Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ

localview news

ಬೆಳಗಾವಿ:ಮಳೆ ನಿಂತಮೇಲೆ ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುದ ಬಾದೆ ಹೆಚ್ಚಾಗಿದ್ದು ಈ ಹುಳುದ ಬಾದೆಯಿಂದ, ಕಬ್ಬು ಬೆಳೆಯು ಸಂಪೂರ್ಣ ಒಣಗಿ ಹೋಗುತ್ತದೆ ಎಂದು ಮತ್ತಿಕೊಪ್ಪ ಕೆವಿಕೆಯ ಕೃಷಿ ವಿಜ್ಞಾನಿಗಳಾದ ಡಾ.ಎಸ್.ಎಸ್.ಹೀರೆಮಠ, ಡಾ.ವಿಶ್ವನಾಥ ಹೇಳಿದ್ದು ಇದರ ಹತೋಟಿಗೆ ಸುರಕ್ಷಾಕ್ರಮ ತಿಳಿಸಿದ್ದಾರೆ.

ಈ ಹುಳಗಳು ಬೇರು ತಿನ್ನುವದರಿಂದ ಬೇರು ತಿನ್ನುವ ಹುಳು, ಗೊಬ್ಬರದ ಹುಳು ಎಂಬುದಾಗಿ ಕರೆಯುತ್ತಾರೆ. ನೀರು, ನಿಲ್ಲಿಸಿ ಬೆಳೆಯುವ ಬೆಳೆಗಳನ್ನು ಬಿಟ್ಟು ಉಳಿದೆಲ್ಲ ಬೆಳೆಗಳಿಗೂ ಗೊಣ್ಣೆ ಹುಳುವಿನ ಬಾಧೆ ತಪ್ಪಿದ್ದಲ್ಲ. ಭಾರತದಲ್ಲಿ 100 ಕ್ಕಿಂತ ಹೆಚ್ಚು ವಿಧವಾದ ಗೊಣ್ಣೆ ಹುಳು ಜಾತಿಗಳಿವೆ. ಕರ್ನಾಟಕದಲ್ಲಿಯೂ ಅನೇಕ ಜಾತಿಯ ಗೊಣ್ಣೆ ಹುಳುಗಳು ಕಂಡು ಬಂದಿವೆ. ಇದು ಸಾಮಾನ್ಯವಾಗಿ ಜೋಳ, ಸಜ್ಜೆ, ಕಾಫಿ, ಅಡಿಕೆ, ಬೇವು, ನುಗ್ಗೆ, ಹುಣಸೆ, ಕಬ್ಬು, ಮೆಣಸಿನಕಾಯಿ, ಶೇಂಗಾ ಬದನೆ, ಅಲಸಂದಿ ಮುಂತಾದ ಬೆಳೆಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಎಲ್ಲಾ ಬೆಳೆಗಳಲ್ಲಿಯೂ ಇದರ ಬಾಧೆಯ ಲಕ್ಷಣ ಒಂದೇ ರೀತಿಯಾಗಿರುತ್ತದೆ.

ಜಿಲ್ಲೆಯಲ್ಲಿ ಇದರ ಬಾಧೆಯ ತೀವ್ರತೆಯಿಂದ ಕಬ್ಬಿನ ಬೆಳೆಯಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಈಗಾಗಲೇ ಸಾಕಷ್ಟು ಕಬ್ಬಿನ ಬೆಳೆಯು ಹಾನಿಯಾಗಿದ್ದು ಇದರ ಸಕಾಲಿಕ ನಿರ್ವಹಣೆ ಅಗತ್ಯ.

ಜೀವನ ಚರಿತ್ರೆ:
ಗೊಣ್ಣೆ ಹುಳು, ಹೊಲೋಟ್ರೈಕಿಯಾ ಸೆರ್ರೇಟಾ ವರ್ಷಕ್ಕೆ ಒಂದು ಬಾರಿ ಜೀವನ ಚಕ್ರವನ್ನು ಮುಗಿಸುತ್ತದೆ. ಸಾಮಾನ್ಯವಾಗಿ ದುಂಬಿಗಳು ಮಳೆಯಾಶ್ರಿತ ಪ್ರದೇಶಗಳಲ್ಲಿ (ವರ್ಷದ ಮೊದಲ ಮಳೆಯಾದಾಗ) ಏಪ್ರಿಲ್-ಮೇ ತಿಂಗಳಲ್ಲಿ ಮತ್ತು ನೀರಾವರಿ ಪ್ರದೇಶಗಳಲ್ಲಿ ಜನವರಿಯಿಂದ ಮೇ ತಿಂಗಳುಗಳಲ್ಲಿ ರಾತ್ರಿ 7.30 ರಿಂದ 8.30 ರೊಳಗೆ ಭೂಮಿಯಿಂದ ಹೊರಬಂದು ಹತ್ತಿರದಲ್ಲಿ ಇರುವ ಬೇವು ಚೊಗಟೆ, ಜಾಲಿ, ಹುಣಸೆ, ನೇರಳೆ ದ್ರಾಕ್ಷಿ ಮತ್ತು ಸೀಬೆ ಮುಂತಾದ ಗಿಡಗಳ ಎಲೆಗಳನ್ನು ತಿನ್ನುತ್ತವೆ.

ಆದರೆ ಬೇವಿಗೆ ಹೆಚ್ಚಿನ ಆಕರ್ಷಣೆ ಹೊಂದಿವೆ. ಈ ಸಮಯದಲ್ಲಿ ಗಂಡು ಮತ್ತು ಹೆಣ್ಣು ದುಂಬಿಗಳು ಸಂಪರ್ಕ ಹೊಂದಿ ಬೆಳಗಾಗುವದೊರಳಗೆ ಮಣ್ಣಿನ ಒಳಗೆ ಸೇರಿ ಸುಮಾರು 8-10 ಸೆಂ.ಮೀ ಆಳದಲ್ಲಿ ಮೊಟ್ಟೆಗಳನ್ನಿಡುತ್ತವೆ. ಸುಮಾರು ಹತ್ತು ದಿನಗಳ ನಂತರ ಮೊಟ್ಟೆಗಳಿಂದ ಒಂದನೇ ಹಂತದ ಮರಿಹುಳುಗಳು (ಗೊಣ್ಣೆ ಹುಳುಗಳು) ಹೊರಬಂದು ಮಣ್ಣಿನಲ್ಲಿ ಲಭ್ಯವಿರುವ ಸಾವಯವ ಪದಾರ್ಥಗಳನ್ನು ತಿನ್ನುತ್ತಾ, ನಂತರ ಬೇರುಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಮೂರು ಸಲ ಪೊರೆಯನ್ನು ಬಿಟ್ಟು ಸುಮಾರು 170-180 ದಿವಸಗಳಲ್ಲಿ ಸಂಪೂರ್ಣವಾಗಿ ಬೆಳೆದ ಮರಿ ಹುಳುಗಳು 20-30 ಸೆಂ.ಮೀ. ಆಳಕ್ಕೆ ಚಲಿಸಿ ತಾವೇ ರಚಿಸಿಕೊಂಡ ಮಣ್ಣಿನ ಕುಡಿಕೆಗಳಲ್ಲಿ ಕೋಶಾವಸ್ಥೆಯನ್ನು ಸೇರುತ್ತವೆ.

ಕೋಶಾವಸ್ಥೆಯ ಅವಧಿ 12-15 ದಿನಗಳು. ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ದುಂಬಿಗಳು ಸುಪ್ತಾವಸ್ಥೆಗೆ ಹೋಗಿ ಜನವರಿ-ಮೇ ತಿಂಗಳಲ್ಲಿ ಹೊರಬರುತ್ತವೆ. ಮೊದಲನೆಯ ಮಳೆಯಾದ ಮರುದಿನ ಹೊಲಗಳಲ್ಲಿ ಬೆರಳಿನ ಗಾತ್ರದ ರಂಧ್ರಗಳನ್ನು ಕಾಣಬಹುದು. ಇಂತಹ ಪ್ರದೇಶಗಳಲ್ಲಿ ಗೊಣ್ಣೆ ಹುಳುವಿನ ಬಾಧೆ ತೀವ್ರವಾಗಿರುತ್ತದೆ.

ಗಿಡದ ಬೇರು ಒಣಗಿ ಗಿಡಗಳು ಬಾಡಿದಾಗ, ಗೊಣ್ಣೆ ಹುಳುವಿನ ಇರುವಿಕೆಯನ್ನು ನೀರಿಕ್ಷಿಸಬಹುದು. ದುಂಬಿಗಳು ದೀಪದ ಬೆಳಕಿಗೆ ಹೆಚ್ಚು ಆಕರ್ಷಕವಾಗುವುದರಿಂದ ಗೊಣ್ಣೆ ಹುಳುವಿನ ಬಾಧೆಯು ವಿದ್ಯುತ್ದೀಪ ಮತ್ತು ಬೆಳಕಿರುವ ಕಡೆ ಹೆಚ್ಚಾಗಿ ಕಂಡುಬರುತ್ತದೆ.

ಸಾಮಾನ್ಯವಾಗಿ ಕೀಟವನ್ನು ಹತೋಟಿಮಾಡಲು ಹೇರಳವಾಗಿ ಕೀಟನಾಶಕವನ್ನು ಶಿಫಾರಸ್ಸು ಮಾಡಲಾಗುತ್ತಿದೆ. ಇದರಿಂದ ರಾಸಾಯನಿಕಗಳು ಕೇವಲ ಮಣ್ಣಿನ ಮಾಲಿನ್ಯವನ್ನು ಉಂಟುಮಾಡುವುದಲ್ಲದೆ ಮಣ್ಣಿನಲ್ಲಿರುವ ಪ್ರಾಣಿ ಹಾಗೂ ಸಸ್ಯ ಪ್ರಬೇಧಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಬಾಧೆಯ ಲಕ್ಷಣ :
ಕಬ್ಬಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಅಲ್ಲಲ್ಲಿ ಒಣಗಿರುವುದು ಇವುಗಳ ಇರುವಿಕೆಯನ್ನು ಸೂಚಿಸುತ್ತದೆ. ಅಂತಹ ಗಿಡಗಳ ಮೇಲ್ಭಾಗವನ್ನು ಕೈಯಿಂದ ಹಿಡಿದು ಎಳೆದರೆ ಸುಲಭವಾಗಿ ಭೂಮಿಯಿಂದ ಕಿತ್ತು ಬರುತ್ತದೆ. ಬಾಧೆಯು ತೀವ್ರವಾದಾಗ ಕಬ್ಬು ಒಣಗಿ ಬಿದ್ದು ನಾಶವಾಗುತ್ತಿದ್ದು ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ನಿರ್ವಹಣಾ ಕ್ರಮಗಳು :
1.ಮುಂಗಾರು ಹಂಗಾಮಿನ ಮೊದಲ ಮಳೆ ಬಿದ್ದ ಕೂಡಲೆ ಆ ದಿನ ರಾತ್ರಿ 7-30 ರಿಂದ 8-30 ರೊಳಗೆ ಪ್ರಖರವಾದ ದೀಪದ ಸಹಾಯದಿಂದ ದುಂಬಿಗಳನ್ನು ಹಿಡಿದು ನಾಶಪಡಿಸಬೇಕು.
2.ಗೊಣ್ಣೆ ಹುಳು (ಹೊಲೋಟ್ರೈಕಿಯಾ ಸೆರ್ರೇಟಾ) ನಿರ್ವಹಣೆಗಾಗಿ ಪ್ರತಿ ಎಕರೆಗೆ 5-10 ಕೆ.ಜಿ. ಮೆಟಾರೈಜಿಯಂ 500 ಕೆ.ಜಿ. ಕಳಿತ ಕೊಟ್ಟಿಗೆ ಗೊಬ್ಬರದೊಂದಿಗೆ ಬೆರೆಸಿ ಮಣ್ಣಿಗೆ ಸೇರಿಸುವುದರಿಂದ ಗೊಣ್ಣೆಹುಳುವಿನ ಮೊದಲನೆ ಹಂತದ ಕೀಟಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಸಮಯದಲ್ಲಿ ನಿಯಂತ್ರಿಸಬಹುದಾಗಿದೆ.
3.ಹೊಸದಾಗಿ ಕಬ್ಬು ನಾಟಿ ಮಾಡುವ ಸಮಯದಲ್ಲಿ ಮೆಟಾರೈಜಿಯಂ ಜೀವಾಣು ಪುಡಿಯನ್ನು 2 ಕೆ.ಜಿ. ಪ್ರತಿ ಎಕರೆಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಭೂಮಿಯಲ್ಲಿ ಹಾಕಬೇಕು.
4.ಬೆಳೆ ಕಟಾವಾದ ನಂತರ ಆಳವಾಗಿ ಉಳುಮೆ ಮಾಡುವುದರಿಂದ ಭೂಮಿಯೊಳಗಿನ ಕೀಟ ಮೇಲೆ ಬಂದು ಸಾಯುತ್ತದೆ.
5.ದುಂಬಿಗಳು ಹೊರಬಂದ ತಕ್ಷಣ ಮರಗಳನ್ನು ಆಶ್ರಯಿಸುತ್ತವೆ. ಅಂತಹ ಮರಗಳನ್ನು ಗುರುತಿಸಿ ಕಾರ್ಬರಿಲ್ ಶೇಕಡಾ 0.05 ಕೀಟನಾಶಕವನ್ನು ಸಿಂಪಡಿಸಬೇಕು.
6.ನಿಂತ ಬೆಳೆಯಲ್ಲಿ ಗೊಣ್ಣೆ ಹುಳುವಿನ ಬಾಧೆ ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ 10 ಮಿ.ಲೀ. ಕ್ಲೋರ್ಫೈರಿಫಾಸ್ 20 ಇ.ಸಿ. ಯನ್ನು ಸೇರಿಸಿ ಪ್ರತಿ ಹೆಕ್ಟೇರಿಗೆ 500 ಲೀ. ನಂತೆ ಬೆಳೆಯ ಬುಡದಲ್ಲಿ ಹಾನಿಗೊಳಗಾದ ಬೆಳೆಯ ಸುತ್ತ ಹಾಕಬೇಕು.
7.ಎಪ್ರಿಲ್-ಮೇ ತಿಂಗಳಲ್ಲಿ ಬಲೆ ಬೆಳೆ (Trap crop) ಉಪಯೋಗ:- ಬೇವು ಅಥವಾ ಜಾಲಿ ಮರಗಳ ಟೊಂಗೆಗಳನ್ನು ಸುಮಾರು 10 ಅಡಿ ತುಂಡುಗಳನ್ನಾಗಿ ಕತ್ತರಿಸಿ ಎಲೆಗಳ ಸಮೇತ ಹೊಲಗಳ ಬುಡಗಳ ಮೇಲೆ ನೆಟ್ಟು ಇವುಗಳ ಎಲೆಗಳ ಮೇಲೆ ಯಾವುದಾದರೊಂದು ಕೀಟನಾಶಕವನ್ನು ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ದುಂಬಿಗಳನ್ನು ಮೊಟ್ಟೆ ಇಡುವ ಮೊದಲೇ ನಾಶಪಡಿಸಬಹುದು.
8.ನೀರಿನ ಸೌಕರ್ಯವಿರುವ ಕಡೆ ಹುಳುಗಳು ಪ್ರೌಢಾವಸ್ಥೆಗೆ ಬರುವ ಸಮಯದಲ್ಲಿ ಅಂದರೆ ಎಪ್ರಿಲ್, ಮೇ,ಜೂನ್ ಹಾಗೂ ಜುಲೈ ತಿಂಗಳಲ್ಲಿ ಕೆಸರು ಗದ್ದೆಯನ್ನಾಗಿಸಲು ಚೆನ್ನಾಗಿ ನೀರು ಹಾಯಿಸುವುದರಿಂದ ಮುಂದಿನ ಹಾನಿಯನ್ನು ಕಬ್ಬು ಬೆಳೆಯಲ್ಲಿ ಕಡಿಮೆ ಮಾಡಬಹುದು.
9.ಪೂರ್ಣ ಬೆಳೆದ ಗೊಣ್ಣೆಹುಳುಗಳ ಹತೋಟಿಗೆ ಯಾವ ರಾಸಾಯನಿಕಗಳು ಪರಿಣಾಮಕಾರಿಯಾಗಿರುವುದಿಲ್ಲ

ಶೀಲಿಂಧ್ರ ಕೀಟನಾಶಕ ಮೆಟಾರೈಜಿಯಂ ಅನಸೊಪ್ಲಿಯೇ ಬಳಕೆಯು ಅತಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವ ಪರಿಸರ ಸ್ನೇಹಿ ಕೀಟ ನಿರ್ವಹಣಾ ತಾಂತ್ರಿಕತೆಯಾಗಿದೆ. ಇವು ನಿಸರ್ಗದಲ್ಲಿ ಪುನರುತ್ಪತ್ತಿಯಾಗುವುದರಿಂದ ಪದೇ ಪದೇ ಇತರ ಕೀಟನಾಶಕಗಳಂತೆ ಬಳಸುವುದು ಅವಶ್ಯವಿಲ್ಲ.ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಮೊ ನಂ.9535604747 ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.