Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಣ್ಣೆತ್ತಿನ ಅಮವಾಸ್ಯೆ- ಅನ್ನದಾತನ ಭಕ್ತಿ ಭಾವದ ಪ್ರತೀಕ

localview news
ಲೋಕಲವಿವ ವಿಶೇಷ
ಭಾರತ ಹಬ್ಬಹರಿದಿನಗಳ ನಾಡು, ಇಲ್ಲಿನ ಸಂಸ್ಕ್ರತಿ ಮತ್ತು ಸಂಸ್ಕಾರಗಳಿಗೆ ವಿಶೇಷ ಮಹತ್ವವಿದೆ. ನಾವೆಲ್ಲ ಕಲ್ಲು, ಮಣ್ಣಿನಲ್ಲಿ, ಪ್ರಕೃತಿಯಲ್ಲಿ ದೈವತ್ವವನ್ನು ಕಾಣುತ್ತವೆ. ಮಣ್ಣೆತ್ತಿನ ಅಮವಾಸ್ಯೆ ಮುಂಗಾರಿನ ಆರಂಭದ ಹಬ್ಬ, ಮಣ್ಣೆತ್ತಿನ ಅಮವಾಸ್ಯೆಗೆ ಬಸವನ ಅಮವಾಸ್ಯೆಯೆಂತಲೂ ಕರೆಯುವರು. ಕಾರಹುಣ್ಣಿಮೆ ನಂತರ ಬರುವ ಈ ಹಬ್ಬ, ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮಪಡುವ ಹಬ್ಬ.
logintomyvoice

ಕೃಷಿಕರಲ್ಲದವರ ಮನೆಯಲ್ಲೂ ಮಣ್ಣಿನ ಎತ್ತುಗಳನ್ನು ಮಾಡಿ ಪೂಜಿಸುವ ವಾಡಿಕೆಯಿದೆ.ವರ್ಷಾರಂಭದಿಂದ ಐದು ಮುಖ್ಯ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ. ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣಿನ ಪೂಜೆಯ ದ್ಯೋತಕಗಳಾಗಿವೆ. ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಮತ್ತು ಜೋಕುಮಾರ ಈ ಐದು ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ.

logintomyvoice

ಈ ಮಣ್ಣಿತ್ತಿನ ಅಮವಾಸ್ಯೆಯು ಅಶ್ವೀಜ ಬಹುಳ ಅಮವಾಸ್ಯೆಯಷ್ಟೆ ಪ್ರಾಮುಖ್ಯತೆ ಹೊಂದಿದೆ. ದೀಪಾವಳಿ ಅಮವಾಸ್ಯೆಯಲ್ಲಿ ಧನಲಕ್ಷ್ಮೀಯು ಪೂಜೆಗೊಂಡರೆ, ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಧಾನ್ಯಲಕ್ಷ್ಮೀಯನ್ನು ತರುವ ಎತ್ತುಗಳು ಹಾಗೂ ಕೃಷಿಯ ಎಲ್ಲಾ ಉಪಕರಣಗಳು ಪೂಜೆಗೊಳ್ಳುತ್ತವೆ. ಭೂಮಿ ಮತ್ತು ಎತ್ತುಗಳು ಕೃಷಿಯಲ್ಲಿ ಬಹುಮುಖ್ಯ ಅಂಶಗಳು. ತಮ್ಮ ಬದುಕಿಗೆ ಕಾರಣಿಭೂತವಾದ ಮಣ್ಣು ಮತ್ತು ಎತ್ತು ಪವಿತ್ರವೆಂದು ರೈತರು ಭಾವಿಸುತ್ತಾರೆ. ಆದ್ದರಿಂದ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಪರಿಪಾಠವಿದೆ.

logintomyvoice

ಹಬ್ಬಕೊಂದು ಕಥೆ: ಈ ಮಣ್ಣೆತ್ತಿನ ಹಬ್ಬಕ್ಕೆ ಸಂಭಂದಿಸಿದಂತೆ ಒಂದು ರಮ್ಯವಾದ ಜನಪ್ರಿಯ ಕಥೆಯಿದೆ. ಒಮ್ಮೆ ಶಿವನು ಮಾರುವೇಷದಲ್ಲಿ ಬಂದು ನಿಮ್ಮ ಎತ್ತುಗಳನ್ನು ಕೆಲಕಾಲ ನನಗೆ ನೀಡಿ ಎಂದು ರೈತರನ್ನು ಕೇಳಿದನಂತೆ ಆಗ ಅವರು ಕುಹಕದಿಂದ ನಮ್ಮ ಎತ್ತುಗಳು ಮಣ್ಣಿನವು ಎಂದರಂತೆ ನಂತರ ಕೊಟ್ಟಿಗೆಯಲ್ಲಿ ಹೋಗಿ ನೋಡಿದರೆ ಎತ್ತುಗಳಲ್ಲವು ಮಣ್ಣಿನವೇ ಆಗಿಬಿಟ್ಟಿದ್ದವು, ಅವರೆಲ್ಲಾ ಪಶ್ಚಾತಾಪದಿಂದ ಶಿವನನ್ನು ಪೂಜಿಸಿ ಪ್ರಾರ್ಥಿಸಿದಾಗ ಆ ಎತ್ತುಗಳೆಲ್ಲ ಮರಳಿ ಜೀವಂತವಾದವಂತೆ.

logintomyvoice

ಹಬ್ಬದ ದಿನ ಹಿರಿಯರು ಮಕ್ಕಳನ್ನು ಕೂರಿಸಿಕೊಂಡು ಈ ಕಥೆಯನ್ನು ಹೇಳುವ ಪರಿಪಾಠವಿದೆ. ಮುಂದೆ ಶ್ರಾವಣ ಭಾದ್ರಪದದಲ್ಲಿ ವೃತ್ತಾದಿಗಳನ್ನು ವಿಶೇಷವಾಗಿ ಆಚರಿಸುವದರಿಂದ ವೃತ್ತಾದಿಗಳನ್ನು ಹೊತ್ತು ತರುವ ಹಬ್ಬವೆಂಬ ಪ್ರತೀತಿಯೂ ಇದೆ. ಈ ಹಬ್ಬದ ನಂತರ ಆಷಾಢದಲ್ಲಿ ಹಬ್ಬಗಳು ಯಾವುದು ಬರದೆ ರೈತರು ಕೃಷಿ ಚಟುವಟಿಕೆಯಲ್ಲಿ ಸಂಭ್ರಮದಿಂದ ಸಂಪೂರ್ಣವಾಗಿ ತೊಡುಗಬೇಕು, ಈ ಸಮಯದಲ್ಲಿ ಮೈ ಮರೆತರೆ ಜೀವನಕ್ಕೆ ಕಷ್ಟವೆಂಬ ಎಚ್ಚರಿಕೆ ಈ ಆಚರಣೆಯಲ್ಲಿದೆ.

logintomyvoice

ಕಾರಹುಣ್ಣಿಮೆಯ ಮುಗಿದು ಬರುವ ಅಮವಾಸ್ಯೆಯೇ ಮಣ್ಣೆತ್ತಿನ ಅಮವಾಸ್ಯೆ ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ. ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ಸಣ್ಣ-ದೊಡ್ಡ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ. ಇಲ್ಲವೆ ಊರ ಕುಂಬಾರರ ಮನೆಗಳಿಂದಲೂ ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳನ್ನು ಖರೀದಿಸಿ ತರುತ್ತಾರೆ.

logintomyvoice

ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿಮಣ್ಣನ್ನು ಕೊಡುತ್ತಾರೆ. ಈ ಹಸಿ ಮಣ್ಣಿನಲ್ಲಿ ಧನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಬಣ್ಣಗಳ ಬೇಗಡೆಯ ಚೂರು, ಬಣ್ಣದಲ್ಲಿ ತೊಯಿಸಿದ ಜೋಳ, ಕುಸುಬಿ ಕಾಳುಗಳಿಂದ ಎತ್ತುಗಳ ಕೊಂಬಣಸು, ಇಣಿಗವಚ, ಜೂಲು, ಗಂಟೆ ಸರಗಳನ್ನು ತೊಡಿಸಿ ಸಿಂಗರಿಸುತ್ತಾರೆ.ಆ ಸಿಂಗರಿಸಿದ ಜೋಡೆತ್ತುಗಳನ್ನು ದೇವರ ಜಗಲಿಯ ಮೇಲಿಟ್ಟು ಪೂಜೆಗೆ ಆಣಿಯಾಗುವ ಹೊತ್ತಿಗೆ ಮನೆಯ ಹೆಣ್ಣುಮಕ್ಕಳು ಹೊಳಿಗೆ, ಕಡಬು ಮುಂತಾದ ಸವಿಅಡುಗೆಯನ್ನು ಸಿದ್ದಪಡಿಸಿರುತ್ತಾರೆ.

logintomyvoice

ತದನಂತರ ಮಣ್ಣಿನ ಎತ್ತುಗಳಿಗೆ ಕಾಯಿ, ಕರ್ಪೂರ, ಊದಬತ್ತಿ, ಲೋಬಾನ ಹಾಕಿ ಎಡೆಹಿಡಿದು ಪೂಜೆ ಮಾಡುತ್ತಾರೆ. ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ಹೊಸಬಟ್ಟೆಗಳನ್ನು ತೊಟ್ಟು ಊರಿನಲ್ಲಿ ದೇವಸ್ಥಾನಗಳಿಗೆ ಕಾಯಿ ಕರ್ಪೂರದೊಂದಿಗೆ ಹೋಗಿ ಎಡೆಹಿಡಿದು ಬಂದು ಒಟ್ಟಾಗಿ ಕೂಳಿತು ಊಟ ಮಾಡುತ್ತಾರೆ. ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆಮನೆಗೆ ತೆರಳಿ ಪೂಜಿಸಲ್ಪಟ್ಟ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.

logintomyvoice

ಮರುದಿನ ಮಕ್ಕಳು ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಎತ್ತಿನ ಕಾಲು ಮುರಿದು ತಟ್ಟೆಯಲ್ಲಿಟ್ಟುಕೊಂಡು ಮನೆ-ಮನೆಗೆ ತೆರಳಿ, ‘ಎಂಟತ್ತಿನ್ಯಾಗ ಒಂದು ಕುಂಟೆತ್ತ ಬಂದೈತಿ ಜ್ವಾಳಾ ನೀಡಿರಿ’ ಎಂದು ತಿರುಗುತ್ತಾರೆ. ಮನೆಯವರು ನೀಡಿದ ಧವಸಧಾನ್ಯಗಳನ್ನ ಊರ ಅಂಗಡಿಗೆ ಹಾಕಿ ಪಂಚ ಪಳಾರ, ಊದಬತ್ತಿ, ಕುಂಕುಮ, ತೆಂಗಿನಕಾಯಿ, ಬೆಲ್ಲ, ಚುರುಮುರಿ ಖರೀದಿಸಿ ಹೊಳೆ, ಹಳ್ಳ, ಕೆರೆ ದಂಡೆಗೆ ಹೋಗಿ ಮಣ್ಣೆತ್ತನ್ನು ಪೂಜೆಮಾಡಿ ಊರ ಸಮೃದ್ದಿಗಾಗಿ ಬೇಡಿಕೊಂಡು ಹೊಳಗೆ ಬಿಡುತ್ತಾರೆ, ನಂತರ ದಾರಿಯಲ್ಲಿ ಸಿಕ್ಕವರಿಗೆ ಪಳಾರ ಹಂಚುತ್ತಾರೆ.

logintomyvoice

‘ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ ಮಣ್ಣೇ ಲೋಕದಲ್ಲಿ ಬೆಲೆಯಾದ್ದು’. ಎಂದು ಹುಟ್ಟಿನಿಂದ ಸಾವಿನವರೆಗೂ ಮಣ್ಣು ಜೊತೆಗೆ ನಮ್ಮ ಬದುಕಿನಲ್ಲಿ ಆ ಮಣ್ಣಿನಿಂದ ಆರಂಭವಾಗುವ ಮಣ್ಣಿತ್ತು ಅಮವಾಸ್ಯೆ. ಕೃಷಿಕರಿಗೆ ಒಕ್ಕುಲತನ ಮೂಲಾಧಾರ ಬಸವಣ್ಣ, ಅವನನ್ನ ನಂಬಿ ಬದುಕು ಕಟ್ಟಿಕೊಂಡುವರು. “ಎತ್ತು ಎತ್ತಲ್ಲ ಹತ್ತು ದಿಕ್ಕಿಗೆ ಸಲವೋನೆ ಬಸವಣ್ಣ, ಬಿತ್ತಿದ ಬೆಳೆವಲಕೆ ಬೆಳಗ್ಗ್ಯಾನೊ”. ಎಂದು ನಂಬಿ ತಮ್ಮ ಜೀವನದುದ್ದಕ್ಕೂ ಅನ್ನದಾತ ಬಸವಣ್ಣನನ್ನ ಗೌರವಿಸುವ ಹಬ್ಬವಾಗಿ ನಮ್ಮ ನಾಡಿನ ಸಂಸ್ಕ್ರತಿಯ ದ್ಯೋತಕವಾಗಿದೆ.

logintomyvoice

ಒಟ್ಟಿನಲ್ಲಿ ಈ ಹಬ್ಬದ ಮೂಲ ಉದ್ದೇಶವೇ ಮಳೆಗಾಲ ಚೆನ್ನಾಗಿ ಆಗಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಲಿ ಎನ್ನುವುದು. ಇಂದಿನ ಯಾಂತ್ರಿಕ ಬದುಕಿನಲ್ಲಿ ಹೊಸ ಪೀಳಿಗೆಯ ಮಕ್ಕಳಿಗೆ ಹಬ್ಬದ ಪರಿಕಲ್ಪನೆ ತಿಳಿಸುವುದು ಅವಶ್ಯಕವಾಗಿದೆ.
ರಮೇಶಗೌಡ ಆರ್. ಪಾಟೀಲ್