Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದಲಿತ ಸಮುದಾಯದ ಸಮಸ್ಯೆಗಳ ನಿವಾರಣೆಗೆ ಕ್ರಮ: ಜಿಲ್ಲಾಧಿಕಾರಿ ಎಂ. ಜಿ.ಹಿರೇಮಠ

localview news

ಬೆಳಗಾವಿ:ದಲಿತ ಸಮುದಾಯದ ಜನರಿಗೆ ಅನುಕೂಲವಾಗುವಂತೆ ಸ್ಮಶಾನ ಭೂಮಿ, ಬ್ಯಾಂಕ್ ಸಾಲ, ವಿದ್ಯಾರ್ಥಿ ವೇತನ ಮತ್ತಿತರ ಸರಕಾರಿ ಸೌಲಭ್ಯಗಳನ್ನು ಒದಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಅನುಸೂಚಿತ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ ಅನ್ವಯ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವ್ಯಾಪಾರ ಮಳಿಗೆ, ಅಂಬೇಡ್ಕರ್ ಭವನ ಸೇರಿದಂತೆ ಇನ್ನಿತರ ಕಟ್ಟಡವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ, ಸುಮಾರು 72 ಗ್ರಾಮಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ತಿಳಿಸಿದರು.

ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಕೋವಿಡ್-19 ಕಾರಣದಿಂದ ಹಲವಾರು ರೀತಿಯ ತೊಂದರೆಯಾಗುತ್ತಿದ್ದು, ಈಗ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಆದ ಕಾರಣ ಸರ್ಕಾರವು ನಿರ್ಬಂಧವನ್ನು ತೆರವುಗೊಳಿಸಿ, ಕೇವಲ ವಾರದ ರಜಾ ದಿನಗಳಲ್ಲಿ ಮಾತ್ರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ವೀರ ಮದಕರಿ ವೃತ್ತ-ನಾಮಕರಣಕ್ಕೆ ಕ್ರಮ:

ಆರ್.ಪಿ.ಡಿ. ವೃತ್ತಕ್ಕೆ ವೀರ ಮದಕರಿ ನಾಯಕ ವೃತ್ತ ಎಂದು ನಾಮಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿ ಪ್ರಕಾರ ಪ್ರಕ್ರಿಯೆಯನ್ನು ಆರಂಭಿಸಲಾಗುವದು ಜೊತೆಗೆ ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಖರೀದಿಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಸಮಿತಿಯ ಸದಸ್ಯರಾಗಿರುವ ವಿಜಯ ತಳವಾರ ಅವರು, ದಲಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಕೆಲವೊಂದು ವಿಷಯಗಳು ಸಭೆಯಲ್ಲಿ ಚರ್ಚೆಗೆ ಸೀಮಿತವಾಗುತ್ತಿದ್ದು, ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಮರ್ಪಕ ತನಿಖೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಮುಂದಿನ ದೌರ್ಜನ್ಯ ತಡೆ ಸಮಿತಿ ಸಭೆಗೆ ಎಲ್ಲ ಅಧಿಕಾರಿಗಳು ಭಾಗವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೋವಿಡ್ ಮರಣ-1.50 ಲಕ್ಷ ಪರಿಹಾರ:

ಕೋವಿಡ್ ನಿಂದ ಮರಣ ಹೊಂದಿರುವ ಬಿಪಿಎಲ್ ಕಾರ್ಡು ಹೊಂದಿರುವ ವ್ಯಕ್ತಿಗಳ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ಒಂದು ಲಕ್ಷ ರೂಪಾಯಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ 50 ಸಾವಿರ ರೂಪಾಯಿ ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬ್ಯಾಂಕ್, ಮೈಕ್ರೊಫೈನಾನ್ಸ್ ಹಾಗೂ ಹಣಕಾಸು ಸಂಸ್ಥೆಗಳ ಜೊತೆಗೆ ಸಭೆ ನಡೆಸಲಾಗಿದ್ದು, ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಬಾರದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಸರ್ಕಾರದಿಂದ 2272 ವಿದ್ಯಾರ್ಥಿಗಳ ಖಾತೆಯಲ್ಲಿ ವಿದ್ಯಾರ್ಥಿ ವೇತನ ಜಮೆಯಾಗಿದ್ದು, ಇನ್ನೂ ಉಳಿದಂತಹ ವಿದ್ಯಾರ್ಥಿಗಳ ವೇತನವನ್ನು ವಿಳಂಬವಾಗದಂತೆ ಕೂಡಲೇ ಅಧಿಕಾರಿಗಳು ಈ ಕುರಿತು ಜಾಗೃತಿ ವಹಿಸಿ ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವಿದ್ಯಾರ್ಥಿ ವೇತನ ವರ್ಗಾವಣೆ ಮಾಡಬೇಕು ಎಂದು ತಿಳಿಸಿದರು.

ಅಕ್ರಮ ಮನೆಗಳ ಸಕ್ರಮಕ್ಕೆ‌ ಒತ್ತಾಯ:

30 ರಿಂದ 40 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಗಾಯರಾಣ ಜಮೀನಿನಲ್ಲಿ ಕಟ್ಟಲಾಗಿರುವ ಮನೆಗಳನ್ನು ಸಕ್ರಮ ಮಾಡಿಕೊಡಬೇಕು ಎಂದು ಜಾಗೃತ ಸಮಿತಿ ಸದಸ್ಯ ಅಶೋಕಕುಮಾರ್ ಅಸೋದೆ ಒತ್ತಾಯಿಸಿದರು.

ಸದ್ಯಕ್ಕಿರುವ ನಿಯಮಾವಳಿ ಪ್ರಕಾರ ಸಾಮೂದಾಹಿಕ ಹಕ್ಕು ಇರುವ ಗಾಯರಾಣ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಮನೆಗಳ ಸಕ್ರಮಕ್ಕೆ ಅವಕಾಶವಿರುವುದಿಲ್ಲ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ತಿಳಿಸಿದರು.

ಗ್ರಾಮಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಮನೆಗಳಿಗೆ ‌ವಿದ್ಯುತ್ ಮತ್ತಿತರ ಸೌಲಭ್ಯ ಒದಗಿಸುವುದರ ಜತೆಗೆ ಅಂತಹ ಮನೆಗಳ ಸಕ್ರಮಕ್ಕೆ ಅವಕಾಶವಿದೆ. ಅನೇಕ ವರ್ಷಗಳ ಹಿಂದೆ ನಿರ್ಮಿಸಿರುವ ಅಂತಹ ಮನೆಗಳ ಸಕ್ರಮಕ್ಕೆ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಸೂಕ್ತವಾದ ಕಟ್ಟಡ ನಿರ್ಮಿಸಲಾಗಿರುತ್ತದೆ. ಇದರಿಂದ ಜನಸಾಮಾನ್ಯರಿಗೆ ಹಾಗೂ ದಲಿತ ಸಮಾಜದವರಿಗೆ ಭವಿಷ್ಯದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಕಸ ವಿಲೇವಾರಿ ಮಾಡುವುದರಿಂದ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ ಹೆಚ್.ವಿ ತಿಳಿಸಿದರು.

ಸಮಿತಿಯ ಸದಸ್ಯ ಅಣ್ಣಾಸಾಹೇಬ್ ಹಂಚಿನಮನಿ, ಅಶೋಕ ಕುಮಾರ್ ಅಸೋದೆ ಹಾಗೂ ವಿಜಯ ತಳವಾರ ಅವರು ಸ್ಮಶಾನಭೂಮಿ ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಗರ ಉಪ ಪೊಲೀಸ್ ಆಯುಕ್ತ ಡಾ.ವಿಕ್ರಮ ಆಮಟೆ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ವಿವಿಧ ಸಂಘಟನೆಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.