Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿಶೇಷ ಪೂಜೆ ಸಲ್ಲಿಸಿದ ಬಳಿಕ ದರ್ಶನ ಆರಂಭ; ಕೋವಿಡ್ ಮಾರ್ಗಸೂಚಿ ಪಾಲನೆಗೆ ಜಿಲ್ಲಾಧಿಕಾರಿ ಹಿರೇಮಠ ಸೂಚನೆ

localview news

ಬೆಳಗಾವಿ:ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರದಿಂದ ದೇವಿ ದರ್ಶನಕ್ಕೆ ಭಕ್ತರಿಗೆ ಅನುಮತಿ ನೀಡಲಾಯಿತು.

ಮಂಗಳವಾರ ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು, ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ಯಲ್ಲಮ್ಮ ದೇಗುಲದ ಬಾಗಿಲು ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಬಳಿಕ, ಇಡೀ ದೇವಸ್ಥಾನದ ಆವರಣದಲ್ಲಿ ಕೈಗೊಂಡ ಸಿದ್ಧತೆಗಳನ್ನು ಆನಂದ ಮಾಮನಿ ಹಾಗೂ ಎಂ.ಜಿ. ಹಿರೇಮಠ ಪರಿಶೀಲಿಸಿದರು.

18 ತಿಂಗಳ ನಂತರ ದೇವಸ್ಥಾನ ಆರಂಭಗೊಳ್ಳುತ್ತಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಿರ್ಬಂಧ ಸಡಿಲಿಕೆಯಾದ‌ ಮೊದಲ ದಿನವೇ ಯಲ್ಲಮ್ಮ ದೇಗುಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ದೇವಸ್ಥಾನಕ್ಕೆ ಬಂದ ಪ್ರತಿಯೊಬ್ಬ ಭಕ್ತರನ್ನು ಥರ್ಮಲ್ ಸ್ಕ್ರೀನಿಂಗ್.ಗೆ ಒಳಪಡಿಸಲಾಯಿತು. ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ದೈಹಿಕ ಅಂತರ ಕಾಯ್ದುಕೊಂಡು ಯಲ್ಲಮ್ಮ ದೇವಿಯ ದರ್ಶನ ಪಡೆಯುವಂತೆ ಜಾಗೃತಿ ಮೂಡಿಸಲಾಯಿತು.

ಈ ವೇಳೆ‌, ಪತ್ರಕರ್ತರೊಂದಿಗೆ ಮಾತನಾಡಿದ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ, ಕೋವಿಡ್-19 ಹಾವಳಿ ತಗ್ಗಿದ್ದರಿಂದ ಯಲ್ಲಮ್ಮ‌ ದೇವಿ ದೇವಸ್ಥಾನ ಸಾರ್ವಜನಿಕ ದರ್ಶನಕ್ಕೆ ಮುಕ್ತವಾಗಿದೆ. ಆದರೆ,‌ ಭಕ್ತರು ಮೈ ಮರೆಯಬಾರದು. ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ನೀಡುವ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೋರಿದರು.

ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯು ಸಿಎಂ ಬಸವರಾಜ ಬೊಮ್ಮಾಯಿ ಅವರ ಕುಲದೇವತೆ. ಯಲ್ಲಮ್ಮನಗುಡ್ಡ ಅಭಿವೃದ್ಧಿ ಸಂಬಂಧ ಅವರೊಂದಿಗೆ ಚರ್ಚಿಸಿರುವೆ. ಆರ್ಥಿಕ ಲಭ್ಯತೆ ಗಮನಿಸಿ, ಈ ದೇವಸ್ಥಾನವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಸಹಕರಿಸುವುದಾಗಿ ಅವರು ತಿಳಿಸಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.0.3 ಇದೆ. ಶೇ.81 ಜನರಿಗೆ ಲಸಿಕಾಕರಣವಾಗಿದೆ. ಹಾಗಾಗಿ ಅಗತ್ಯ ಸುರಕ್ಷತಾ ಕ್ರಮ‌ ಕೈಗೊಂಡು ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿ ಸ್ಯಾನಿಟೈಸರ್ ಬಳಕೆಗೆ ಒತ್ತು ನೀಡಬೇಕು. ಜನಸಂದಣಿ ಹೆಚ್ಚದಂತೆ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೆಚ್ಚಿನ ಪೊಲೀಸರನ್ನು ನಿಯೋಜಿಸುವ ಸಂಬಂಧ ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ತಹಶೀಲ್ದಾರ ಮಹೇಶ ಪಾಟೀಲ, ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ, ಡಾ, ಮಹೇಶ ಚಿತ್ತರಗಿ, ಅಭಿಯಂತರ ಎ ವಿ ಮೂಳ್ಳೂರ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಕೋಳ್ಳಪ್ಪಗೌಡ ಗಂದಿಗವಡ, ರಮೇಶ ಗೊಮಡಿ, ಕೆ ಜಿ ತಲ್ಲೂರಮಠ,ಯಲ್ಲಪ್ಪ ಕಾಳಪ್ಪನವರ, ಸುನೀಲ ಪೂಜಾರಿ, ಡಿ ಎನ್ ಜಾದವ, ಪುಂಡಲೀಕ ಮೇಟಿ, ಬಸವರಾಜ ಜಿರಗ್ಯಾಳ, ನಾಗರತ್ನಾ ಚೋಳಿನ, ಲಕ್ಷ್ಮೀ ಹೂಲಿ, ಅಣ್ಣಪೂರ್ಣಾ ತೆಲಗಿ, ಅರವಿಂದ್ರ ಮಳಗೆ, ಅಲ್ಲಮಪ್ರಭು ಪ್ರಭುನವರ, ಆರ್ ಎಚ್ ಸವದತ್ತಿ, ಸದಂದ ಈಟಿ, ಮಲ್ಲಯ್ಯ ತೋರಗಲ್‍ಮಠ, ದೀಪಕ ಜಾಣ್ವೇಕರ, ಸಿಪಿಆಯ್ ಮಂಜುನಾಥ ನಡುವಿನಮನಿ, ಪಿಎಸ್ ಆಯ್ ಶಿವಾನಂದ ಗುಡನಟ್ಟಿ. ಮಾರುತಿ ಬಾರಕೆರ, ವಾಯ್ ಎಮ್ ಡಾವಣಗೇರಿ,(ಗಂದಿಗವಾಡ),ವಿ ಪಿ ಲಿಂಗರುಷಿ, ಯಲ್ಲಪ್ಪಗೌಡ ಗಂದಿಗವಾಡ ಬಸಪ್ಪ ಶಿದ್ದಕ್ಕನವರ, ವಿರುಪಾಕ್ಷ ಬೆವಿನಗಿಡದ, ಉಮೇಶ ಬಡೋಮೆ ಹಾಗೂ ಭಕ್ತರು ಇದ್ದರು.