Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಉತ್ತರ ಕರ್ನಾಟಕ ಹಿಂದುಳಿಯಲು ಕಾರಣಗಳೇನು ? ಸರ್ಕಾರದ ತಾರತ್ಯಮ ಧೋರಣೆಯೇ? ಜನಪ್ರತಿನಿಧಿಗಳ ನಿರ್ಲಕ್ಷವೆ ? ಸ್ಪೆಶಲ್ ಸ್ಟೋರಿ

localview news

ಲೋಕಲವಿವ್ಯೂ ಮಾಹಿತಿ ಸಂಗ್ರಹ : ಕೊರೊನಾ ವೈರಸ್ ಭೀತಿ ಹಾಗೂ ಭಾರತ ಲಾಕ್ ಡೌನ್ ನಿಯಮದಿಂದಾಗಿ ಹಲವು ಕಾರ್ಖಾನೆಗಳು, ಕಂಪನಿಗಳು ಎಲ್ಲವೂ ಬಾಗಿಲು ಹಾಕುತ್ತಿವೆ.ಲಕ್ಷಾಂತರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ, ಇನ್ನೂ ಸಾಕಷ್ಟು ಮಂದಿ ನಿರುದ್ಯೋಗದ ಸುಳಿಗೆ ಸಿಲುಕಿದ್ದಾರೆ. ಕೊರೊನಾ ಮಹಾಮಾರಿ ಅವಾಂತರದಿಂದಾಗಿ ದೇಶ ಮಾತ್ರವಲ್ಲ ವಿಶ್ವದ ಆರ್ಥಿಕತೆಯೇ ಅಲ್ಲೋಲ ಕಲ್ಲೋಲವಾಗಿದ್ದು, ಬೃಹತ್ ಕಂಪನಿಗಳು ಸಹ ನಷ್ಟ ಅನುಭವಿಸುತ್ತಿವೆ. ಪ್ರಮುಖವಾಗಿ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಯುವಕರು ಉದ್ಯೋಗ ಅರಸಿ ರಾಜಧಾನಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ.

 ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸ್ಥಾಪನೆಗೊಳ್ಳಬೇಕಿದ್ದ ಅನೇಕ ಪ್ಯಾಕ್ಟರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ಬೇರೆ ರಾಜ್ಯದ ಪಾಲಾಗಿವೆ. ಈ ಭಾಗ ಇಷ್ಟೆಲ್ಲ ಹಿಂದುಳಿಯಲು ಇಲ್ಲಿನ ಜನಪ್ರತಿನಿಧಿಗಳೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದ ಆಡಳಿತ ಕೇಂದ್ರವಾದ ಬೆಂಗಳೂರಿನಲ್ಲೇ ವಿಧಾನಸೌಧ, ಸಚಿವಾಲಯಗಳು, ಅದಕ್ಕೆ ಸಂಬಂಧಿಸಿದ ಪ್ರಧಾನ ಕಾರ್ಯದರ್ಶಿಗಳ, ಆಯುಕ್ತರ ಕಛೇರಿಗಳು ಇವೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಪಾರ್ಕ್, ಸಿನಿ ಉದ್ಯಮ ಮುಂತಾದ ಉದ್ಯೋಗ ಸೃಸ್ಟಿಸುವ ಕಂಪನಿಗಳನ್ನು ತೆರೆಯಲು ಅವಕಾಶ ಮಾಡಿರುವುದು.

 ಇದರಿಂದ ಪ್ರತಿಯೊಂದು ಆಡಳಿತ ಅಭಿವೃದ್ಧಿ ಕೆಲಸಗಳಿಗೆ, ಉದ್ಯೋಗ ಅರಸಿ ಎಲ್ಲರೂ ಬೆಂಗಳೂರಿಗೇ ಹೋಗಬೇಕಾಗುತ್ತದೆ. ಬೆಳಗಾವಿ, ಕಲಬುರ್ಗಿ, ಬೀದರ್ ಸೇರಿದಂತೆ ಮುಂತಾದ ಜಿಲ್ಲೆಗಳು ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯದ ಸಮೀಪದಲ್ಲೆ ಇವೆ. ಕರ್ನಾಟಕದ ಶಕ್ತಿ ಕೇಂದ್ರವಾದ ಬೆಂಗಳೂರಿನಲ್ಲಿರುವ ವಿಧಾನಸೌಧ ಆಂಧ್ರ, ತಮಿಳುನಾಡು ಜನರ ಕೈಗೆ ನಿಲಕುತಿರುವಂತೆ ಉತ್ತರ ಕರ್ನಾಟಕದವರಿಗೆ ಸಿಗಲಾರದ್ದು ವಿಪರ್ಯಾಸದ ಸಂಗತಿ.

 ಈ ಹಿಂದೆ ಟಾಟಾ ನ್ಯಾನೊ ಘಟಕ ಸ್ಥಾಪನೆಯಾಗುವ ಸುದ್ದಿ ಈ ಭಾಗದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಆದರೆ ನರೇಂದ್ರ ಮೋದಿ ಅವರ ಮೋಡಿಗೊಳಗಾದ ನ್ಯಾನೊ ಘಟಕ ಗುಜರಾತ್‌ ಪಾಲಾಯಿತು. ಈಗ ಹೀರೊ ಮೋಟೊ ಕಾರ್ಪ್‌ ಸರದಿ. 2,200 ಕೋಟಿ ಬಂಡವಾಳ ಹೂಡಿಕೆಯ ಹೀರೊ ಮೋಟೊ ಕಾರ್ಪ್‌ನ ವಾರ್ಷಿಕ 18 ಲಕ್ಷ ದ್ವಿಚಕ್ರ ವಾಹನ ತಯಾರಿಕೆ ಸಾಮರ್ಥ್ಯದ ಉದ್ಯಮ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ತೆರಳಿದೆ. ಹೀರೊ ದ್ವಿಚಕ್ರ ಉತ್ಪಾದನಾ ಘಟಕ ಸ್ಥಾಪನೆ ವಿಷಯದಲ್ಲಿ ಈ ಭಾಗದ ಉದ್ಯಮಿಗಳು ಕಾತರರಾಗಿದ್ದರು ಉದ್ಯೋಗಾಕಾಂಕ್ಷಿಗಳ ಮುಖದಲ್ಲಿ ನಿರೀಕ್ಷೆಯ ಚಿತ್ತಾರ ಮೂಡಿತ್ತು. ಸಣ್ಣ ಕೈಗಾರಿಕೋದ್ಯಮಿಗಳಲ್ಲಂತೂ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಯ ಜೊತೆಗೆ ಉದ್ಯಮ ಕ್ಷೇತ್ರದಲ್ಲಿ ಹೊಸ ಮನ್ವಂತರದ ವಿಶ್ವಾಸ ಮೂಡಿತ್ತು. ಆದರೆ, ಹೀರೊ ಹೊಸತಾಗಿ ಅಸ್ತಿತ್ವಕ್ಕೆ ಬಂದ ಆಂಧ್ರ ಪ್ರದೇಶದ ಪಾಲಾಗುವ ಮೂಲಕ ಉತ್ತರ ಕರ್ನಾಟಕದ ಉದ್ಯಮ ವಲಯದ ಪಾಲಿಗೆ ಆಕಾಶವೇ ಕಳಚಿಬಿದ್ದಂತಾಗಿದೆ.

 ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿ ವರ್ಷ ಅಂದಾಜು 8 ಸಾವಿರದಿಂದ 10 ಸಾವಿರ ಎಂಜಿನಿಯರಿಂಗ್‌, 14 ಸಾವಿರ ಡಿಪ್ಲೊಮಾ ಪದವೀಧರರು ಸೃಷ್ಟಿಯಾಗುತ್ತಿದ್ದಾರೆ. ಈ ಭಾಗದಲ್ಲಿ ಕೈಗಾರಿಕೆ ಇಲ್ಲದ ಕಾರಣಕ್ಕೆ ಉದ್ಯೋಗಾಂಕ್ಷಿಗಳು ಬೆಂಗಳೂರು, ಮುಂಬೈ ಕಡೆಗೆ ವಲಸೆ ಹೋಗುತ್ತಾರೆ. ಮುಂಬೈ ಮತ್ತು ಬೆಂಗಳೂರಿನ ಎಂಜಿನಿಯರ್‌ಗಳು ಅಮೆರಿಕಾ, ಜರ್ಮನಿ, ಇಂಗ್ಲೆಂಡ್‌ ಮತ್ತಿತರ ವಿದೇಶ ರಾಷ್ಟ್ರಗಳಿಗೆ ಹಾರುತ್ತಾರೆ. ಪರಿವರ್ತನೆಯ ಕಾಲಘಟ್ಟದಲ್ಲಿ ಇದು ಅನಿವಾರ್ಯ ಪ್ರಕ್ರಿಯೆ. ನ್ಯಾನ್ಯೋ, ಹೀರೊ ಮೋಟೊ ಕಾರ್ಪ್‌ನಂತಹ ದೈತ್ಯ ಕಂಪೆನಿಗಳ ಘಟಕ ಸ್ಥಾಪನೆಯಿಂದ ಈ ಭಾಗದ ಪ್ರತಿಭಾ ಪಲಯನಕ್ಕೆ ತಡೆ ಒಡ್ಡಬಹುದಿತ್ತು. ಉದ್ಯೋಗ ಅರಸಿ ಲೋಕಸುತ್ತುವುದನ್ನು ತಪ್ಪಿಸಬಹುದಿತ್ತು. ಅಷ್ಟೇ ಅಲ್ಲ, ಅಭಿವೃದ್ಧಿ ಗತಿಯನ್ನೇ ಬದಲಾಯಿಸಬಹುದಿತ್ತು. ‘ಬೃಹತ್‌ ಕಂಪೆನಿಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯೊಂದೇ ಲಾಭವಲ್ಲ, ಇನ್ನಷ್ಟು ಸಣ್ಣ ಕೈಗಾರಿಕೆಗಳು ಸ್ಥಾಪನೆಗೊಂಡು ಉದ್ಯೋಗ ಸೃಸ್ಟಿಸುವ ಜೊತೆಗೆ ಸಾಕಷ್ಟು ಪರೋಕ್ಷ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ. ತೆರಿಗೆ ಸಂಗ್ರಹ ಮೂಲಕ ಸರ್ಕಾರಕ್ಕೆ ಕೋಟ್ಯಂತರ ಆದಾಯ ಬರುತ್ತದೆ.

 ಈ ದೃಷ್ಟಿಯಲ್ಲಿ ಇತ್ತ ಗಮನ ಹರಿಸಿದ್ದರೆ ಈ ಭಾಗದಿಂದ ಆರಿಸಿ ಬಂದು ಮುಖ್ಯಮಂತ್ರಿ ಗದ್ದುಗೆ ಏರಿದ್ದ ವೀರೇಂದ್ರ ಪಾಟೀಲ್‌, ಎಸ್.ಆರ್.ಬೊಮ್ಮಾಯಿ, ಜಗದೀಶ ಶೆಟ್ಟರ್‌, ಸದ್ಯ ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯ ರೈಲ್ವೇ ಖಾತೆ ಸಚಿವರಾಗಿರುವ ಸುರೇಶ ಅಂಗಡಿ ಅವರಿಂದ ಉತ್ತರ ಕರ್ನಾಟಕಕ್ಕೆ ನಿರೀಕ್ಷಿತ ನ್ಯಾಯ ಸಿಕ್ಕಿಲ್ಲ. ಬೊಮ್ಮಾಯಿ ಮತ್ತು ಶೆಟ್ಟರ್‌ ಹುಬ್ಬಳ್ಳಿಯವರೇ ಆದರೆ, ಸುರೇಶ ಅಂಗಡಿ ಬೆಳಗಾವಿ ಅವರು ಈ ತ್ರಿವಳಿ ನಗರದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಷ್ಟಕ್ಕಷ್ಟೆಯಾಗಿದೆ.

 ಚಕ್ಕಡಿಗಳಲ್ಲಿ ಜನ ಓಡಾಡುತ್ತಿದ್ದ ದಿನಗಳಲ್ಲಿ ಹತ್ತಿ, ಟೆಕ್ಸ್‌ಟೈಲ್‌ ಉದ್ಯಮಗಳ ಮೂಲಕ ಇಂಗ್ಲೆಡ್‌ನ ಮ್ಯಾಂಚೆಸ್ಟರ್‌ಗೆ ವ್ಯಾಪಾರ– ವಹಿವಾಟು ವಿಸ್ತರಿಸಿಕೊಂಡಿದ್ದ ಉತ್ತರ ಕರ್ನಾಟಕ, ಇಂದು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯಲ್ಲಿ ಹಿಂದುಳಿಯಲು ಕಾರಣಗಳು ಹಲವು ಇದೆ. ಹಾಗೆ ನೋಡಿದರೆ, ಈ ಭಾಗದ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ನೆಲದ ಗುಣ, ಸತ್ವ ಕಾರಣವೇ ಹೊರತು ಯಾರೊಬ್ಬರ ಔದಾರ್ಯವೂ ಅಲ್ಲ.

 ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಈ ತ್ರಿವಳಿ ನಗರಗಳನ್ನು ಕೇಂದ್ರೀಕರಿಸಿಕೊಂಡು ಉತ್ತರ ಕರ್ನಾಟಕ ಸ್ವಂತ ಶಕ್ತಿಯಿಂದ ಬೆಳೆದಿದೆ. ಇದು ಆಗರ್ಭ ಶ್ರೀಮಂತವೆನಿಸಿದರೂ ಅನಾಥ ಶಿಶುವಿನಂತೆ ಇದೆ. ಈ ಭಾಗದಲ್ಲಿರುವ ಸಾಕಷ್ಟು ಐಟಿಐ, ಪಾಲಿಟೆಕ್ನಿಕ್‌, ಡಿಪ್ಲೊಮಾ, ಎಂಜಿನಿಯರಿಂಗ್‌, ಆಡಳಿತ ನಿರ್ವಹಣೆ ಮತ್ತಿತರ ಸಂಸ್ಥೆಗಳಿಂದ ಕೌಶಲ ಪಡೆದು ಹೊರಬರುವ ಯುವಸಮೂಹದ ವಲಸೆ ತಡೆದು ಸ್ಥಳೀಯವಾಗಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾರದ್ದು ವಿಪರ್ಯಾಸ. ರಾಷ್ಟ್ರೀಯ ಹೆದ್ದಾರಿ, ಸಮರ್ಪಕ ಸಾರಿಗೆ, ರೈಲ್ವೆ ಸಂಪರ್ಕ, ವಿಮಾನ ನಿಲ್ದಾಣ ಇವೆಲ್ಲವುಗಳ ಜತೆಗೆ ಕೈಗಾರಿಕೆಗೆ ಅಗತ್ಯವಿರುವ ಜಾಗ ಇರುವುದರಿಂದ ಬೆಳಗಾವಿ ಪ್ರಮುಖ ಕೈಗಾರಿಕಾ ವಲಯವಾಗಿ ರೂಪುಗೊಳ್ಳುವ ಎಲ್ಲ ಅರ್ಹತೆಗಳನ್ನೂ ಹೊಂದಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಮಧ್ಯದ ಸ್ಥಳವಾಗಿರುವ ಇಲ್ಲಿನ ಹವಾಗುಣವೂ ಕೈಗಾರಿಕೆಗಳಿಗೆ ಪೂರಕವಾಗಿದೆ. ಅಗತ್ಯ ಮಾನವ ಸಂಪನ್ಮೂಲವೂ ಹೇರಳವಾಗಿದೆ. ಎಂಜಿನಿಯರ್‌ ಉದ್ಯೋಗಕ್ಕೆ ಪೂರಕವಾಗಿ ಟೈಲರ್, ಆಟೊ ರಿಕ್ಷಾವಾಲಾ.. ಹೀಗೆ ಎಂಟು ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಭಾರತದ ಎರಡನೇ ದೊಡ್ಡ ತಾಂತ್ರಿಕ ವಿಶ್ವ ವಿದ್ಯಾಲಯ ಎನಿಸಿಕೊಂಡಿರುವ ವಿಶೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ, ಪ್ರತಿಷ್ಠಿತ ಕೆಎಲ್ಇ ಸಂಸ್ಥೆ, ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಹಾಗೂ ಸುಮಾರು ಹತ್ತಕ್ಕೂ ಅಧಿಕ ಇಂಜನೀಯರಿಂಗ್ ಕಾಲೇಜುಗಳು, ಹಲವು ಐಟಿಐ ಕಾಲೇಜುಗಳು ಬೆಳಗಾವಿಯಲ್ಲಿವೆ.

 ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉದ್ಯೋಗ ಅರಸಿಕೊಂಡು ಬೇರೆ ಬೇರೆ ಜಿಲ್ಲೆ, ಅಥವಾ ರಾಜ್ಯಗಳಿಗೆ ಬದುಕು ಕಟ್ಟಿಕೊಳ್ಳಲು ವಲಸೆ ಹೋಗುತ್ತಿರುವುದು ಖೇದಕರ ಸಂಗತಿ. ಉತ್ತರ ಕರ್ನಾಟಕ ಅದರಲ್ಲೂ ಪ್ರಮುಖವಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು, ಐಟಿ ಕಂಪನಿಗಳನ್ನು ಸ್ಥಾಪಿಸಲು ಸರ್ಕಾರ ಹಿಂದೇಟು ಯಾಕೆ ಹಾಕುತ್ತಿದೆ ? ಇಲ್ಲಿನ ರಾಜಕಾರಣಿಗಳ ನಿರ್ಲಕ್ಷವೇ ? ಅಥವಾ ಬೇರೆ ಏನಾದರೂ ಕಾರಣವೇ ? ಎಂಬ ಪ್ರಶ್ನೆ ಇಲ್ಲಿಯ ಜನರನ್ನು ಕಾಡುತ್ತಿದೆ. ಐಟಿ ಕಂಪನಿಗಳು, ಕೈಗಾರಿಕೆಗಳು ಬರಲು ಹಿಂದೇಟು ಹಾಕಲು ಸರ್ಕಾರದ ಕೈಗಾರಿಕಾ ನೀತಿ ಕಾರಣ ಎಂಬುದು ಗಮನಾರ್ಹ ಅಂಶವಾಗಿದೆ. ಇನ್ನು ಮುಂದಾದರು ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಉತ್ತರ ಕರ್ನಾಟಕ ಪ್ರಮುಖವಾಗಿ ಬೆಳಗಾವಿಯತ್ತ ಗಮನ ಹರಿಸಲಿ ಎಂಬುದು ನಮ್ಮ ಆಶಯ....