Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಜಲಜೀವನ ಮಿಷನ್- ಕುಡಿಯುವ ನೀರು ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಉಸ್ತುವಾರಿ ಸಚಿವ ಕಾರಜೋಳ ಸೂಚನೆ

localview news

ಬೆಳಗಾವಿ ಎಲ್ಲರಿಗೂ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಮಂತ್ರಿಗಳು ಜಲಜೀವನ ಮಿಷನ್ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಐದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕೇಂದ್ರ ಸರಕಾರದ ಈ ಹಣಕಾಸು ನೆರವು ಬಳಸಿಕೊಂಡು ಜಿಲ್ಲೆಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ 2021-22 ನೇ ಸಾಲಿನ ಕೆಡಿಪಿ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುರಗೋಡಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು ನಿರಂತರ ವಿದ್ಯುತ್ ಒದಗಿಸಲು ಅಗತ್ಯವಿರುವ ಎಕ್ಸ್‌ಪ್ರೆಸ್‌ ಫೀಡರ್ ಲೈನ್ ನಿರ್ಮಿಸಿ ಕೊಡಬೇಕು ಎಂದು ಹೆಸ್ಕಾಂ ಮತ್ತು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ 3 ನೇ ಅಲೆ ನಿರ್ವಹಣೆ- ಸಿದ್ಧತೆಗೆ ಸೂಚನೆ:
ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಾದರೆ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಕ್ಕಳನ್ನು ಒಟ್ಟಿಗೆ ಇರಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.ಮೂರನೇ ಅಲೆಯ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿವೆ. ಆದರೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಗೊಬ್ಬರ ಮಾರಾಟ-ಪಿಕೆಪಿಎಸ್ ಗಳಿಗೆ ಲೈಸೆನ್ಸ್ ನೀಡಲು ನಿರ್ದೇಶನ:
ಗೊಬ್ಬರ ಮಾರಾಟಕ್ಕೆ ಸಹಕಾರಿ ಸಂಸ್ಥೆಗಳಿಗೆ ಮುಕ್ತವಾಗಿ ಲೈಸೆನ್ಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 85 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಸಮರ್ಪಕ ಪೂರೈಕೆಗೆ ಅನುಕೂಲವಾಗುವಂತೆ ರೈತರ ನೇತೃತ್ವದ ಪಿಕೆಪಿಎಸ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲೈಸೆನ್ಸ್ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ.

ಸಹಕಾರಿ ಸಂಘಗಳಿಗೆ ಗೊಬ್ಬರ ಮಾರಾಟಕ್ಕೆ ಲೈಸೆನ್ಸ್ ನೀಡುವಾಗ ಯಾವುದೇ ರೀತಿಯ ಷರತ್ತುಗಳನ್ನು ಹಾಕಬಾರದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.550 ಪಿಕೆಪಿಎಸ್ ಗಳಿಗೆ ಈಗಾಗಲೇ ಲೈಸೆನ್ಸ್ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾಹಿತಿಯನ್ನು ನೀಡಿದರು.

ಬೆಳೆವಿಮೆ ಪರಿಹಾರ ತಾರತಮ್ಯ ನಿವಾರಣೆಗೆ ಸೂಚನೆ:
ಧಾರವಾಡ ಜಿಲ್ಲೆಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಗ್ರಾಮಗಳ ರೈತರಿಗೆ ಬೆಳೆವಿಮೆ ಪರಿಹಾರ ನಿಗದಿಯಲ್ಲಿ ಹಲವಾರು ವರ್ಷಗಳಿಂದ ಮುಂದುವರಿದಿರುವ ತಾರತಮ್ಯ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯುತ್ ವಿತರಣಾ ಕೇಂದ್ರಗಳ ಉನ್ನತೀಕರಣಕ್ಕೆ ಕ್ರಮ:
ಪ್ರವಾಹ ಸಂದರ್ಭದಲ್ಲಿ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ವಿದ್ಯುತ್ ಪರಿವರ್ತಕಗಳು, ವಿದ್ಯುತ್ ವಾಹಕಗಳು, ಕಂಬಗಳು ಹಾಗೂ ವಿದ್ಯುತ್ ತಂತಿ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದರು.ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ, ಚಿಕ್ಕೋಡಿ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ ಹೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಸೂಕ್ತ ಜಾಗೆ ಗುರುತಿಸಬೇಕು. ಸರ್ಕಾರಿ ಜಾಗೆ ಲಭ್ಯವಿದ್ದರೆ ಜಿಲ್ಲಾಧಿಕಾರಿಗಳು ತಕ್ಷಣವೇ ಮಂಜೂರು ಮಾಡುತ್ತಾರೆ. ಒಂದು ಖಾಸಗಿ ಜಾಗೆ ಗುರುತಿಸಿದರೂ ಖರೀದಿಗೆ ಅನುಮತಿ ನೀಡಲಾಗುವುದು ಎಂದರು.33 ಕೆ.ವಿ. ವಿದ್ಯುತ್ ಸ್ಟೇಷನ್ ಗಳನ್ನು 110 ಕೆ.ವಿ. ಗೆ ಉನ್ನತೀಕರಿಸಲು ಶಾಸಕರು ಜಾಗೆ ಒದಗಿಸಿಕೊಟ್ಟರೆ ವಿದ್ಯುತ್ ಸ್ಟೇಷನ್ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿದ್ಯುತ್ ಸೋರಿಕೆ ಮತ್ತು ಕಳ್ಳತನದಿಂದ ಶೇ.18 ರಷ್ಟು ವಿದ್ಯುತ್ ನಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಅಗತ್ಯ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸುಳ್ಳುಜಾತಿ ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳ ಪ್ರತ್ಯೇಕ ಸಭೆಯನ್ನು ನಡೆಸಿ ಸಮಗ್ರವಾಗಿ ಚರ್ಚೆ ನಡೆಸಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಪ್ರವಾಹದಿಂದ ಹಾನಿಗೊಳಗಾಗಿರುವ ಸಂಪರ್ಕ ಸೇತುವೆ ಮತ್ತಿತರ ಮೂಲಸೌಕರ್ಯಗಳ ಯಾವುದಾದರೂ ಕೆಲಸ ಉಳಿದುಕೊಂಡಿದ್ದರೆ ಹೊಸದಾಗಿ ಪ್ರಸ್ತಾವ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹಕ್ಕುಗಳನ್ನು ನೀಡಿ ಅವರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡರೆ ಅವರಿಗೆ ಉತಾರ ಸಿಗುತ್ತದೆ. ಆಗ ಮಾತ್ರ ಅವರಿಗೆ ಬ್ಯಾಂಕಿನಿಂದ ಸಾಲ ದೊರಕುತ್ತದೆ. ಅದೇ ಸಾಲದ ಹಣದಿಂದ ಅವರು ಉಳಿದ ಕಂತುಗಳನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವೆಯರು, ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ, ವಿಕಲಚೇತನರಿಗೆ ಪಿಂಚಣಿ ನೀಡಲು ಅನುಕೂಲ ಆಗುವಂತೆ ಗ್ರಾಮ ಮಟ್ಟದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ರಾಷ್ಟ್ರೀಯ ಭದ್ರತಾ ಯೋಜನೆಯಡಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನರ ಪಿಂಚಣಿ ವಿತರಣೆ ಸಮರ್ಪಕವಾಗಿ ನಡೆದಿದೆ. ಅರ್ಜಿಗಳು ಬಾಕಿ ಇರುವುದಿಲ್ಲ ಎಂದು ತಿಳಿಸಿದರು.

ಮಕ್ಕಳ ಚಿಕಿತ್ಸೆಗೆ ಅನುಕೂಲವಾಗುವಂತೆ 420 ಆಕ್ಸಿಜನ್ ಸೌಲಭ್ಯ ಹೊಂದಿರುವ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ತಾಲ್ಲೂಕು ಆಸ್ಪತ್ರೆಯ ಸಿಬ್ಬಂದಿಗೆ ವೆಂಟಿಲೇಟರ್ ಬಳಕೆ ಸೇರಿದಂತೆ ಎಲ್ಲ ರೀತಿಯ ತರಬೇತಿ ನೀಡಲಾಗುತ್ತಿದೆ ಎಂದು ಡಾ‌.ಎಸ್.ವಿ.ಮುನ್ಯಾಳ ತಿಳಿಸಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಬೀಜ-ಗೊಬ್ಬರ ಸೇರಿದಂತೆ ಯಾವುದೇ ಕೊರತೆಯಿಲ್ಲ. ಇದುವರೆಗೆ ಶೇ.80 ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ವಿವರಿಸಿದರು.

ಪಿಕೆಪಿಪಿಎಸ್ ಮೂಲಕ ಗೊಬ್ಬರ ವಿತರಣೆ ಮಾಡಲಾಗುತ್ತಿದೆ.ತೋಟಗಾರಿಕೆ ಬೆಳೆಹಾನಿ ಸಮರ್ಪಕ ಸಮೀಕ್ಷೆಗೆ ಸೂಚನೆ:
ಕೈಮಗ್ಗ, ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ಅವರು, ಅತಿವೃಷ್ಟಿ ಸಂದರ್ಭದಲ್ಲಿ ಬೆಳೆಹಾನಿ ಆದಾಗ ಪ್ರತಿಯೊಬ್ಬ ರೈತರಿಗೂ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.

ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಜಲಜೀವನ ಮಿಷನ್ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಆದ್ದರಿಂದ ಎಲ್ಲ ತಾಂತ್ರಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಯಾಗಿರುವುದರಿಂದ ಇದು ಪೂರ್ಣಗೊಂಡ ಬಳಿಕ ನಿರ್ವಹಣೆ ಬಗ್ಗೆಯೂ ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣ ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕು. ಆದರೆ ನಾಲ್ಕು ವರ್ಷಗಳಾದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದು ಹೇಳಿದರು.

ಸುಳ್ಳು ಜಾತಿ ಪ್ರಮಾಣಪತ್ರದ ಹಾವಳಿ:
ಸುಳ್ಳು ಜಾತಿ ಪ್ರಮಾಣಪತ್ರದ ಹಾವಳಿ ಜಾಸ್ತಿಯಾಗುತ್ತಿದೆ. ಅಧಿಕಾರಿಗಳಿಗೆ ಗೊತ್ತಿದ್ದರೂ ಪ್ರಮಾಣಪತ್ರ ವಿತರಿಸುತ್ತಿದ್ದಾರೆ ಎಂದು ಪಿ.ರಾಜೀವ್ ತಿಳಿಸಿದರು.

ಚನ್ನದಾಸರು ಎಂಟು ಪ್ರಕರಣಗಳು ಹಾಗೂ ಗೋಕಾಕ ತಾಲ್ಲೂಕಿನಲ್ಲಿ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರ ಪಡೆದ 25 ಪ್ರಕರಣಗಳ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಉಮಾ ಸಾಲಿಗೌಡರ ಸಭೆಗೆ ಮಾಹಿತಿಯನ್ನು ನೀಡಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ದುರ್ಯೋಧನ ಐಹೊಳೆ, ವಿವಿಧ ಸಮಸ್ಯೆಗಳ ಬಗ್ಗೆ ಸಚಿವರ ಗಮನಸೆಳೆದರು.

ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಜಿಲ್ಲೆಯ ಎಲ್ಲರಿಗೂ ಲಸಿಕೆ ಹಾಕುವ ಅಗತ್ಯವಿದೆ. ಆದರೆ ಲಸಿಕಾಕರಣ ನಿಧಾನಗತಿಯಲ್ಲಿ ಸಾಗಿದೆ. ಮುಂದಿನ ಎಷ್ಟು ದಿನಗಳಲ್ಲಿ ಲಸಿಕಾಕರಣ ಪೂರ್ಣಗೊಳ್ಳಲಿದೆ ಎಂದು ಪ್ರಶ್ನಿಸಿದರು.ಗ್ರಾಮಗಳ ಮ್ಯೂಟೇಷನ್ ಪ್ರಕ್ರಿಯೆ ಯಾವ ಹಂತದಲ್ಲಿ ಎಂದು ಕೇಳಿದರು. ಈ ಪ್ರಕ್ರಿಯೆ ನಡೆದರೆ ಗ್ರಾಮ ಮಟ್ಟದಲ್ಲಿರುವ ಅನೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದರು.

ಶಾಸಕ ಮಹಾಂತೇಶ ಕೌಜಲಗಿ, ಮುರಗೋಡಗೆ ಕುಡಿಯುವ ನೀರು ಪೂರೈಕೆಯಲ್ಲಿ ಪದೇ ಪದೆ ವ್ಯತ್ಯಯವಾಗುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.ಕೋವಿಡ್ ಸೋಂಕಿನಿಂದ ಮನೆಗಳಲ್ಲಿಯೇ ಮೃತರಾದವರ ಕುಟುಂಬಗಳಿಗೂ ಸರಕಾರದ ಪರಿಹಾರ ಧನ ದೊರಕಿಸಲು ನಿಯಮಾವಳಿಗಳಲ್ಲಿ ಪರಿಷ್ಕರಣೆ ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ರೈತರಿಗೆ ಟಿಸಿ ನೀಡಲು ಹೆಸ್ಕಾಂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಪೂರೈಕೆಯಾಗುತ್ತಿಲ್ಲ. ಲೈಸೆನ್ಸ್ ಕೋರಿ ಪಿಕೆಪಿಎಸ್ ವತಿಯಿಂದ ಅರ್ಜಿ ಸಲ್ಲಿಸಿದರೆ ತಾಂತ್ರಿಕ ಕಾರಣಗಳಿಂದ ಲೈಸೆನ್ಸ್ ನೀಡಿಕೆ ಸಾಧ್ಯವಾಗುತ್ತಿಲ್ಲ ಎಂದು ಸಚಿವರಿಗೆ ವಿವರಿಸಿದರು.ಪ್ರವಾಹದಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಕಟ್ಟಡ ದುರಸ್ತಿಗೆ ನಿರ್ದೇಶನ ನೀಡಬೇಕು ಎಂದರು.

ಶಾಸಕ ಮಹಾದೇವಪ್ಪ ಯಾದವಾಡ ಅವರು, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ಶಾಸಕ ಅಭಯ್ ಪಾಟೀಲ, 557 ಮನೆಹಾನಿಗಳ ಸಮೀಕ್ಷೆ ಮಾಡಲಾಗಿದೆ. ಇದುವರೆಗೆ ಲಾಗಿನ್ ಮಾಡದಿರುವುದರಿಂದ ಪರಿಹಾರ ಸಿಗುತ್ತಿಲ್ಲ ಎಂದು ಒತ್ತಾಯಿಸಿದರು.

ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ 557 ಕುಟುಂಬಗಳಿಗೆ ಮೊದಲ ಕಂತು ಪರಿಹಾರವೇ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಪ್ರವಾಹದಿಂದ ಉಂಟಾಗಿರುವ ಮನೆಹಾನಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆದು ವಿಸ್ತೃತವಾಗಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಖಾನಾಪುರದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಒತ್ತಾಯ:
ಶಾಸಕರಾದ ಅಂಜಲಿ ನಿಂಬಾಳ್ಕರ್, ಖಾನಾಪುರ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗುವಂತೆ ನೈಸರ್ಗಿಕವಾಗಿ ಹರಿಯುವ ನೀರು ಸಂಗ್ರಹಕ್ಕೆ ಸಣ್ಣ ಪ್ರಮಾಣದ ಜಲಾಶಯ ಮಾದರಿ ಬಂಡಿಂಗ್ಸ್ ನಿರ್ಮಿಸಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.ಇಡೀ ಖಾನಾಪುರದಲ್ಲಿ ಒಂದೂ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನ ಮಾಡಿರುವುದಿಲ್ಲ. ಬೀಡಿ ಸೇರಿದಂತೆ ಮೂರೂ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮಂಜೂರಾತಿ ನೀಡಬೇಕು ಎಂದು ಕೋರಿದರು.ಇದಕ್ಕೆ ಸ್ಪಂದಿಸಿದ ಸಚಿವ ಕಾರಜೋಳ ಅವರು, ಇದೀಗ ಕುಡಿಯುವ ನೀರು ಯೋಜನೆಗೆ ಸಾಕಷ್ಟು ಅನುದಾನ ಇರುವುದರಿಂದ ಮೂರೂ ಯೋಜನೆಗಳಿಗೆ ಡಿಪಿಆರ್ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೋವಿಡ್ ನಿಂದ ಮೃತಪಟ್ಟವರಿಗೆ ಸರಕಾರದಿಂದ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಆದರೆ ಮರಣ ಪ್ರಮಾಣಪತ್ರ ನೀಡಲು ವಿನಾಕಾರಣ ಸತಾಯಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ದೊರಕದೇ ಮನೆಯಲ್ಲಿ ಕೋವಿಡ್ ನಿಂದ ಮೃತರಾದವರಿಗೆ ಕೋವಿಡ್ ನಿಂದ ಮೃತಪಟ್ಟಿರುವ ಕುರಿತು ಮರಣಪ್ರಮಾಣ ಪತ್ರ ದೊರಕುತ್ತಿಲ್ಲ. ಇದರಿಂದಾಗಿ ಅಂತಹ ಕುಟುಂಬಗಳು ಪರಿಹಾರ ದಿಂದ ವಂಚಿತಗೊಳ್ಳುತ್ತಿವೆ ಎಂದು ಸಭೆಯ ಗಮನಕ್ಕೆ ತಂದರು.

ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ, ಹಲವಾರು ವರ್ಷಗಳಿಂದ ಪ್ರತಿ ಸಭೆಯಲ್ಲೂ ಚರ್ಚೆ ನಡೆಸಿಸರೂ ಇದುವರೆಗೆ ಬೆಳೆವಿಮೆ ಪರಿಹಾರ ತಾರತಮ್ಯ ನಿವಾರಣೆಗೆ ಸೂಕ್ತ ಕ್ರಮ ಆಗುತ್ತಿಲ್ಲ ಎಂದು ಹೇಳಿದರು.ಧಾರವಾಡ ಜಿಲ್ಲೆಯ ಗಡಿ ಗ್ರಾಮಗಳಿಗೆ ಹೋಲಿಸಿದರೆ ಬೆಳಗಾವಿ ಜಿಲ್ಲೆಯ ಸವದತ್ತಿ, ಬೈಲಹೊಂಗಲ ಹಾಗೂ ಕಿತ್ತೂರು ತಾಲ್ಲೂಕುಗಳ ಗಡಿ ಗ್ರಾಮಗಳ ರೈತರಿಗೆ ಬೆಳೆವಿಮೆ ಪರಿಹಾರ ನಿಗದಿಯಲ್ಲಿ ತಾರತಮ್ಯ ಮುಂದುವರಿದಿದೆ ಎಂದು ಉಪ ಮುಖ್ಯಮಂತ್ರಿಗಳ ಗಮನಸೆಳೆದರು.

ಭೂ ಒಡೆತನ: ಜಮೀನು ಹಕ್ಕುಪತ್ರ ವಿತರಣೆ:
ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂ ಅಭಿವೃದ್ಧಿ ಯೋಜನೆಯಡಿ ಜಮೀನು ಮಂಜೂರಾಗಿರುವ 353 ಫಲಾನುಭವಿಗಳ ಪೈಕಿ ಸಾಂಕೇತಿಕವಾಗಿ ಐದು ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.

ರಾಜ್ಯದಲ್ಲಿ 4835 ಎಕರೆ ಜಮೀನನ್ನು 500 ಕೋಟಿ ರೂಪಾಯಿಗಿಂತ ಅಧಿಕ ವೆಚ್ಚದಲ್ಲಿ ಖರೀದಿಸಿ ಭೂರಹಿತ ಪರಿಶಿಷ್ಟ ಜಾತಿ/ಜನಾಂಗದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ.

ಸರಕಾರ ನೀಡಿರುವ ಭೂಮಿಯನ್ನು ಸದ್ಬಳಕೆ ಮಾಡಿಕೊಂಡು ಕುಟುಂಬಗಳು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ‌ ಅವರು ಸಭೆಯನ್ನು ನಿರ್ವಹಿಸಿದರು.ಸಂಸದರಾದ ಮಂಗಲಾ ಸುರೇಶ್ ಅಂಗಡಿ, ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.