ವೈದ್ಯರೆಂಬ ಪ್ರತ್ಯಕ್ಷ ದೇವರೇ, ನಿಮಗೊಂದು ಸಲಾಂ!
ಇಂತಹ ವೈದ್ಯರಿಗೆ ನಾವು ಎಷ್ಟು ಕೃತಜ್ಞರಾಗಿದ್ದರು ಸಾಲದು, ಹೀಗಾಗಿ ಕಣ್ಣಿಗೆ ಕಾಣುವ ದೇವರಿಗೆ ಧನ್ಯವಾದ ಹೇಳಲು ಮೀಸಲಾಗಿರುವ ದಿನವೇ ಇವತ್ತು. ರಾಷ್ಟ್ರೀಯ ವೈದ್ಯರ ದಿನ. ರೋಗ ಬರುವವರೆಗೂ ವೈದ್ಯರ ಮಹತ್ವ ಅರ್ಥ ಆಗುವುದಿಲ್ಲ.
ರೋಗ ಬಂದಾಗ ವೈದ್ಯರ ಮಹತ್ವ ಅರ್ಥ ಆಗುತ್ತೆ. ಅವರ ಒಂದು ಸಾಂತ್ವನದ ಮಾತು ಧೈರ್ಯ ತುಂಬುತ್ತದೆ. ವೈದ್ಯರಿಲ್ಲದ ಜಗತ್ತನ್ನು ಎಣಿಸಲೂ ಸಾಧ್ಯವಿಲ್ಲ. ನಮ್ಮ ಜೀವ ಉಳಿಸುವ ಆಪತ್ಬಾಂಧವನಂತೆ ಕಾಪಾಡುವ ವೈದ್ಯರಿಗೆ ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಕೋರೋಣ.
ನಾವು ಆಚರಿಸು ಎಲ್ಲ ವಿಶೇಷ ದಿನಗಳಿಗೂ ಒಂದು ಮಹತ್ವ ಅಥವಾ ಹಿನ್ನಲೆ ಇದ್ದೇ ಇರುತ್ತದೆ. ಅದೇ ರೀತಿ ರಾಷ್ಟ್ರೀಯ ವೈದ್ಯರ ದಿನದ ಹಿಂದೆಯೂ ಒಂದು ವಿಶೇಷ ಕಾರಣವಿದೆ. ಭಾರತದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿರುವ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ.ಬಿಧಾನ ಚಂದ್ರರಾಯ್ ಅವರ ಗೌರವರ್ಥವಾಗಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.
ಮೊದಲ ಬಾರಿಗೆ ರಾಷ್ರ್ಟೀಯ ವೈದ್ಯರ ದಿನವನ್ನು ಜುಲೈ 1991 ರಲ್ಲಿ ಆಚರಿಸಲಾಯಿತು. ಡಾ.ಬಿಧಾನ ಚಂದ್ರರಾಯ್ ಅವರು 1 ಜುಲೈ 1882 ರಂದು ಜನಿಸಿದ್ದು. ಇವರು ಮರಣಹೊಂದಿದ್ದು 1 ಜುಲೈ 1962 ರಂದು ಹೀಗಾಗಿ ಇವರ ಸ್ಮರಾಣರ್ಥ ಜುಲೈ 1 ನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲಾಗುತ್ತದೆ. 2021 ರಾಷ್ಟ್ರೀಯ ವೈದ್ಯ ದಿನದ ಘೋಷವಾಕ್ಯ: ಕುಟುಂಬ ವೈದ್ಯರೊಂದಿಗೆ ಭವಿಷ್ಯವನ್ನು ನಿರ್ಮಿಸುವುದು.
ಪುರಾಣಗಳಲ್ಲಿ ವೈದ್ಯರ ಬಗ್ಗೆ ಉಲ್ಲೇಖವಾಗಿರುವ ಎರಡು ಶ್ಲೋಖಗಳನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು. ಶರೀರೇ ಜರ್ಜರಿಭೂತೆ ವ್ಯಾಧಿಗ್ರಸ್ಥೆ ಕಲೆಬೆರೆ, ಜೌಷಧ: ಜಾಹ್ನವಿತೋಯಂ ವೈದ್ಯೋ ನಾರಾಯಣೋ ಹರಿ:ಈ ಶ್ಲೋಕದ ಅರ್ಥ ಮಾನವನ ದೇಹ ರೋಗಗ್ರಸ್ಥಗೊಂಡಾಗ ಪವಿತ್ರ ಗಂಗಾ ನೀರಿನಂತಹ ಜೌಷಧಿ ನೀಡುವ ವೈದ್ಯರು ಭಗವಂತ ನಾರಾಯಣನಿಗೆ ಸಮಾನ.
ಅದರಂತೆ ವೈದ್ಯರಾಜ ನಮಸ್ತುಭಂ ಯಮರಾಜ ಸಹೋದರ ಯಮಸ್ತು ಹರತಿ ಪ್ರಾಣಾನ್ ವೈದ್ಯೋ ಪ್ರಾಣಾನ್ ಧನನಚ. ಅಂದರೆ ವೈದ್ಯನು ಯಮರಾಜನ ಸಹೋದರನಿದ್ದಂತೆ ಯಮರಾಜ ಕೇವಲ ಪ್ರಾಣವನ್ನು ಕಿತ್ತುಕೊಂಡರೆ, ವೈದ್ಯನು ಪ್ರಾಣದ ಜೊತೆಗೆ ದುಡ್ಡನ್ನು ಸಹ ಕಿತ್ತುಕೊಳ್ಳುತ್ತಾನೆ.
ಕರೋನಾದಂತಹ ಈ ಸಂಕಷ್ಟದ ಸಮಯದಲ್ಲಿ ಬಹುಷ: ಮೇಲಿನ ಎರಡು ಅಭಿಪ್ರಾಯಗಳನ್ನು ನಾವು ಜನರಲ್ಲಿ ಕಾಣಬಹುದು.ಕಷ್ಟದಲ್ಲಿ ಕೈ ಹಿಡಿಯುವವರು ಎದುರು ನಿಂತಾಗ ಅವರಲ್ಲಿ ದೇವರು ಕಾಣುತ್ತಾರೆ. ರೋಗಿಗಳು ವೈದ್ಯರನ್ನು ಅದೇ ರೀತಿ ನೋಡುತ್ತಾರೆ. ನಂಬಿಬಂದ ರೋಗಿಗಳನ್ನು ಆರೈಕೆ ಮಾಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕ. ಯಾರ ಮುಖ ಪ್ರಸನ್ನವಾಗಿದೆಯೋ, ಯಾರ ಹೃದಯಲ್ಲಿ ಪ್ರೀತಿ ಇದೆಯೋ, ಯಾರ ಕೈ ಕಾಲುಗಳು ಪರೋಪಕಾರಕ್ಕಾಗಿ ಮಿಡಿಯುತ್ತಿಯೋ ಅಂಥವರು ಯಾರಿಗೆ ತಾನೆ ಪೂಜ್ಯರೆನಿಸುವುದಿಲ್ಲ? ಅಂಥವರಲ್ಲಿ ವೈದ್ಯರು ಕೂಡ ಒಬ್ಬರು. ನಮ್ಮೆಲ್ಲರ ಆರೋಗ್ಯವನ್ನು ಸುಸ್ಥಿರವಾಗಿರಿಸಿ, ಸಮಾಜವನ್ನು ರೋಗ ಮುಕ್ತವನ್ನಾಗಿಸಿ ಸುಂದರ ಆರೋಗ್ಯಪೂರ್ಣ ಸಮಾಜದ ನಿರ್ಮಾತೃಗಳೇ ಆ ವೈದ್ಯರು.
ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಸಮಾಜದಲ್ಲಿ ವೈದ್ಯರಿಗೆ ಗೌರವಯುತ ಸ್ಥಾನವಿದೆ. ನಮ್ಮೆಲ್ಲರ ಜೀವ ಕಾಪಾಡುವ ಸೃಷ್ಠಿಕರ್ತ ದೇವರಂತೆ ಕಂಡು ಬರುವ ಈ ವೈದ್ಯರು, ನಮ್ಮನ್ನು ಸಾವು-ನೋವಿನ ಬದುಕಿನ ಅಂತಿಮ ಪಯಣದಲ್ಲಿ ಹೋರಾಟ ಮಾಡಿ ರೋಗಿಯ ಜೀವ ಉಳಿಸಿಕೊಳ್ಳುವ ಪರಿ ನಿಜಕ್ಕೂ ಅತ್ಯದ್ಬುತ. ಓರ್ವ ಆದರ್ಶ ವೈದ್ಯ ತನ್ನ ಕುಟುಂಬದ ನೋವು- ನಲಿವುಗಳನ್ನು ಬದಿಗಿರಿಸಿ ತನ್ನ ಮುಂದೆ ಮಲಗಿದ ರೋಗಿಯ ಪ್ರಾಣವನ್ನು ಊಳಿಸಿಕೊಳ್ಳಲು ಅದೇಷ್ಟೋ ಹರಸಾಹಸಪಡುತ್ತಾನೆ.
ಅಂದರೆ ನಮ್ಮೆಲ್ಲರ ಪಾಲನಕರ್ತ ಮೂರ್ತಿ ವೈದ್ಯರು. ರೋಗಿಯ ಬಗ್ಗೆ ಒಂದಿಷ್ಟು ಅಸಹ್ಯ ಪಟ್ಟುಕೊಳ್ಳದೇ ಹೆತ್ತ ತಾಯಿಯಂತೆ ನೋಡಿಕೊಳ್ಳುವ ಅವರ ಪರಿ ಮಾನವೀಯತೆಯನ್ನು ಬಿಂಬಿಸುತ್ತದೆ.
ಮಾನವೀಯತೆಯ ಪ್ರತಿರೂಪ: ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ತೊರೆದು ಸಂದಿಗ್ದ ಪರಿಸ್ಥಿತಿಯಲ್ಲಿ ರೋಗಿಯ ಸೇವೆಗೆ ಅಣಿಯಾಗುವ ಇವರ ವೃತ್ತಿ ವೃತ್ತಿಯೇ ಅಲ್ಲ. ಅದು ಮಾನವೀಯ ಧರ್ಮ. ರಾತ್ರಿ- ಹಗಲು ಎನ್ನದೇ ತಮ್ಮ ಆರೋಗ್ಯದ ಕಡೆಗೆ ಒಂದಿಷ್ಟು ಗಮನ ನೀಡದೇ ತಮ್ಮ ಬಂಧು-ಬಳಗದ ಪ್ರೀತಿಯ ಪರಿಸರವನ್ನು ಮರೆತು ಸೇವೆಗೈಯುವ ಇವರ ಕ್ರೀಯಾಶೀಲತೆಯ ಕಾಯಕವು ಅಭಿಮಾನ ಮೂಡಿಸುತ್ತದೆ.
ತಮ್ಮ ಅದೇಷ್ಟೋ ಕಷ್ಟಗಳನ್ನು ಮರೆತು ರೋಗಿಯೊಂದಿಗೆ ನಗು ಮುಖದಿಂದ ಮಾತನಾಡುತ್ತಾ ಭರವಸೆಯ ಮಾತುಗಳಿಂದ ರೋಗಿಯಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತಾರೆ. ಪ್ರೀತಿ ತುಂಬಿದ ಮಾತುಗಳಿಂದ ರೋಗಿಗಳಲ್ಲಿ ಆಪ್ತ ಸಂಜೀವಿನಿಯಂತೆ, ಗೆಳೆಯನಂತೆ ಕಂಡು ಬರುತ್ತಾರೆ. ಹೀಗಾಗಿ ಇಡೀ ಸಮಾಜ ವೈದ್ಯಲೋಕವನ್ನು ಗೌರವಿಸಿ ನಮಿಸುತ್ತದೆ.
ಅವರ ನಿಸ್ವಾರ್ಥ ಸೇವೆಗೆ ತಲೆದೂಗುತ್ತದೆ. ನಮ್ಮೆಲ್ಲರನ್ನು ಕಾಪಾಡುವ ದೇವರು ವೈದ್ಯರು ಎಂಬ ಭಾವ ಸಮಾಜದ ಕಟ್ಟ ಕಡೆಯ ವ್ಯಕ್ತಿಯಲ್ಲು ಪುಟಿದೇಳುತ್ತದೆ. ನಂಬಿ ಬಂದ ರೋಗಿಗಳನ್ನು ನಗುಮುಖದಿಂದ ಸ್ವಾಗತಿಸಿ ಆರೈಕೆ ಮಾಡಿ ಕಳಿಸಿಕೊಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕವೇ ಸರಿ.
ರೋಗಿ-ವೈದ್ಯರ ಸಂಬಂಧ ತುಂಬಾ ವಿಶೇಷವಾದದ್ದು: ರೋಗಿಗೆ ಚಿಕಿತ್ಸೆ ನೀಡುವುದುರ ಜೊತೆ-ಜೊತೆಗೆ ತೊಂದರೆಗಳನ್ನು ಆಲಿಸುವ ಕಿವಿ, ಭರವಸೆ ಮಾಡಿಸುವ ಮಾತು, ನೋವಿನಲ್ಲೂ ಸಾಥನೀಡುವ ಕೈ, ತಳಮಳ ಅರ್ಥಮಾಡಿಕೊಳ್ಳುವ ಹೃದಯ, ನೋವು ಮರೆಸುವ ತಿಳಿಹಾಸ್ಯ, ವೈದ್ಯರು ಇವನ್ನೆಲ್ಲಾ ನೀಡಿ ರೋಗಿ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತಾರೆ.
ಒಬ್ಬ ರೋಗಿ ಸಾವಿನ ದವಡೆಯಿಂದ ಹೊರ ಬಂದಾಗ ಅರವಳಿಕೆ ಯಶಸ್ವಿಯಾಗಿ ಚಿಕಿತ್ಸೆ ಸಫಲವಾದಾಗ ಪ್ರಪಂಚಕ್ಕೆ ಒಂದು ಜೀವವನನ್ನು ತಂದಾಗ ವೈದ್ಯನಿಗಾಗುವ ಖುಷಿ, ತೃಪ್ತಿ ಉತ್ತುಂಗಮಟ್ಟದು.ಇಂದು ಹೆತ್ತ ತಂದೆ-ತಾಯಿಗಳನ್ನು ನಂಬದ ಮಕ್ಕಳಿದ್ದಾರೆ. ಆದರೆ ವೈದ್ಯರನ್ನು ಮತ್ತು ಅವರು ಹೇಳಿದ ಮಾತುಗಳನ್ನ ಎಲ್ಲರೂ ನಂಬುತ್ತಾರೆ. ಅಂತಹ ನಂಬಿಕೆಯ ಕ್ಷೇತ್ರ ಅದು ವೈದ್ಯಕೀಯ ಕ್ಷೇತ್ರ. ಆದರೆ ಅದನ್ನು ಉಳಿಸಿಕೊಳ್ಳುವ ಹೊರೆಯನ್ನು ವೈದ್ಯರು ಹೊರಬೇಕು.
ಏಕೆಂದರೆ ಇತ್ತೀಚಿಗೆ ಚಿಕಿತ್ಸೆಯ ಹೆಸರಿನಲ್ಲಿ ಬೇಜವಾಬ್ದಾರಿ ಮೋಸ ಮಾಡುವಂತಹ ನಕಲಿ ವೈದ್ಯರ ಸಮಸ್ಯೆಯೂ ಹೆಚ್ಚಿದೆ. ವೈದ್ಯರ ನಿರ್ಲಕ್ಷತೆಯೇ ರೋಗಿ ಸಾಯಲು ಕಾರಣ ಎಂಬ ಭಾವವು ಎಳ್ಳಷ್ಟು ಬರಬಾರದು, ಕೆಲವೊಮ್ಮೆ ನಕಲಿ ವೈದ್ಯರು ಮಾಡಿದ ತಪ್ಪಿನಿಂದಾಗಿ ಕೂಡ ನಿಜವಾದ ವೈದ್ಯರಿಗೆ ಸಂಕಷ್ಟವಾಗಿ ಪರಿಣಮಿಸಬಹುದು. ವೈದ್ಯರು ನಮ್ಮ ಎರಡನೇ ತಂದೆ ತಾಯಿಗಳು ಇದ್ದಂತೆ. ಅವರ ಮಾನವೀಯ ಕರ್ತವ್ಯವನ್ನು ಆರಾಧಿಸೋಣ, ಪೂಜಿಸೋಣ, ಇಡೀ ದೇಶದ ಆರೋಗ್ಯವನ್ನ ಕಾಪಾಡುವ ವ್ಯವಸ್ಥಾಪಕರು ನಮ್ಮ ವೈದ್ಯರು ಎಂಬ ನಿಲುವಿಗೆ ನಾವೆಲ್ಲ ಬದ್ದರಾಗಬೇಕು.
ಸಮಾಜದ ಇತರೆಡೆ ಇರುವಂತೆ ವೈದ್ಯ ರಂಗದಲ್ಲಿಯೂ ಹುಳುಕು ಇದೆ. ಅಪ್ರಮಾಣಿಕರು, ಧನದಾಹಿಗಳು ಇದ್ದಾರೆ. ಆದರೆ ಅದಕ್ಕಾಗಿ ಇಡೀ ವೈದ್ಯ ಕುಲವನ್ನೇ ಹಳಿಯುವದರಿಂದ ಇನ್ನೂ ಬಹುಸಂಖ್ಯೆಯಲ್ಲಿರುವ ಪ್ರಾಮಾಣಿಕ ವೈದ್ಯರ ಮನೋಬಲ ಕುಗ್ಗುತ್ತದೆ. ಇದು ಹೀಗೆಯೇ ಮುಂದುವರಿದಲ್ಲಿ ಮುಂದೊಂದು ದಿನ ಇಡೀ ಸಮಾಜ ಇದಕ್ಕಾಗಿ ಭಾರಿ ದಂಡ ತೆರೆಬೇಕಾಗುವುದರಲ್ಲಿ ಸಂಶಯವಿಲ್ಲ. ವೈದ್ಯವಿಜ್ಞಾನ ಇತಿಮಿತಿಗಳಲ್ಲದೇ ವೈದ್ಯರಲ್ಲಿ ಮಾನವನ ಸಹಜ ಇತಿಮಿತಿಗಳು ಇರುತ್ತವೆ.
ಉದಾಹರಣೆಗೆ ಅಪರೂಪದ ಕಾಯಿಲೆಗಳು ಬಗ್ಗೆ ಕೆಲವೊಮ್ಮೆ ವೈದ್ಯರಿಗೂ ಅಷ್ಟೊಂದು ಅರಿವಿಲ್ಲದೇ ಇರಬಹುದು. ಮೇಲ್ನೊಟಕ್ಕೆ ಒಂದು ಕಾಯಿಲೆ ಎಂದು ಕಂಡು ಬಂದದ್ದು ಅದಲ್ಲ ಎಂದು ಅರಿವಾಗುವಷ್ಟರಲ್ಲಿ ವಿಳಂಬ ಆಗಬಹುದು. ಅದಲ್ಲದೆ ಸಮರ್ಪಕ ಚಿಕಿತ್ಸೆಗೆ ಪೂರಕವಾಗುವ ವ್ಯವಸ್ಥೆ ಎಲ್ಲ ವೈದ್ಯರಿಗೆ ಎಲ್ಲ ಕಾಲಕ್ಕೂ ಲಭ್ಯವಿರುವುದಿಲ್ಲ. ಹೀಗೆ ಹತ್ತು ಹಲವು ಕಾರಣಗಳಿಂದ ರೋಗಿಗೆ ಸಿಕ್ಕ ಚಿಕಿತ್ಸೆ ಅಸರ್ಮಪಕ ಎನ್ನಿಸಿಕೊಳ್ಳಬಹುದು.
ಆದರೆ ಇವ್ಯಾವವು ವೈದ್ಯಕೀಯ ನಿರ್ಲಕ್ಷ ಎಂಬ ಆರ್ಥವ್ಯಾಪ್ತಿಯೊಳಗೆ ಬರಲಾರವು. ವೈದ್ಯರಿಗೂ ಕೌಟುಂಬಿಕ ಜೀವನವೊಂದಿರುತ್ತದೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳು ತಾಪತ್ರಯಗಳು ಇರುತ್ತವೆ ಎಂಬುದನ್ನು ನಾವು ಮನಗಾಣಬೇಕು. “ತಮ್ಮ ಕೌಶಲ್ಯ ಮತ್ತು ಮಾನವೀಯತೆಯನ್ನು ಒಂದುಗೂಡಿಸಿಕೊಂಡು, ಇತರರ ಆರೋಗ್ಯಕ್ಕಾಗಿ ಶ್ರಮಿಸುವವರು ಈ ಭೂಮಿಯಲ್ಲೇ ಶ್ರೇಷ್ಟರು ಜೀವರಕ್ಷಣೆ ಮತ್ತು ಮರುಚೈತನ್ಯ ನೀಡುವಿಕೆಯು ಒಂದು ಜೀವದ ಸೃಷ್ಟಿಯಷ್ಟೇ ಉದಾತ್ತ ಕಾರ್ಯವಾಗಿರುವುದರಿಂದ ಅಂತಹವರು ದೈವತ್ವವನ್ನು ಪಡೆಯುತ್ತಾರೆ”. ಎನ್ನುವ ಪ್ರೆಂಚ್ ತತ್ವಜ್ಞಾನಿ ವೋಲ್ಟೇರ್ ಮಾತಿಗೆ ಊದಾಹರಣೆಯಂತಿರುವ ಸಮಾಜಕ್ಕೆ ಸೇವೆ ಸಲ್ಲಿಸಿದವರು ಡಾ. ಬಿದನ ಚಂದ್ರರಾಯ ಇಂತಹವರ ಸ್ಮರಣೆಯ ಜೊತೆಗೆ ತಮ್ಮ ವೈಯಕ್ತಿಕ ಬದುಕು ಹಾಗೂ ಆರೋಗ್ಯವನ್ನು ಲೆಕ್ಕಿಸದೇ ನಮಗಾಗಿ ಶ್ರಮಿಸುತ್ತಿರುವ ಸಮಸ್ತ ವೈದ್ಯ ಪರಿವಾರಕ್ಕೆ ಜುಲೈ 1 ರ ಈ ಸುದಿನ ನಾವೆಲ್ಲರೂ ಕೃತಜ್ಞತೆ ಮತ್ತು ಮಗದೊಮ್ಮೆ ಧನ್ಯವಾದ ಸಲ್ಲಿಸೋಣ.
ರಮೇಶಗೌಡ. ಆರ್. ಪಾಟೀಲ