ್ನೊಂದಿಗೆ ದಿ.ಅಶೋಕ ಐನವರ,ಶಂಕರ ಬಾಗೇವಾಡಿ ಇದ್ದರು."ಸಾರ್ ನಾನು ಇಂದೇ ಕಾರ್ ಖರೀದಿಸಿದ್ದೇನೆ.ತಾವು ದಯವಿಟ್ಟು ಕಾರಿನಲ್ಲಿ ಪಾದಾರ್ಪಣೆ ಮಾಡಬೇಕು"ಎಂದು ಸಿದ್ದಲಿಂಗಯ್ಯ ಅವರನ್ನು ವಿನಂತಿಸಿದೆ.ಅವರು ನಕ್ಕರು.

"ಹಾಗಾದರೆ ನನಗೂ ಒಂದು ಇಚ್ಛೆಯಿದೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಹಾರುತ್ತಿರುವ ಎಮ್.ಇ.ಎಸ್.ಭಗವಾ ಧ್ವಜವನ್ನು ಹಾಗೂ ಬೆಳಗಾವಿಯಿಂದ 7 ಕಿ.ಮೀ.ದೂರದ ಯಳ್ಳೂರಿನಲ್ಲಿ 1986 ರಿಂದ ಹಾಕಲಾಗಿರುವ "ಮಹಾರಾಷ್ಟ್ರ ರಾಜ್ಯ"ಎಂಬ ಫಲವನ್ನುನಾನು ನೋಡಬೇಕು"ಎಂದರು.ಇದಕ್ಕೆ ನಾನು ಒಪ್ಪಿದೆ.

ನನ್ನ ಕಾರಿನಲ್ಲಿ ಅವರು ಕುಳಿತಾಗ ನನಗೆ ಎಲ್ಲಿಲ್ಲದ ಖುಷಿಯಾಯಿತು.ಕಾರು ಸೀದಾ ಪಾಲಿಕೆಯ ಬಳಿ ಸಾಗಿತು.ಕಾರಿನಲ್ಲೇ ಕುಳಿತು ಧ್ವಜವನ್ನು ನೋಡಿದರು.1985 ರಲ್ಲಿ ಪಾಟೀಲ ಪುಟ್ಟಪ್ಪನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ ಪಾಲಿಕೆಗೆ ಭೆಟ್ಟಿ ನೀಡಿದಾಗ ನಡೆದ ಗಲಾಟೆ ,ಹಿಂಸಾಚಾರವನ್ನು ನಾನು ವಿವರಿಸಿದೆ.

ನಂತರ ನೇರವಾಗಿ ಯಳ್ಳೂರಿಗೆ ಹೋದೆವು.ಅಲ್ಲಿದ್ದ ಮಹಾರಾಷ್ಟ್ರ ರಾಜ್ಯ ಎಂದು ಬರೆದ ಸಿಮೆಂಟನಿಂದ ತಯಾರಿಸಿದ ಫಲಕವನ್ನು ತೋರಿಸಿದೆ.ನಮ್ಮ ಕಾರು ಅಲ್ಲಿ ಸ್ವಲ್ಪ ಸಮಯ ನಿಂತಾಗ ಅಲ್ಲಿದ್ದ ಕೆಲವರು ನಮ್ಮತ್ತ ನೋಡಿದರಾದರೂ ಕಾರಿನಲ್ಲಿ ಯಾರಿದ್ದಾರೆಂಬುದು ಅವರಿಗೆ ತಿಳಿಯಲು ಸಾಧ್ಯವಿರಲಿಲ್ಲ.ಅಲ್ಲಿಂದ ಮರಳಿ ಹೊಟೆಲ್ ಗೆ ಬಂದೆವು.

ಸಿದ್ದಲಿಂಗಯ್ಯ ಅವರು ನಂತರ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದಾಗಲೂ ನಾನು ಅವರೊಂದಿಗೆ ಆಗಾಗ ಫೋನಿನಲ್ಲಿ ಮಾತನಾಡುತ್ತಿದ್ದೆ.

ಬೆಳಗಾವಿಯಲ್ಲಿನ ಬೆಳವಣಿಗೆಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು ಸಿದ್ದಲಿಂಗಯ್ಯ...

( ಪಾಲಿಕೆಯು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಧ್ವಜವೂ ಹೋಯಿತು.2015 ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಜಯರಾಮ ಅವರ ದಿಟ್ಟ ಕ್ರಮದಿಂದಾಗಿ ಮತ್ತು ಹೈಕೋರ್ಟಿನ ಎಚ್ಚರಿಕೆಯಿಂದಾಗಿ ಯಳ್ಳೂರಿನ ಫಲಕವೂ ಕಿತ್ತು ಹೋಯಿತು.ಈಗ ನನ್ನ ಬಳಿ ಇಂಡಿಕಾ ಕಾರೂ ಇಲ್ಲ)


ಅಶೋಕ ಚಂದರಗಿ ಅಧ್ಯಕ್ಷರು,ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ ಮೊ:9620114466