Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಯೋಗಯುಕ್ತರಾಗೋಣ: ರೋಗಮುಕ್ತರಾಗೋಣ ‘ಯೋಗ’ಕ್ಕೆ ಯೋಗ ತಂದುಕೊಟ್ಟ ನಮ್ಮ ಹೆಮ್ಮೆಯ ಭಾರತ

localview news

ಇಂದು ಜೂನ 21, ಏಳನೇ ಅಂತರಾಷ್ಟ್ರೀಯ ಯೋಗದಿನ. ಇದೊಂದು ಅವಿಸ್ಮರಣೀಯ ದಿನ, ಇಂದು ಇಡೀ ಜಗತ್ತು ಯೋಗಮಯವಾಗುತ್ತದೆ. ಯೋಗ ಎಂಬುಂದು ಬರಿ ವಿದ್ಯೆಯಲ್ಲ, ಅದು ಜಗತ್ತಿಗೆ ಸನಾತನ ಪರಂಪರೆಯ ಭಾರತವು ನೀಡಿದ ಜಾಗತಿಕ ವಿದ್ಯೆಯಾಗಿದೆ. ಆರೋಗ್ಯ ಮತ್ತು ಆಧ್ಯಾತ್ಮ ಎರಡು ಮುಖದಲ್ಲು ತನ್ನನ್ನ ನಂಬಿದವರನ್ನ ಪೊರೆಯಬಲ್ಲ ಪಾರಂಪರಿಕ ಕಲೆಯಾಗಿದ್ದು. ಯೋಗ ಶಿಕ್ಷಣವು ಜೀವನವನ್ನು ಪರಿಶುದ್ದಗೊಳಿಸಲು ನಿರ್ಸಗದತ್ತವಾಗಿ ಲಬ್ಯವಿರುವ ಏಕೈಕ ಮಾರ್ಗವೆಂದರೆ ತಪ್ಪಾಗಲಾರದು.ಸಾವಿರಾರು ವರ್ಷಗಳ ಹಿಂದೆ ಪತಂಜಲಿ ಎಂಬ ಮಹಾನ ಯೋಗಿ, ಋಷಿಮುನಿಯು ಮನುಷ್ಯನ ಸೃಷ್ಟಿ ಮತ್ತು ಶಕ್ತಿ ಎರಡರ ಬಗ್ಗೆಯು ಆಳವಾದ ಅಧ್ಯಯನ ಮಾಡಿದಾಗ ದೊರೆತ ಮಾಣಿಕ್ಯವೇ ಯೋಗ. ಮನುಷ್ಯನು ಸೇರಿದಂತೆ ಎಲ್ಲಾ ಜೀವಿಗಳು ತನ್ನಲ್ಲಿ ಮತ್ತು ತನಗೆ ಹೊರಗಿನಿಂದ ಉಂಟಾಗುವ ರೋಗಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಅಂತಹ ಶಕ್ತಿಯನ್ನು ವೃದ್ದಿಸುವ ಮೂಲಕ ಯಾವುದೇ ಕಾಯಿಲೆಯನ್ನು ಗುಣಪಡಿಸಬಹುದು. ಮತ್ತು ಆರೋಗ್ಯದ ಸ್ಥಿತಿಯನ್ನು ಹೆಚ್ಚಿಸಬಹುದು. ಈ ಶಕ್ತಿಯನ್ನ ವೃದ್ದಿಸುವ ಸಾಧನವೇ ಯೋಗವಾಗಿದೆ.

logintomyvoice

ಪಾಶ್ಚಿಮಾತ್ಯರು ಯುದ್ದ ವ್ಯಾಪಾರಗಳ ಮೂಲಕ ಭಾರತವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ಭಾರತವು ಯೋಗದ ಮೂಲಕ ಇಡೀ ಪ್ರಪಂಚವನ್ನೇ ರಕ್ತಪಾತವಿಲ್ಲದೇ ವಶಪಡಿಸಿಕೊಂಡಿದೆ. ಶ್ರೀಕೃಷ್ಣನಿಂದ ಪ್ರತಿಪಾದಿತವಾದ, ಪತಂಜಲಿ ಮಹರ್ಷಿಯಿಂದ ಸೂತ್ರಿಕೃತಗೊಂಡ, ಪರಮಹಂಸ ಯೋಗಾನಂದರಂಥ ಮಹಾನ ಪುರುಷರಿಂದ ಪಾಶ್ಚಾತ್ಯ ನೆಲದಲ್ಲೂ ಜನಪ್ರೀಯಗೊಂಡ ಯೋಗವು ಇಂದು ನಾನಾ ಸ್ವರೂಪದಲ್ಲಿ ಜಗತ್ತಿನ ಮೇಲೆ ದ್ವಿಗಿಜಯ ಸಾರಿದೆ. ವಿಶ್ವಸಂಸ್ಥೆಯು ಯೋಗದಿನ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಂದ ಮತ್ತಷ್ಟು ಹೊಳಪು ಪಡೆದುಕೊಂಡ ಯೋಗಕ್ಕೀಗ 7 ನೇ ವರ್ಷದ ರಾಜಯೋಗ.

logintomyvoice

ಅಂತರಾಷ್ಟ್ರೀಯ ಯೋಗದಿನದ ಇತಿಹಾಸ: ಸೆಪ್ಟಂಬರ್ 27, 2014 ರಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ ಭಾಷಣದಲ್ಲಿ ಜೂನ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸುವ ಪ್ರಸ್ತಾಪ ಮಂಡಿಸಿದರು. ತದನಂತರ ಡಿಸೆಂಬರ 11 ರಂದು ನಡೆದ ಸಾಮಾನ್ಯ ಸಭೆಯಲ್ಲಿ 193 ರಾಷ್ಟ್ರಗಳ ಪೈಕಿ 177 ರಾಷ್ಟ್ರಗಳು ಅನುಮೊದನೆಯನ್ನ ನೀಡಿದ್ದವು. ಹೀಗಾಗಿ ಜೂನ 21 ರಂದು ಅಂತರಾಷ್ಟ್ರೀಯ ಯೋಗದಿನವಾಗಿ ಘೋಷಿಸಲಾಯಿತು. 2015 ಜೂನ 21 ಮೊದಲ ಅಂತರಾಷ್ಟ್ರೀಯ ಯೋಗದಿನವಾಯಿತು. ಈ ಬಾರಿಯ 2021 ರ ಅಂತರಾಷ್ಟ್ರೀಯ ಯೋಗ ದಿನದ ಘೋಷವಾಕ್ಯ :- ಏಕತೆ, ಯೋಗಕ್ಷೇಮಕ್ಕಾಗಿ ಯೋಗ. ಅಸಲಿಗೆ ಜೂನ 21 ನ್ನೇ ಯೋಗದಿನವಾಗಿ ಆಚರಿಸಲು ಕಾರಣ: ಜೂನ 21 ಗ್ರೀಷ್ಮ ಸಂಕ್ರಾತಿಯ ದಿನ. ಸೂರ್ಯ ಉತ್ತರ ದಿಕ್ಕಿನಿಂದ ಪೂರ್ವ ದಿಕ್ಕಿಗೆ ಚಲಿಸುವ ಸಮಯ, ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನ.

logintomyvoice

ರೋಗ ನಿವಾರಕವಾಗಿ ಯೋಗ: ಯೋಗ ಎಂದರೆ ಸಾದಿಸಲಾಗದ್ದನ್ನು ಸಾಧಿಸುವುದು, ಕಡಿವಾಣ ತೊಡಿಸಿ ಕುದುರೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುಂತೆ ಇಂದ್ರಿಯಗಳನ್ನು ನಿಯಂತ್ರಣದಲ್ಲಿಡುವುದು, ಮಾನಸಿಕ ಏಕಾಗ್ರತೆಯನ್ನು ಸಾಧಿಸುವದು, ಜೀವಾತ್ಮವನ್ನು ಪರಮಾತ್ಮನೊಂದಿಗೆ ಒಂದುಗೂಡಿಸುವುದು ಎಂದೆಲ್ಲ ಅರ್ಥೈಸಬಹುದು. ಆದರೂ ಚಂಚಲವಾದ ಮನಸ್ಸನ್ನು ಒಂದಡೆ ನಿಲ್ಲಿಸುವುದೇ ಯೋಗ ಎಂಬುದು ಸರ್ವಸಮ್ಮತವಾಗಿದೆ. ಮನಸ್ಸನ್ನು ಶಿಸ್ತಿಗೆ ಒಳಪಡಿಸುವುದು ಯೋಗ-ಶರೀರ ಮತ್ತು ಮನಸ್ಸು ಇವುಗಳ ಹೊಂದಾಣಿಕೆ ಯೋಗಾಭ್ಯಾಸದಿಂದ ಸಾಧ್ಯ. ಚಿತ್ತಶುದ್ದಿಯನ್ನು ಯೋಗಾಭ್ಯಾಸದಿಂದ ಪಡೆಯಬಹುದು. ಚಿತ್ತವನ್ನು ಗುರಿಯತ್ತ ನಿರ್ದೇಶಿಸಿ ಕೇಂದ್ರಿಕರಿಸುವ ಸಾಮಥ್ರ್ಯವೇ ಯೋಗ. ಯೋಗ ಸಾಧನೆಯಿಂದ ಬುದ್ದಿ ಚಾಂಚಲ್ಯವನ್ನು ಹತೋಟಿಯಲ್ಲಿ ಇರಿಸಬಹುದು. ನೋವು ಮತ್ತು ದು:ಖದಿಂದ ದೂರವಿರಬಹುದು. ಆದುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಬೇಕಾದರೆ ನಿತ್ಯಾನಂದ ಪ್ರಾಪ್ತಿಯಾಗಬೇಕಾದರೆ ರೋಗರುಜಿನಗಳಿಂದ ಮುಕ್ತಿಪಡೆಯಬೇಕಾದರೆ ಯೋಗ ಮಾರ್ಗವು ಅತ್ಯುತ್ತಮವಾದುದು.

logintomyvoice

ಯೋಗ ಎಂಬುಂದು ಕೇವಲ ಪದವಲ್ಲ, ಅದೊಂದು ನಿಯಮ, ಅದೊಂದು ಬದುಕುವ ರೀತಿ, ಅದೊಂದು ಪಯಣ, ಅದೊಂದು ಮಾರ್ಗ, ‘ಯುಜ್ಯತೇ ಅನೇನ ಇತಿಯೋಗ’ ಅಂದರೆ ಸೇರಿಸುವುದು ಯೋಗ. ಯಾವುದನ್ನ ಸೇರಿಸುವುದು? ಯಾವುದಕ್ಕೇ ಸೇರಿಸುವುದು? ನನ್ನನ್ನು ನಿನ್ನೊಂದಿಗೆ, ನಮ್ಮನ್ನು ನಿಮ್ಮೊಂದಿಗೆ, ನಮ್ಮೆಲ್ಲರನ್ನು ಉಳಿದೆಲ್ಲದವರೊಂದಿಗೆ, ಹೀಗೆ ಸೃಷ್ಟಿಯ ಸಮಸ್ತವನ್ನು ಒಂದಕ್ಕೊಂದು ಬೆಸೆಯುವುದೇ ಯೋಗ. ‘ಯೋಗಶ್ಚಿತ್ತವೃತ್ತಿ ನಿರೋಧ’ ಎಂದಿದ್ದಾರೆ. ಅಂದರೇ ಮನಸ್ಸನ್ನು ಸಮಸ್ಥಿತಿಗೆ ತರುವುದೇ ಯೋಗ. ‘ತಾಂ ಯೋಗಮಿತಿ ಮನ್ಯಂತೇ ಸ್ಥಿರಾಮ್ ಇಂದ್ರಿಯ ಧಾರಣಾಮ್’ ಅಂದರೇ ಯಾವುದು ಇಂದ್ರಿಯಗಳನ್ನು ಸ್ಥಿರವಾಗಿರಿಸುವದೋ ಅದೇ ಯೋಗ. ಹೀಗೆ ಯೋಗ ಪದವು ವಿಸ್ಥಾರವಾದದ್ದು ಅದೊಂದು ಕಲೆ.

logintomyvoice

ಓಡುತ್ತಲೋ, ನಡೆಯುತ್ತಲೋ, ಕುಂಟತ್ತಲೋ ಸಾಗುತ್ತಿರುವ ನಾವು ನಮ್ಮ ಪಯಣದ ಹಾದಿಯಲ್ಲಿ ಎಡವಿಬಿದ್ದು, ಬಿದ್ದಲಿಂದ ಏಳಲಾರದೇ ದಿಕ್ಕುಕಾಣದೇ ಪರಿಭ್ರಮಿಸುತ್ತಿರುವಾಗ ಜಾಗತೀಕರಣವು ಜಗತ್ತನ್ನ ಹತ್ತಿರ ತಂದಿದೆ. ಆದರೂ ಜೀವ-ಜೀವಗಳನ್ನು ಬೆಸೆಯಲೇಯಿಲ್ಲ. ನಾನು-ನೀನು ಎನ್ನುವುದು ನಾವಾಗಲೇ ಇಲ್ಲ ಹಿಂದೊಮ್ಮೆ ಎಲ್ಲರೊಳಗೆ ಇದ್ದ ಸಮಾಧಾನ, ಸಾಮಾರಸ್ಯಗಳು ಇಂದು ಕಾಣಿಸುತ್ತಿಲ್ಲ. ಒಂದೊಮ್ಮೆ ಸಹಜವೆನಿಸಿದ್ದ ಶಾಂತಿ, ತೃಪ್ತಿ, ಪ್ರೀತಿಗಳಿಂದು ವಿಶೇಷ ಗುಣಗಳೆನಿಸಿವೆ. ಊರಾಚೆಗಿದ್ದ ಅಸುಂತುಷ್ಟಿ, ದ್ವೇಷ, ಅಸೂಯೆ, ಕ್ರೌರ್ಯಗಳನ್ನು ಸಾಕಿಸಲಹುತ್ತಿದ್ದೇವೆ. ಪ್ರಕೃತಿ ರೂಪಿಸಿದ್ದ ನಿಯಮಗಳನ್ನ ನಮ್ಮ ಧಾವಂತದ ಬದುಕಿಗೆ ಬಲಿಕೊಟ್ಟಿದ್ದೇವೆ. ಬೆಳೆಯನ್ನು ಕಡೆಗಣಿಸಿ ಕಳೆಯನ್ನ ಪೋಷಿಸುತ್ತಿದ್ದೆವೆ. ಇದೆಲ್ಲದರ ಪರಿಣಾಮ ನಮ್ಮ ದೇಹದ ಮೇಲೆ, ಮನಸ್ಸಿನ ಮೇಲೆ, ಪರಸ್ಪರರ ಬಾಂಧ್ಯವದ ಮೇಲೆ, ಸಮಗ್ರ ಮನುಕುಲದ ಮೇಲೆ ಆಗಿರುವುದನ್ನು, ಆಗುತ್ತಿರುವದನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಇದಕ್ಕೊಂದು ಪರಿಹಾರ ಬೇಕಲ್ಲವೇ, ಅದು ನಾನು-ನೀನು ಎನ್ನುವುದನ್ನು ನಾವಾಗಿಸಬೇಕು. ಕಳೆಗಳನ್ನು ಕಳೆದು ಬೆಳೆಗಳನ್ನು ಬೆಳೆಸಬೇಕು. ಅದು ಮನುಷ್ಯನ ದೇಹದ, ಮನಸ್ಸಿನ, ಸಮಾಜದ ಸ್ವಾಸ್ಥವನ್ನ ರಕ್ಷಿಸಿ ಪೋಷಿಸಬೇಕು. ಬದುಕಿಗೊಂದು ಅರ್ಥ ಕೊಡಬೇಕು. ನಡೆಯಲೊಂದು ಹಾದಿ ತೋರಬೇಕು. ಇಂದಿನ ನಮ್ಮ ನೂರಾರು ಸಮಸ್ಯೆಗಳಿಗೊಂದು ಸಮಗ್ರ ಮತ್ತು ಸಮರ್ಥ ಉತ್ತರ ಬೇಕಿದ್ದು, ಆ ಉತ್ತರ ಕಾಲಾತೀತವಾದದ್ದಾಗಿರಬೇಕು. ಅದಕ್ಕೆ ದೇಶ-ಭಾಷೆಗಳ ಮಿತಿಯಿರಬಾರದು ಅದು ಸರ್ವಸಾಮಾನ್ಯವು, ಸರ್ವಯೋಗ್ಯವು ಆಗಿರಬೇಕು. ಅದಕ್ಕಾಗಿಯೇ ನಮ್ಮ ಪೂರ್ವಜರು, ಋಷಿಮುನಿಗಳು ಇಂದಿನ ಸಮಸ್ಯೆಗೊಂದು ಉತ್ತರ ಕಂಡುಕೊಂಡಿದ್ದಾರೆ. ಅದುವೇ ಯೋಗ! ಯೋಗ ಇಂದಿಗೂ ಪ್ರಸ್ತುತ, ಮುಂದಿಗೂ ಪ್ರಸ್ತುತ ಒಟ್ಟಿನಲ್ಲಿ ಯೋಗ ಪ್ರತಿ ಪ್ರಜೆಗೂ ತಲುಪಿ ಯೋಗಕ್ಷೇಮದ ಅಭಿವೃದ್ದಿಯಾಗಲಿ ಎಂಬುದೇ ಎಲ್ಲರ ಆಶಯ.

logintomyvoice

ಜಾತಿ ಭೇದವಿಲ್ಲದೇ ನಾವೆಲ್ಲರೂ ಒಂದೇ ಅನ್ನುವ ಭಾವೈಕ್ಯತೆ ಪ್ರತಿಯೊಬ್ಬರ ಮನದಲ್ಲಿ ನೆಲೆಯೂರವಂತೆ ಮಾಡುವ, ಆರೋಗ್ಯ ಆದಷ್ಟು ಸುಸ್ಥಿತಿಯಿಲ್ಲಡುವ ದಿನವೆಲ್ಲ ನವಚೈತನ್ಯದತ್ತ ಕೊಂಡುಯ್ಯುವ ಈ ಯೋಗವೆಂಬ ಮಾಂತ್ರಿಕ ಶಕ್ತಿಯನ್ನು ಪಡೆಯಲು ಪ್ರತಿಯೊಬ್ಬರು ಮನಸ್ಸಿಟ್ಟು ಕಲಿತು ನಿಮ್ಮ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ ಹಾಗೂ ಜನರ ಮನಸ್ಸಿನಲ್ಲಿರುವ ಯೋಗದ ಕುರಿತಾದ ಸಂಶಯ ಆತಂಕಗಳನ್ನು ದೂರ ಮಾಡಬೇಕು. ಅದರ ಬಗೆಗೆ ತಿಳುವಳಿಕೆ ಉಂಟುಮಾಡಬೇಕೆನ್ನುವುದೇ ಈ ಬರವಣಿಗೆಯ ಉದ್ದೇಶವಾಗಿದೆ.ನಮ್ಮಲ್ಲಿ ಒಂದು ಗಾದೆಯಿದೆ ಅದೆನೆಂದರೆ “ಎಲ್ಲದಕ್ಕೂ ಯೋಗಾವಳಿ ಕೂಡಿ ಬರಬೇಕು”, ಅದಕ್ಕೂ ಯೋಗ ಬೇಕು ಮಾರಾಯಾ, ಎಲ್ಲಾ ಸುಮ್ಮನೆ ಬೇಕು ಅಂದರೆ ಸಿಗುತ್ತಾ? ಅದೃಷ್ಟ ಬೇಕು. ಹೀಗೆ ಜನರಾಡೂವ ರೂಢಿಮಾತು, ಗಾದೆಗಳು ತಮ್ಮೆಲ್ಲರ ಜೀವನದಲ್ಲೂ ಅದಷ್ಟು ಬೇಗ ಕೂಡಿಬರಲಿ, ಯೋಗ ಕಲಿಯುವ ಅವಕಾಶ, ಮನಸ್ಸು ಒದಗಿ ಬರಲಿ ಎಂಬ ಹಾರೈಕೆ ನನ್ನದು. ಮತ್ತೊಮ್ಮೆ ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.
ರಮೇಶಗೌಡ ಆರ್. ಪಾಟೀಲ