Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪ್ರವಾಹದಿಂದ ಹಾನಿಗೊಳಗಾಗಿರುವ ಲೋಳಸೂರ ಸೇತುವೆ ಪರಿಶೀಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

localview news

ಗೋಕಾಕ: ಪ್ರವಾಹದಿಂದಾಗಿ ಹಾನಿಗೊಳಗಾಗಿರುವ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಸತೀಶ ಅವರು ಮಾಹಿತಿ ಪಡೆದರು. ಪ್ರವಾಹದಿಂದಾಗಿ ಸೇತುವೆ ಕೊಚ್ಚಿ ಹೋಗಿದೆ. ನೀರಿನ ರಭಸಕ್ಕೆ ಸೇತುವೆ ಬಿರುಕು ಬಿಟ್ಟಿದೆ. ನೀರಿನ ಮಟ್ಟ ಇಳಿದ ನಂತರ ಸೇತುವೆಗೆ ಏನಾಗಿದೆ ಎಂದು ಗೊತ್ತಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶಾಶ್ವತ ಪರಿಹಾರ ಕೈಗೊಳ್ಳಿ:
ಪ್ರತಿ ಬಾರಿ ಪ್ರವಾಹ ಉಂಟಾದಾಗಲು ಸೇತುವೆ ಮುಳುಗಡೆಯಾಗುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ತೀರ್ಮಾನ ಕೈಗೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಸತೀಶ ಜಾರಕಿಹೊಳಿ ಸೂಚಿಸಿದರು.

ಸಂಪೂರ್ಣ ಜಲಾವೃತ:
ಕಳೆದ ವಾರದ ಹಿಂದೆ ಪ್ರವಾಹ ಹಾಗೂ ಮಳೆಯಿಂದಾಗಿ ಲೋಳಸೂರ ಸೇತುವೆ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿದೆ. ಘಟಪ್ರಭಾ ನದಿಗೆ ಹಿರಣ್ಯಕೇಶಿ, ಮಾರ್ಕಂಡೇಯ ನದಿ ಮತ್ತು ಬಳ್ಳಾರಿ ನಾಲೆಯಿಂದ ಹಾಗೂ ಹಿಡಕಲ್ ಜಲಾಶಯದಿಂದ ಬಿಡಲಾಗಿದ್ದ ನೀರಿನಿಂದ ಸೇತುವೆ ಮುಳುಗಡೆಗೊಂಡಿದ್ದು, ಕಳೆದ 4 ದಿನಗಳಿಂದ ಮಳೆಯ ಪ್ರಮಾಣ ತಗ್ಗಿದ್ದರಿಂದ ನೀರಿನ ಮಟ್ಟ ಇಳಿಮುಖವಾಗಿದೆ.

ಮತ್ತೊಂದು ಸೇತುವೆ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿ:ನೀರಿನ ಪ್ರಮಾಣ ಕಡಿಮೆಯಾದರೆ ಕೆಳಗಿನ ಸೇತುವೆಯ ಮೂಲಕ ಸಂಚಾರಕ್ಕೆ ಅನುಕೂಲ ಕಲ್ಪಿಸಿ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಳಗಿನ ಸೇತುವೆಯ ಮೂಲಕ ಬೈಪಾಸ್ ರಸ್ತೆ ನಿರ್ಮಿಸಿ ಎಂದು ಸತೀಶ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ವೈ. ಪವಾರ, ಚಿಕ್ಕೋಡಿ ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್. ಪಾಟೀಲ, ಗೋಕಾಕ ಎಇಇ ಕೆ.ಪಿ. ನಾಗಾಭರಣ, ಗುತ್ತಿಗೆದಾರ ಬಸವಂತ ದಾಸನವರ, ಮುಖಂಡರಾದ ವಿವೇಕ ಜತ್ತಿ, ಶಿವು ಕಿಲಾರಿ, ರಿಯಾಜ್ ಚೌಗಲಾ, ಬಸವರಾಜ ಕೊಳಚಿ ಸೇರಿ ಇನ್ನಿತರರು ಇದ್ದರು.