ಖಾನಾಪುರಗೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ
ಬೆಳಗಾವಿ: ಇತ್ತೀಚೆಗೆ ಸುರಿದ ವ್ಯಾಪಕ ಮಳೆಯಿಂದಾಗಿ ಖಾನಾಪುರದಲ್ಲಿ ಹಾನಿಗೊಳಗಾಗಿರುವ ರಸ್ತೆ, ಸೇತುವೆಯನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪರಿಶೀಲಿಸಿದರು.
ಸೋಮವಾರ ಖಾನಾಪುರಕ್ಕೆ ಭೇಟಿ ನೀಡಿದ ಅವರು, ಮಳೆಯಿಂದಾಗಿರುವ ಹಾನಿಯ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಪೊಲೀಸ್ ತರಬೇತಿ ಶಾಲೆಗೂ ಭೇಟಿ ನೀಡಿದ ಅವರು ಮಲಪ್ರಭಾ ನದಿ ಹಾಗೂ ಸಮೀಪದ ಹಳ್ಳದ ನೀರಿನಿಂದ ತರಬೇತಿ ಶಾಲೆ ಜಲಾವೃತಗೊಂಡಿರುವುದನ್ನು ವೀಕ್ಷಿಸಿದರು.
ರಾಮನಗರ-ಲೋಂಡಾ ರಸ್ತೆ ತೀವ್ರ ಹಾನಿಗೊಳಗಾಗಿರುವ ಕುರಿತು ತಹಶೀಲ್ದಾರ ಅವರಿಂದ ಮಾಹಿತಿಯನ್ನು ಪಡೆದುಕೊಂಡರು. ಕೂಡಲೇ ಹೆದ್ದಾರಿ ವಿಭಾಗದ ಯೋಜನಾ ನಿರ್ದೇಶಕರ ಜತೆ ದೂರವಾಣಿ ಮೂಲಕ ಮಾತನಾಡಿದ ಜಿಲ್ಲಾಧಿಕಾರಿಗಳು, ರಸ್ತೆ ದುರಸ್ತಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಖಾನಾಪುರ ತಹಶೀಲ್ದಾರ ರೇಷ್ಮಾಬಾನು ತಾಳಿಕೋಟಿ, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.