ನೇಕಾರ ಸಮ್ಮಾನ್ ಯೋಜನೆಯಡಿ ನೇಕಾರರಿಗೆ 2000 ಆರ್ಥಿಕ ನೆರವು
ಬೆಂಗಳೂರು: ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಚಾಲನೆ ನೀಡಿದರು. ಹತ್ತಿ ಹಾಗೂ ಉಣ್ಣೆ, ರೇಷ್ಮೆ ವಲಯದ ಕೈಮಗ್ಗ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಕೈಮಗ್ಗ ನೇಕಾರರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ನೇಕಾರ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿ ವರ್ಷ 10.96 ಕೋಟಿ ರೂ. ವೆಚ್ಚವಾಗಲಿದೆ. ಹಾಗೂ ಮೊದಲನೇ ಹಂತದಲ್ಲಿ 19,744 ಕೈಮಗ್ಗ ನೇಕಾರರಿಗೆ 2,000 ರುಪಾಯಿಗಳ ವಾರ್ಷಿಕ ಆರ್ಥಿಕ ನೆರವನ್ನು ನಗದು ವರ್ಗಾವಣೆ ಮಾಡುವ ಮುಖಾಂತರ ಪ್ರತಿ ನೇಕಾರರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.
37,314 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. 40,634 ಕೈಮಗ್ಗ ನೇಕಾರರು ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇನ್ನುಳಿದ ಅರ್ಹ ಫಲಾನುಭವಿಗಳಿಗೂ ಮುಂದಿನ ದಿನಗಳಲ್ಲಿ ಆರ್ಥಿಕ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ಕೈಮಗ್ಗ ಮತ್ತು ಜವಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.