Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ಜಿಲ್ಲೆಗೆ 3 ಲಕ್ಷ ಲಸಿಕೆ‌ ಗುರಿ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

localview news

ಬೆಳಗಾವಿ :ಸರಕಾರವು ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆಯನ್ನು ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಶುಕ್ರವಾರ(ಸೆ.17) ವಿಶೇಷ ಲಸಿಕಾಮೇಳ ಆಯೋಜಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಆ ಒಂದೇ ದಿನ ಮೂರು ಲಕ್ಷ ಜನರಿಗೆ ಲಸಿಕೆಗಳನ್ನು ನೀಡುವ ಗುರಿಯನ್ನು ನೀಡಲಾಗಿದೆ.

ಈ ಗುರಿಸಾಧನೆ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಲಸಿಕಾ ಮೇಳದ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜತೆ ಬುಧವಾರ ನಡೆದ ವೀಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಗೆ ಅತೀ ಹೆಚ್ಚಿನ ಗುರಿ ನಿಗದಿಪಡಿಸಲಾಗಿದೆ.

ಈ ಹಿಂದೆ ನಡೆದಿರುವ ವಿಶೇಷ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಒಂದು ಲಕ್ಷ ಲಸಿಕೆ ನೀಡಿರುವುದು ಇಡೀ ರಾಜ್ಯದ ಗಮನ ಸೆಳೆದಿತ್ತು. ಈ ಬಾರಿ ಮೂರು ಲಕ್ಷ ಲಸಿಕೆಗಳನ್ನು ನೀಡುವ ಗುರಿಯನ್ನು ಸಾಧಿಸಲು ಅಗತ್ಯ ತಂಡಗಳ ರಚನೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಲಸಿಕೆ ನೀಡಬೇಕು. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ‌ ನೀಡಲಾಗುವುದು. ಅದೇ ರೀತಿ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಹಾಗೂ ನಗರದ ಪ್ರದೇಶಗಳಲ್ಲಿ ವಾರ್ಡುಗಳ ಮಟ್ಟದಲ್ಲಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಿ ಲಸಿಕೆ ಪಡೆಯಲು ಜನರಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಬಿಮ್ಸ್, ಕೆ.ಎಲ್.ಇ. ಸೇರಿದಂತೆ ಪ್ರಮುಖ ಆಸ್ಪತ್ರೆಗಳ ನರ್ಸ್ ಗಳನ್ನು ಲಸಿಕಾ ಮೇಳಕ್ಕೆ ಪಡೆದುಕೊಳ್ಳಲಾಗುತ್ತಿದೆ. ಅದೇ ರೀತಿ ತಾಲ್ಲೂಕು ಕೇಂದ್ರಗಳಲ್ಲಿ ಕೂಡ ಖಾಸಗಿ ಆಸ್ಪತ್ರೆಗಳ ಜತೆ ಚರ್ಚೆ ನಡೆಸಿ ನರ್ಸಿಂಗ್ ಸಿಬ್ಬಂದಿ ಸಹಕಾರ ಪಡೆದುಕೊಳ್ಳಬೇಕು. ಲಸಿಕೆ ನೀಡಿದ ಕೂಡಲೇ ಮಾಹಿತಿಯನ್ನು ಎಂಟ್ರಿ ಮಾಡಬೇಕು. ಪಾಲಕರು, ಅಲ್ಪಸಂಖ್ಯಾತ ಸಮುದಾಯದವರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು.

ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರು ಹಾಗೂ ಅತೀ ಚಿಕ್ಕ‌ ಗ್ರಾಮಗಳ ಜನರಿಗೆ ಮೊಬೈಲ್ ಲಸಿಕಾ ವಾಹನಗಳ ಮೂಲಕ ಲಸಿಕೆ ನೀಡಬೇಕು. ಲಸಿಕಾ ಮೇಳ ಹೆಚ್ಚಿನ ಪ್ರಚಾರದ ಜತೆಗೆ ಲಸಿಕೆ ನೀಡಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಲಸಿಕೆ ನೀಡಿರುವ ಕುರಿತ ಮಾಹಿತಿಯನ್ನು ತಕ್ಷಣವೇ ಅಪ್ ಲೋಡ್ ಮಾಡಬೇಕು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಇರುವ ಲಸಿಕಾ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪತ್ರಿಕೆ, ಟಿವಿ ಚಾನೆಲ್ ಹಾಗೂ ಸ್ಥಳೀಯ ಕೇಬಲ್ ಗಳ ಮೂಲಕ ಪ್ರಚಾರಪಡಿಸುವ ಮೂಲಕ ಜನರಿಗೆ ಮುಂಚಿತವಾಗಿ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಶಿಕ್ಷಣ ಇಲಾಖೆಯ ಶಿಕ್ಷಕರನ್ನು ಕೂಡ ಮಾಹಿತಿ ಅಪ್ ಲೋಡ್ ಮಾಡಲು‌ ಬಳಸಿಕೊಳ್ಳಬೇಕು. ಆರೋಗ್ಯ ಇಲಾಖೆ‌ ಮಾತ್ರವಲ್ಲ; ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಲಸಿಕಾ ಮೇಳದಲ್ಲಿ ಭಾಗವಹಿಸುವ ಮೂಲಕ ಒಟ್ಟಾರೆ ಮೇಳವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕು.

ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರು ಲಸಿಕೆ ಮೇಳದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿ‌ ಅವರನ್ನು ಮೇಳಕ್ಕೆ ಕರೆದುಕೊಂಡು ಬಂದು ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು.

ಲಸಿಕಾ‌ ತಂಡಗಳ ಪಟ್ಟಿ ಸಿದ್ಧಪಡಿಸಲು ಸೂಚನೆ:

ಜಿಲ್ಲೆಯ ಪ್ರತಿ ಲಸಿಕಾ ಕೇಂದ್ರಗಳು ಹಾಗೂ ಆಯಾ ಕೇಂದ್ರಕ್ಕೆ ನಿಯೋಜಿತ ತಂಡಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲಸಿಕಾ ತಂಡಗಳಿಗೆ ಅಗತ್ಯ ಸಾರಿಗೆ ಮತ್ತು ಊಟೋಪಾಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ಸ್ಥಳೀಯ ಹಾಲಿ-ಮಾಜಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು ಪ್ರತಿಯೊಬ್ಬರಿಗೂ ಲಸಿಕೆಯನ್ನು ನೀಡಲು ಸಿದ್ಧತೆಗಳನ್ನು ‌ಮಾಡಿಕೊಳ್ಳಬೇಕು. ಈಗಾಗಲೇ ‌ನಡೆದಿರುವ ಲಸಿಕೆ ಮೇಳದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಈ ಬಾರಿ 3 ಲಕ್ಷಕ್ಕೂ ಅಧಿಕ ಗುರಿ‌ ನಿಗದಿಪಡಿಸಲಾಗಿರುವುದರಿಂದ ಗುರಿಗೆ ತಕ್ಕಂತೆ ಅಗತ್ಯ ತಂಡಗಳನ್ನು ನಿಯೋಜಿಸಬೇಕಿದೆ.

ಲಸಿಕಾ ಮೇಳಕ್ಕೆ ನಿಯೋಜಿತ ಪ್ರತಿಯೊಬ್ಬರೂ ಸರಿಯಾದ ಸಮಯಕ್ಕೆ ನಿಗದಿತ ಸ್ಥಳದಲ್ಲಿ ಇರಬೇಕು. ಲಸಿಕಾ ಕೇಂದ್ರಗಳಲ್ಲಿ ಲಭ್ಯವಿರುವ ‌ಲಸಿಕೆ ಹಾಗೂ ಜನರನ್ನು ಆಧರಿಸಿ ಅಕ್ಕಪಕ್ಕದ ಕೇಂದ್ರಗಳ ಜತೆ ಸಮನ್ವಯ ಸಾಧಿಸಿಕೊಂಡು ಯಾವುದೇ ವ್ಯಕ್ತಿಯು ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ಸೂಚನೆ ನೀಡಿದರು. ಎಲ್ಲರಿಗೂ ಲಸಿಕೆ ನೀಡಬೇಕು ಎಂಬ ಮಹತ್ವಕಾಂಕ್ಷೆಯೊಂದಿಗೆ ಸರಕಾರವು ಲಸಿಕಾಮೇಳ ಆಯೋಜಿಸಿದೆ. ಆದ್ದರಿಂದ ಜಿಲ್ಲೆಯ ಎಲ್ಲ ನಾಗರಿಕರು ಕೋವಿಡ್ ಲಸಿಕೆಯನ್ನು ಪಡೆಯುವ ಮೂಲಕ ವಿಶೇಷ ಲಸಿಕಾ ಮೇಳವನ್ನು ಯಶಸಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಮಾಡಿಕೊಂಡರು.

ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ‌ ನಿರ್ದೇಶಕ ಈಶ್ವರ್ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೆಕರ, ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ‌ ಕೊಳ್ಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ, ತಹಶಿಲ್ದಾರ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.