Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಆಜಾದಿ ಕಾ ಅಮೃತ ಮಹೋತ್ಸವ; ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಜಿಲ್ಲಾಧಿಕಾರಿ ಭೇಟಿ

localview news

ಬೆಳಗಾವಿ:ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನಗರದಲ್ಲಿರುವ ಸ್ವಾತಂತ್ರ್ಯ ಯೋಧರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಸ್ವಾತಂತ್ರ್ಯ ಗಳಿಸಿ 75ನೇ ವರ್ಷದ ಸವಿನೆನಪಿಗಾಗಿ ದೇಶದಾದ್ಯಂತ ಮಾರ್ಚ್ 12 ರಿಂದ "ಸ್ವಾತಂತ್ರ್ಯದ ಅಮೃತ ಮಹೋತ್ಸವ" ವರ್ಷಾಚರಣೆ ಆರಂಭಗೊಂಡಿದೆ.

ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶದಾದ್ಯಂತ ಇರುವ ಎಲ್ಲ ಸ್ವಾತಂತ್ರ್ಯ ಯೋಧರ ಮನೆ ಮನೆಗಳಿಗೆ ತೆರಳಿ ಅವರಿಗೆ ಸರಕಾರದ ವತಿಯಿಂದ ಗೌರವ ಸಮರ್ಪಿಸಲಾಗುತ್ತಿದೆ.

ಈ ಕಾರ್ಯಕ್ರಮದ ಭಾಗವಾಗಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶನಿವಾರ ಬೆಳಗಾವಿ ನಗರದಲ್ಲಿರುವ ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಅವರನ್ನು ಸನ್ಮಾನಿಸಿದರು.ಮೊದಲಿಗೆ ಚೆನ್ನಮ್ಮ ನಗರದಲ್ಲಿರುವ ಸ್ವಾತಂತ್ರ್ಯ ಯೋಧ ಶತಾಯುಷಿ ರಾಜೇಂದ್ರ ಧರ್ಮಪ್ಪ ಕಲಘಟಗಿ ಅವರ ನಿವಾಸದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಗೌರವಿಸುವ ಸೌಭಾಗ್ಯ ನಮ್ಮದು ಎಂದರು.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಮಹನೀಯರ ಮನೆ ಮನೆಗೆ ತೆರಳಿ ಸನ್ಮಾನಿಸಲಾಗುತ್ತಿದೆ. ಈ ವೇಳೆ ಚಳವಳಿಯಲ್ಲಿ ಅವರು ಪಾಲ್ಗೊಂಡ ಕ್ಷಣಗಳನ್ನು ಮೆಲುಕು‌ ಹಾಕುವ ಮೂಲಕ ನಮಗೆ ಸ್ಫೂರ್ತಿಯಾಗಿದ್ದಾರೆ.ಇದರಿಂದ ಸ್ವಾತಂತ್ರ್ಯ ಯೋಧರ ಸಮಕಾಲೀನರ ಪರಿಚಯ ಮತ್ತು ಹೋರಾಟದ ರೂಪುರೇಷೆಗಳನ್ನು ತಿಳಿದುಕೊಳ್ಳುವ ಭಾಗ್ಯ ನಮಗೆ ಲಭಿಸಲಿದೆ.

ಶತಾಯುಷಿಯಾಗಿರುವ ರಾಜೇಂದ್ರ ಕಲಘಟಗಿ ಅವರು, ನಮಗೆ ಸ್ಫೂರ್ತಿ. ಅವರಿಗೆ ಭಗವಂತ ಆಯುರಾರೋಗ್ಯ ಕಲ್ಪಿಸಲಿ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾರೈಸಿದರು.

ಹೋರಾಟದ ಮೆಲುಕು; ಶತಾಯುಷಿ ದಿನಚರಿ ಚುರುಕು:

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಮೆಲುಕು ಹಾಕಿದ ಶತಾಯುಷಿ ರಾಜೇಂದ್ರ ಕಲಘಟಗಿ ಅವರು, ನನಗೆ ಈಗ 100 ವರ್ಷ ಪೂರೈಸಿ ಒಂಬತ್ತು ತಿಂಗಳು. ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುತ್ತೇನೆ. ತಪ್ಪದೇ ಯೋಗ, ಸಾವಿರ ಕಪಾಲಬಾತಿ, ಅನುಲೋಮ, ವಿಲೋಮ. ನಂತರ ಹಾಲು-ಬಿಸ್ಕಿಟ್ ಸೇವಿಸಿ ಮನೆ ಸಮೀಪದ ಉದ್ಯಾನದಲ್ಲಿ ಲಘು ವಾಕಿಂಗ್ ಮಾಡ್ತೇನಿ ಎಂದು ಲವಲವಿಕೆಯಿಂದ ವಿವರಿಸಿದರು.

ಪ್ರತಿದಿನ ಹದಿನಾರು ಮಾತ್ರೆಗಳನ್ನು ಸೇವಿಸುತ್ತೇನೆ. ನನಗೆ ಅಸ್ತಮಾ, ಶುಗರ್ ಇದ್ರೂ ಏನೂ ಸಮಸ್ಯೆಯಿಲ್ಲ. ಯೋಗ-ವ್ಯಾಯಾಮ ಮಾಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ.

1942 ರಲ್ಲಿ ಮಹಾತ್ಮಾ ಗಾಂಧೀಜಿ ಅವರು ಛಲೇಜಾವ್ ಚಳವಳಿಗೆ ಕರೆ ನೀಡಿದರು. ಆಗ ನನಗೆ ಕೇವಲ ಇಪ್ಪತ್ತೆರೆಡು ವಯಸ್ಸು. ಸ್ನೇಹಿತರ ಜತೆಗೂಡಿ ಅಂಚೆ ಡಬ್ಬಿ ಸುಡುವುದು; ರೈಲು ಕಂಬಿ ಕೀಳುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದೇವು.

ಮುಂಬೈನಿಂದ ಬರುತ್ತಿದ್ದ ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವಾಗ ಪೊಲೀಸರು ಬಂಧಿಸಿದರು. ಕ್ಯಾಂಪ್‌ ಪೊಲೀಸ್ ಠಾಣೆಗೆ ಕರೆದೊಯ್ದರು. ನಂತರ ಏಳು ತಿಂಗಳು ಜೈಲು ಶಿಕ್ಷೆಯಾಯಿತು ಎಂದು ಸ್ವಾತಂತ್ರ್ಯ ಹೋರಾಟದ ದಿನಗಳನ್ನು ಮೆಲುಕು ಹಾಕಿದರು.

ಸ್ವಾತಂತ್ರ್ಯದ ಸಂಭ್ರಮಕ್ಕೆ ಪಾರವೇ ಇರಲಿಲ್ಲ:

1947ರ ಆಗಸ್ಟ್ 14 ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ನಮ್ಮ ಸಂಭ್ರಮಕ್ಕೆ‌ ಪಾರವೇ ಇರಲಿಲ್ಲ; ಇಡೀ ರಾತ್ರಿ ಗುಲಾಲು ಎರಚಿ ಕುಣಿದು ಕುಪ್ಪಳಿಸಿದೇವು ಎಂದು ರಾಜೇಂದ್ರ ಕಲಘಟಗಿ ಅವರು ಜಿಲ್ಲಾಧಿಕಾರಿಗಳಿಗೆ ವಿವರಿಸುತ್ತ ಗತವೈಭವವನ್ನು ನೆನಪಿಸಿಕೊಂಡರು.

ಇದಾದ ಬಳಿಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಚನ್ನಮ್ಮ ನಗರದಲ್ಲಿ ಇರುವ ಟಿ.ಗುರುನಾಥ ರಾವ್ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಗೌರವಿಸಿದರು.ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ 98 ವರ್ಷದ ಟಿ. ಗುರುನಾಥ್ ರಾವ್ ಅವರಿಗೆ ಜಿಲ್ಲಾಧಿಕಾರಿಗಳು ಅಭಿನಂದಿಸಿದರು.

ನಂತರ ವಡಗಾವಿಯ ಸಮೃದ್ಧಿ ಕಾಲನಿಯಲ್ಲಿರುವ ಸ್ವಾತಂತ್ರ್ಯ ಯೋಧ ಗಂಗಾಧರ್ ರಾವ್ ವಿನಾಯಕ ಕಾಮತ ಅವರನ್ನು ಕೂಡ ಸನ್ಮಾನಿಸಲಾಯಿತು.ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅನೇಕ ವರ್ಷಗಳ ಕಾಲ ಜೈಲುವಾಸ ಅನುಭವಿಸಿರುವ 99 ವರ್ಷದ ಗಂಗಾಧರ್ ರಾವ್ ವಿನಾಯಕ ಕಾಮತ ಅವರನ್ನು ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರಲಿಂಗಣ್ಣವರ, ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಗಂಗಾಧರ್ ರಾವ್ ಅವರ ಬದುಕು ನಮಗೆ ಅನುಕರಣೀಯವಾಗಿದೆ ಎಂದರು.ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ಸನ್ಮಾನಿಸುವುದು ನಮ್ಮ ಭಾಗ್ಯ.ಭಗವಂತ ಅವರಿಗೆ ಆಯುರಾರೋಗ್ಯವನ್ನು ಕರುಣಿಸಲಿ. ಇಂತಹ‌ ಮಹನೀಯರ ಮಾರ್ಗದರ್ಶನ ನಮಗೆ ಮುಂದೆಯೂ ದೊರೆಯುವಂತಾಗಲಿ ಎಂದು ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಕೂಡ ಇಲಾಖೆಯ ಪರವಾಗಿ ಸ್ವಾತಂತ್ರ್ಯ ಯೋಧರನ್ನು ಗೌರವಿಸಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಬೆಳಗಾವಿ ತಹಶಿಲ್ದಾರ ಆರ್.ಕೆ.ಕುಲಕರ್ಣಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆಜಾದಿ ಕಾ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರ ಮನೆ ಮನೆಗೆ ತೆರಳಿ ಸನ್ಮಾನಿಸಿರುವುದಕ್ಕೆ ಕುಟುಂಬದ ಸದಸ್ಯರು ಸಂತಸವನ್ನು ವ್ಯಕ್ತಪಡಿಸಿದರು.ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಬಳಿಕ ಜಿಲ್ಲೆಯ ಎಲ್ಲ ತಾಲ್ಲೂಕಿನ ತಹಶೀಲ್ದಾರರು ಆಯಾ ತಾಲ್ಲೂಕಿನಲ್ಲಿರುವ ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಸನ್ಮಾನಿಸಲಿದ್ದಾರೆ.